ಕರಿ ಮಣಿ ಮಾಲೀಕ ನೀನಲ್ಲ: ಹಾಸನದಲ್ಲಿ ತಾಳಿ ಕಟ್ಟುವ ಸಮಯಕ್ಕೆ ಮುರಿದು ಬಿದ್ದ ಮದುವೆ, ಆಗಿದ್ದೇನು..?
ಹಾಸನ, ಮಾರ್ಚ್ 21: ತಾಳಿ ಕಟ್ಟುವ ವೇಳೆ ಸಿನಿಮಾ ಶೈಲಿಯಲ್ಲಿ ಮದುವೆ ಮುರಿದು ಬಿದ್ದ ಘಟನೆ ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ನಡೆದದಿದೆ. ವಧುವಿನ ಪ್ರಿಯಕರನ ಆಗಮನದಿಂದ ಇಂದು ಬೇಲೂರಿನ ಒಕ್ಕಲಿಗರ ಸಂಘದಲ್ಲಿ ನಡೆಯಬೇಕಿದ್ದ ಮದುವೆ ರದ್ದಾಗಿದೆ.
ಬೇಲೂರಿನ ಯುವತಿ ಜೊತೆ ಶಿವಮೊಗ್ಗ ಮೂಲದ ಯುವಕ ಮದುವೆ ನಿಶ್ಚಯವಾಗಿತ್ತು. ಈ ಮದುವೆಯನ್ನು ಗುರು-ಹಿರಿಯರು ನಿಶ್ಚಯಿಸಿದ್ದು, ಇಂದು (ಮಾರ್ಚ್ 21) ಬೇಲೂರಿನ ಒಕ್ಕಲಿಗರ ಸಂಘ ಸಭಾವನದಲ್ಲಿ ಮದುವೆ ಆಯೋಜನೆಗೊಂಡಿತ್ತು. ಮದುವೆ ಶಾಸ್ತ್ರಗಳು ಎಲ್ಲಾ ಮುಗಿದು ಇನ್ನೇನು ತಾಳಿ ಕಟ್ಟುವ ಶಾಸ್ತ್ರ ನಡೆಯಬೇಕಿತ್ತು. ಈ ವೇಳೆ ಬಂದ ಹಾಸನ ಹೊರವಲಯ ಗವೇನಹಳ್ಳಿಯ ಮೂಲದ ಯುವಕ ನವೀನ್ ಮದುವೆ ರದ್ದಾಗುವಂತೆ ಮಾಡಿದ್ದಾನೆ.

ತಾಳಿ ಕಟ್ಟುವ ವೇಳೆ ಕಲ್ಯಾಣಮಂಟಪಕ್ಕೆ ಬಂದು ಮದುವೆಗೆ ಅಡ್ಡಿಪಡಿಸಿದ ನವೀನ್ ತಾಳಿ ಕಿತ್ತುಕೊಂಡು ಈಕೆ ನನ್ನನ್ನು ಪ್ರೀತಿಸುತ್ತಿದ್ದಾಳೆ. ನನ್ನ ಜೊತೆ ಮದುವೆ ಮಾಡಿ ಎಂದು ಪಟ್ಟು ಹಿಡಿದಿದ್ದಾನೆ. ನವೀನ್ ಆಗಮನ ಹಾಗೂ ಆತನ ಮಾತುಗಳಿಂದ ಕಲ್ಯಾಣ ಮಂಟಪದಲ್ಲಿ ಕೆಲಕಾಲ ಗೊಂದಲ ನಿರ್ಮಾಣವಾಗಿತ್ತು.
ಈ ವೇಳೆ ಮಧ್ಯ ಪ್ರವೇಶಿಸಿದ ಬೇಲೂರು ಪೊಲೀಸರು ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮದುವೆಯಾಗಬೇಕಿದ್ದ ವಧು ಹಾಗೂ ನವೀನ್ ಪರಸ್ಪರ ಪ್ರೀತಿಸುತ್ತಿದ್ದರಂತೆ. ಆದರೆ ಯುವತಿ ಪ್ರೀತಿ ವಿಚಾರ ಮುಚ್ಚಿಟ್ಟು ಶಿವಮೊಗ್ಗ ಮೂಲದ ಯುವಕನ ಜೊತೆ ಮದುವೆಯಾಗಲು ಮುಂದಾಗಿದ್ದಾಳೆ ಎಂದು ನವೀನ್ ಆರೋಪಿಸಿದ್ದಾನೆ.
ಕಲ್ಯಾಣ ಮಂಟಪದಲ್ಲಿ ಗೊಂದಲ ನಿರ್ಮಾಣವಾಗುತ್ತಿದ್ದಂತೆ ಹಾಗೂ ನವೀನ್ ಪ್ರೀತಿ ವಿಚಾರ ಬಯಲು ಮಾಡುತ್ತಿದ್ದಂತೆ ಮದುವೆಯಾಗಲು ಬಂದಿದ್ದ ವರ ನನಗೆ ಈ ಮದುವೆಯೇ ಬೇಡ ಎಂದು ಕಲ್ಯಾಣ ಮಂಟಪದಿಂದ ಹೊರಟು ಹೋಗಿದ್ದಾರೆ ಎನ್ನಲಾಗಿದೆ. ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸದ್ಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications