ನಿಮ್ಮ ಗ್ಯಾರಂಟಿ ಯೋಜನೆಗಾಗಿ ರೈತರ ಬದುಕು ಬಲಿ ಕೊಡಬೇಡಿ-ಕಾಂಗ್ರೆಸ್ ವಿರುದ್ಧ ರೇವಣ್ಣ ಕಿಡಿ
ಹಾಸನ, ಸೆಪ್ಟೆಂಬರ್ 12: ಹಾಸನ ಜಿಲ್ಲೆಯ ರೈತರು ಕಷ್ಟದಲ್ಲಿದ್ದಾರೆ. ನಿಮ್ಮ ಗ್ಯಾರಂಟಿ ಯೋಜನೆಗಾಗಿ ರೈತರ ಬದುಕು ಬಲಿ ಕೊಡಬೇಡಿ. ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಸರ್ಕಾರ ಬರಬೇಕು ಎಂದು ಮಾಜಿ ಸಚಿವ ಎಚ್.ಡಿ ರೇವಣ್ಣ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಕ್ಷೇತ್ರದ ಹಲವು ಗ್ರಾಮಗಳಿಗೆ ನಾಲೆ ನೀರು ತಲುಪಿಲ್ಲ. ತುಮಕೂರಿಗೆ ಎರಡು ತಿಂಗಳಿಂದ ನೀರು ಬಿಟ್ಟುಕೊಂಡಿದ್ದಾರೆ ಬಿಡಲಿ. ಅವರು ಎರಡೆರಡು ಬೆಳೆ ಮಾಡಿದ್ದಾರೆ. ಇದು ಸಂತೋಷ ನಾನೇನು ಬೇಡ ಅನ್ನಲ್ಲ. ಆದರೆ ಹಾಸನದ ರೈತರ ಬೆಳೆಗೆ ನೀರು ಕೊಟ್ಟಿಲ್ಲ ಎಂದು ಪರೋಕ್ಷವಾಗಿ ಉಸ್ತುವಾರಿ ಸಚಿವ ರಾಜಣ್ಣ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ನಮ್ಮ ಕಟ್ಟಾಯ ಹೋಬಳಿಯಲ್ಲಿ ಜೆಡಿಎಸ್‌ಗೆ ಜಾಸ್ತಿ ಮತ ಹಾಕಿದಾರೆ ಎಂದು ನೀರಿಲ್ಲ. ಲಿಫ್ಟ್ ಇರಿಗೇಷನ್‌ನಲ್ಲಿ ನೀರು ಬಿಡಬೇಡಿ ಅಂತಾರೆ. ಬೇಕಾದ ಕಡೆಗೆ ನೀರು ಬಿಡುತ್ತಾರೆ. ಹೇಳೋರು ಕೇಳೋರು ಯಾರು ಇಲ್ಲ ಇಲ್ಲಿ. ಇದರಲ್ಲೂ ರಾಜಕೀಯ. ಅಧಿಕಾರಿಗಳನ್ನು ಕೇಳಿದರೆ ಏನು ಮಾಹಿತಿ ಕೊಡಬೇಡಿ ಅಂತಾರೆ. ಎಲ್ಲಿಗೆ ನೀರು ಬಿಟ್ಟಿದ್ದೇವೆ ಅಂತಾ ಹೇಳಬೇಡಿ ಅಂತಾರೆ ಎಂದು ಜಿಲ್ಲಾಡಳಿತದ ವಿರುದ್ಧ ರೇವಣ್ಣ ಕಿಡಿಕಾರಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೆ ಇವರಿಗ್ಯಾಕೆ ತೊಂದರೆ. ಬಿಜೆಪಿ ಜೊತೆ ಮೈತ್ರಿ ಆಗುತ್ತೇವೋ ಅಥವಾ ಯಾರ ಜೊತೆ ಮೈತ್ರಿ ಆಗುತ್ತೇವೋ, ಇವರಿಗೇನು ಖಾಯಿಲೆ. ಬೇರೆ ರಾಷ್ಟ್ರೀಯ ಪಕ್ಷಕ್ಕೆ ಏನು ಅಂತಾ ಕೇಳುತ್ತೇನೆ. ನಾವು ಐದು ಗ್ಯಾರಂಟಿ ಕೊಟ್ಟಿದ್ದೇವೆ, ದೇವೇಗೌಡರು, ಕುಮಾರಸ್ವಾಮಿ ಬಿಜೆಪಿ ಒಂದಾದರೂ ನಾವೇನು ಹೆದರಲ್ಲಾ ಅಂತಾ ಹೇಳಬೇಕು.
ಒಂದು ಕಡೆ ಕೋಮುವಾದಿಗಳನ್ನು ದೂರ ಇಡಬೇಕು ಅಂತಾರೆ. ಇನ್ನೊಂದು ಕಡೆ ಕೋಮುವಾದಿಗಳನ್ನು ದೂರ ಇಟ್ಟ ಪ್ರಾದೇಶಿಕ ಪಕ್ಷವನ್ನು ಮುಗಿಸಬೇಕು ಅಂತಾರೆ, ಎ ಟೀಂ, ಬೀ ಟಿಂ ಅಂತಾ ಹೇಳಿದ್ದರು. ಆ ಬೀ ಟೀಂನ ಪಾದಕ್ಕೆ ಬಿದ್ದು, ನಿಮ್ಮ ಪಾದಗಳಲ್ಲಿ ಐದು ವರ್ಷ ಇರುತ್ತೇವೆ ಎಂದು ಹೇಳಿ, 14 ತಿಂಗಳಲ್ಲಿ ಕುಮಾರಣ್ಣನನ್ನು ಮನೆಗೆ ಕಳುಹಿಸಿದ್ರಾಲ್ಲಾರೀ. 2018ರಲ್ಲಿ ಬಿ ಟೀಂ ಮನೆ ಹತ್ತಿರ ಯಾಕೆ ಬಂದ್ರಿ ನೀವು. ಎಲ್ಲಾ ಭಾಗ್ಯಗಳನ್ನು ಕೊಟ್ಟು 120 ರಿಂದ 70ಕ್ಕೆ ಯಾಕೆ ಬಂದ್ರಿ ಎಂದು ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದರು.
ಈ ಜಿಲ್ಲೆಯೊಳಗಿರಬಹುದು, ಈ ರಾಜ್ಯದೊಳಗಿರಬಹುದು. ಅಲ್ಪಸಂಖ್ಯಾತರಿಗೆ ಯಾವುದೇ ಟೀಂನಲ್ಲಿದ್ರೂ ಅವರ ಜೊತೆ ದೃಢವಾಗಿ ನಿಲ್ಲೋ ಶಕ್ತಿ ನಮಗಿದೆ. ಯಾವ ಕಾರಣಕ್ಕೂ ಅವರನ್ನು ಕೈಬಿಡುವ ಪ್ರಶ್ನೆನೇ ಇಲ್ಲ. ರಾಜ್ಯಾಧ್ಯಕ್ಷರು ಇಬ್ರಾಹಿಂ ಅವರೇ ಇದ್ದಾರೆ. ಇಡೀ ರಾಷ್ಟ್ರದಲ್ಲಿ ಮುಸಲ್ಮಾರಿಗೆ ಮೀಸಲಾತಿ ಕೊಟ್ಟಿದ್ದು ಯಾರು..? ದೇವೇಗೌಡರೇ ಬರಬೇಕಾಯ್ತು ಎಂದು ಹೇಳಿದರು.












Click it and Unblock the Notifications