'ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಗಳೇ, ಮುಸಲ್ಮಾನರ ಮುಖ್ಯಮಂತ್ರಿಗಳೇ?'
ಹಾಸನ, ಏಪ್ರಿಲ್ 18: ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾದ ಬಳಿಕ ರಾಜ್ಯದಲ್ಲಿರುವ ಎಲ್ಲ ಹಿಂದುಳಿದ ಸಮುದಾಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಕಾಂಗ್ರೆಸ್ಸಿನವರು ಮತ್ತು ಸಿದ್ದರಾಮಯ್ಯನವರು ಹಿಂದುಳಿದ ಸಮುದಾಯಗಳನ್ನು ಮರೆತು ಕೇವಲ ಅಲ್ಪಸಂಖ್ಯಾತರ ಹಿಂದೆ ಹೋಗುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.
ಜನಾಕ್ರೋಶ ಯಾತ್ರೆಯ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಈಚೆಗೆ ಬಜೆಟ್ ಮಂಡಿಸಿದರು. ಈ ರಾಜ್ಯದಲ್ಲಿ ಮುಸಲ್ಮಾನರಿಗೆ ಸರಕಾರಿ ಕಾಮಗಾರಿಗಳಲ್ಲಿ ಶೇ 4 ಮೀಸಲಾತಿ ಕೊಡುವುದಾಗಿ ಹೇಳಿದ್ದಾರೆ. ಮುಸಲ್ಮಾನರ ಹೆಣ್ಮಕ್ಕಳಿಗೆ ಮದುವೆಗೆ 50 ಸಾವಿರ ಕೊಡುವುದಾಗಿ ಹೇಳುತ್ತಾರೆ. ಮುಸಲ್ಮಾನ ಯುವಜನರು ವಿದೇಶಕ್ಕೆ ಉನ್ನತ ಶಿಕ್ಷಣ ಪಡೆಯಲು ಹೋಗುವುದಾದರೆ 30 ಲಕ್ಷ ಧನಸಹಾಯ ನೀಡುವುದಾಗಿ ಹೇಳಿದ್ದಾರೆ. ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಗಳೇ ಕೇವಲ ಮುಸಲ್ಮಾನರ ಮುಖ್ಯಮಂತ್ರಿಗಳೇ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಹಿಂದೂ ಬಡ ಹುಡುಗಿಯರು ಇಲ್ಲವೇ? ಹಿಂದೂಗಳಲ್ಲಿ ವಿದೇಶಕ್ಕೆ ಹೋಗಿ ಉನ್ನತ ಶಿಕ್ಷಣ ಪಡೆದುಕೊಳ್ಳುವ ಅವಕಾಶ ಹಿಂದೂ ಬಡ ಯುವಕರಿಗೆ ಇಲ್ಲವೇ ಎಂದು ಕೇಳಿದರು. ಬಿಜೆಪಿ ಮುಸಲ್ಮಾನರ ವಿರೋಧಿಯಲ್ಲ. ಆದರೆ, ಲಜ್ಜೆಗೆಟ್ಟ ಕಾಂಗ್ರೆಸ್ಸಿನ ವರ್ತನೆಯನ್ನು ಮುಸಲ್ಮಾನರು ಯೋಚಿಸಬೇಕು. ಮುಸ್ಲಿಂ ಮಹಿಳೆಯರಿಗೆ ಗೌರವ ದೊರಕಿಸಿ ಕೊಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರು ತ್ರಿವಳಿ ತಲಾಖ್ ಅನ್ನು ಕಿತ್ತು ಹಾಕಿದ್ದಾರೆ.
ಯಡಿಯೂರಪ್ಪ ಅವರು ಕೊಟ್ಟ ಭಾಗ್ಯಲಕ್ಷ್ಮಿ ಯೋಜನೆ, ಬೈಸಿಕಲ್ ಯೋಜನೆಯ ಫಲಾನುಭವಿಗಳು ಕೇವಲ ಹಿಂದೂಗಳಷ್ಟೇ ಅಲ್ಲ; ಮುಸಲ್ಮಾನರೂ ಅದರ ಪ್ರಯೋಜನ ಪಡೆದಿದ್ದಾರೆ ಎಂದು ವಿವರಿಸಿದರು. ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದಾಗ ಆ ದೇಶದ್ರೋಹಿಗಳಿಗೆ ಸಿದ್ದರಾಮಯ್ಯರ ಸರಕಾರ ರಕ್ಷಣೆ ಕೊಟ್ಟಿತ್ತು. ಆದರೆ, ಅಂಥ ದೇಶದ್ರೋಹಿಗಳನ್ನು ಬಿಜೆಪಿ ಒಪ್ಪಿಕೊಳ್ಳುವುದಿಲ್ಲ ಎಂದು ತಿಳಿಸಿದರು. ಕಾಶ್ಮೀರದ ಉಗ್ರಗಾಮಿಗಳು ಬಿಜೆಪಿಗೆ ತಾಕತ್ತಿದ್ದರೆ ಲಾಲ್ ಚೌಕದಲ್ಲಿ ತ್ರಿವರ್ಣ ಧ್ವಜ ಹಾರಿಸಲು ಸವಾಲು ಹಾಕಿದ್ದರು. ಬಿಜೆಪಿ ಕಾರ್ಯಕರ್ತರು ಆ ಸವಾಲನ್ನು ಸ್ವೀಕರಿಸಿ ಮುರಳಿ ಮನೋಹರ ಜೋಶಿಯವರ ನೇತೃತ್ವದಲ್ಲಿ ಕಾಶ್ಮೀರಕ್ಕೆ ತೆರಳಿ ಭಾರತದ ಧ್ವಜ ಹಾರಿಸಿದ್ದರು ಎಂದರು.
ವ್ಯಕ್ತಿಗಿಂತ ಪಕ್ಷ ಮುಖ್ಯ. ಪಕ್ಷಕ್ಕಿಂತ ದೇಶ ಮುಖ್ಯ ಎಂಬ ಧ್ಯೇಯದೊಂದಿಗೆ ನಮ್ಮ ಕಾರ್ಯಕರ್ತರು ಶ್ರಮ ಹಾಕುತ್ತಿದ್ದಾರೆ. ದೇಶದಲ್ಲಿ ಯುಪಿಎ ಸರಕಾರ ಇದ್ದಾಗ ದೇಶದಲ್ಲಿ ಅನೇಕ ಹಗರಣಗಳು ನಡೆದಿದ್ದವು. ಭಾರತಕ್ಕೆ ಭವಿಷ್ಯ ಇಲ್ಲ ಎಂಬ ಸ್ಥಿತಿಯಲ್ಲಿ ಯುವಕರಿದ್ದರು. ಆದರೆ, ಭಾರತಕ್ಕೂ ಉಜ್ವಲ ಭವಿಷ್ಯ ಇದೆ ಎಂಬುದನ್ನು ಸಾಬೀತುಪಡಿಸಿ ತೋರಿಸಿದವರು ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಎಂದು ವಿಶ್ಲೇಷಿಸಿದರು. ಭಾರತವು ಐದನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಇದು ನಮ್ಮ ಹೆಮ್ಮೆಯ ಪ್ರಧಾನಿ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆ ಎಂದು ಮೆಚ್ಚುಗೆ ಸೂಚಿಸಿದರು.
ಸಿದ್ದರಾಮಯ್ಯನವರೇ ನೀವು ಮುಖ್ಯಮಂತ್ರಿ ಸ್ಥಾನದಲ್ಲಿ ಬಡವರ, ದಲಿತರ, ರೈತರ ಕಣ್ಣೀರು ಒರೆಸಿದ್ದೀರಾ? ಅಭಿವೃದ್ಧಿ ಕೆಲಸ ಮಾಡಿದ್ದೀರಾ? ಎಂದು ಬಿ.ವೈ. ವಿಜಯೇಂದ್ರ, ಅವರು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯನವರೇ, ನೀವು ಮುಖ್ಯಮಂತ್ರಿಗಳಾದ ಬಳಿಕ ರೈತರ ಆತ್ಮಹತ್ಯೆ ಹೆಚ್ಚಾಗಿದೆ. ಹಿಂದೂ ಹೆಣ್ಮಕ್ಕಳ ಮೇಲೆ ಅಪಮಾನ, ಲವ್ ಜಿಹಾದ್ ಹೆಚ್ಚಾಗಿದೆ. ಗೋಹತ್ಯೆಗಳು ಜಾಸ್ತಿ ಆಗಿದೆ. ಅದಕ್ಕಾಗಿ ಮುಂದಿನ ದಿನಗಳಲ್ಲಿ ಜನರು ನಿಮ್ಮನ್ನು ನೆನಪಿಸಿಕೊಳ್ಳಬೇಕೇ ಎಂದು ಕೇಳಿದರು.
ಹಿಂದೆ ಯಡಿಯೂರಪ್ಪನವರ ಬಿಜೆಪಿ ಸರಕಾರ ಇದ್ದಾಗ ರೈತರು ತಮ್ಮ ಹೊಲಕ್ಕೆ ಟ್ರಾನ್ಸ್‍ಫಾರ್ಮರ್ ಹಾಕಿಸಲು 25 ಸಾವಿರ ಕಟ್ಟಿದ್ದರೆ ಸಾಕಾಗಿತ್ತು. ಆದರೆ, ರೈತಪರ ಮೊಸಳೆ ಕಣ್ಣೀರು ಹಾಕುವ ಸಿದ್ದರಾಮಯ್ಯನವರ ಸರಕಾರದಲ್ಲಿ ಎರಡೂವರೆಯಿಂದ 3 ಲಕ್ಷ ರೂ. ಕಟ್ಟಬೇಕಿದೆ. ಹಿಂದೆ 5 ವರ್ಷ ನೀವು ಸಿಎಂ ಆಗಿದ್ದಾಗ ಏನು ಸಾಧನೆ ಮಾಡಿದ್ದೀರಿ ಸಿದ್ದರಾಮಯ್ಯನವರೇ ಎಂದು ಕೇಳಿದರು. ಹಿಂದಿನ ಬಾರಿ ವೀರಶೈವ ಧರ್ಮ ಎಂದು ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಿದ್ದೀರಲ್ಲವೇ ಎಂದು ಆಕ್ಷೇಪಿಸಿದರು. ಅದಕ್ಕಾಗಿ ರಾಜ್ಯದ ಜನ ನಿಮ್ಮನ್ನು ನೆನಪಿಟ್ಟುಕೊಳ್ಳಬೇಕೇ ಎಂದರು.
ಮುಸಲ್ಮಾನರಿಗೆ ಸರಕಾರಿ ಕಾಮಗಾರಿಯಲ್ಲಿ ಶೇ 4ರಷ್ಟು ಮೀಸಲಾತಿ ಕೊಡುತ್ತಿದ್ದೀರಿ. ಯಾರಪ್ಪನ ದುಡ್ಡು ಸ್ವಾಮಿ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಮುಸಲ್ಮಾನರ ಹೆಣ್ಮಕ್ಕಳಿಗೆ ಮದುವೆಗೆ 50 ಸಾವಿರ ಕೊಡುತ್ತಾರಂತೆ. ಹಿಂದೂಗಳಲ್ಲಿ ಬಡವರಿಲ್ಲವೇ? ಮುಸಲ್ಮಾನ ಯುವಜನರು ವಿದೇಶಕ್ಕೆ ಉನ್ನತ ಶಿಕ್ಷಣ ಪಡೆಯಲು ಹೋಗುವುದಾದರೆ 30 ಲಕ್ಷ ನೀಡುವುದಾಗಿ ಹೇಳಿದ್ದೀರಿ. ಹಿಂದೂಗಳಲ್ಲಿ ಬಡವರಿಲ್ಲವೇ ಹಾಗಿದ್ದರೆ ಎಂದು ಪ್ರಶ್ನಿಸಿದರು. ಹಿಂದೂಗಳಿಗೆ ಯಾತಕ್ಕೋಸ್ಕರ ಅಪಮಾನ ಮಾಡುತ್ತಿದ್ದೀರಿ ಎಂದು ಕೇಳಿದರು.
ರಾಜ್ಯದಲ್ಲಿ ಯಾವುದೇ ಲೋಕಸಭಾ, ವಿಧಾನಸಭಾ ಚುನಾವಣೆ ಇಲ್ಲ. ಆದರೂ, ನಾವು ಜನಾಕ್ರೋಶ ಯಾತ್ರೆ ಹಮ್ಮಿಕೊಂಡಿದ್ದೇವೆ. ಅಭಿವೃದ್ಧಿ ಕೆಲಸ, ಸರ್ವತೋಮುಖ ಅಭಿವೃದ್ಧಿಯ ಭರವಸೆ ನೀಡಿ ಕಾಂಗ್ರೆಸ್ಸಿನವರು ಅಧಿಕಾರಕ್ಕೆ ಬಂದವರು. ಆದರೆ, ಸಿದ್ದರಾಮಯ್ಯನವರ ನೇತೃತ್ವದ ಜನವಿರೋಧಿ, ರೈತ ವಿರೋಧಿ, ಹಿಂದೂ ವಿರೋಧಿ ಸರಕಾರ ಇದೆ. 50ಕ್ಕೂ ಜನೋಪಯೋಗಿ ವಸ್ತುಗಳ ಬೆಲೆ ಏರಿಸಿದ್ದಾರೆ ಎಂದು ಟೀಕಿಸಿದರು. ಪರಿಶಿಷ್ಟ ಜಾತಿ, ಜನಾಂಗದ 38 ಸಾವಿರ ಕೋಟಿ ಹಣವನ್ನು ದುರುಪಯೋಗ ಮಾಡಿಕೊಂಡಿದೆ. ಅಲ್ಪಸಂಖ್ಯಾತರ ತುಷ್ಟೀಕರಣ ಹೆಚ್ಚಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಸುಡುವ ಮನೆ ಎಂದವರು ಅಂಬೇಡ್ಕರ್: ಛಲವಾದಿ ನಾರಾಯಣಸ್ವಾಮಿ
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಅಂಬೇಡ್ಕರರಿಗೆ ಅತ್ಯಂತ ಹೆಚ್ಚು ಗೌರವ ಕೊಟ್ಟ ಪಕ್ಷ ಬಿಜೆಪಿ. ದಲಿತರ ಮೀಸಲಾತಿ ಹೆಚ್ಚಿಸಿದ್ದೇವೆ. ಪೌರಕಾರ್ಮಿಕರನ್ನು ಖಾಯಂ ಮಾಡಿದ್ದೇವೆ. ಕಾಂಗ್ರೆಸ್ ಸುಡುವ ಮನೆ ಎಂದು ಅಂಬೇಡ್ಕರ್ ಅವರು ಹೇಳಿದ್ದರು. ದಲಿತ ಬಂಧುಗಳು ಅರ್ಥ ಮಾಡಿಕೊಂಡು ಬಿಜೆಪಿ ಜೊತೆಗೂಡಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷ ಮಾಡಿದ ತಪ್ಪುಗಳನ್ನು ತಿದ್ದುವ ಕೆಲಸವನ್ನು ಬಿಜೆಪಿ ಸರಕಾರ ಮಾಡುತ್ತಿದೆ ಎಂದು ವಿವರಿಸಿದರು. ಸುಳ್ಳುಗಳನ್ನು ಹರಡುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ ಎಂದು ಟೀಕಿಸಿದರು. ಬಾಬಾಸಾಹೇಬ ಡಾ.ಅಂಬೇಡ್ಕರರನ್ನು ಅಪಮಾನ ಮಾಡಿದ ಕಾಂಗ್ರೆಸ್ ಪಕ್ಷವನ್ನು ನೀವು ಬೆಂಬಲಿಸಬೇಕೇ ಎಂದು ಪ್ರಶ್ನಿಸಿದರು. ತ್ರಿವಳಿ ತಲಾಖ್ ರದ್ದು ಮಾಡಿದ ಪಕ್ಷ ಬಿಜೆಪಿ; ಬಿಜೆಪಿಯು ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವ ಬಿ.ಶ್ರೀರಾಮುಲು, ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಸಂಸದ ರಮೇಶ್ ಜಿಗಜಿಣಗಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಎಸ್.ಕೆ ಬೆಳ್ಳುಬ್ಬಿ, ಶಾಸಕ ಹರೀಶ್ ಪೂಂಜಾ, ಮಾಜಿ ಶಾಸಕರಾದ ರಮೇಶ್ ಭೂಸನೂರ, ಸೋಮನಗೌಡ ಪಾಟೀಲ, ವಿಧಾನಪರಿಷತ್ ಸದಸ್ಯರಾದ ಹನುಮಂತ ನಿರಾಣಿ, ಪಿ.ಹೆಚ್. ಪೂಜಾರ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಶಹಾಪೂರ, ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಮಾಜಿ ಶಾಸಕ ಎ.ಹೆಚ್. ಪಾಟೀಲ್ ನಡಹಳ್ಳಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ರಾಜ್ಯ ಕಾರ್ಯದರ್ಶಿಗಳಾದ ಶರಣು ತಳ್ಳಿಕೇರಿ, ತಮ್ಮೇಶ್ ಗೌಡ, ಎಸ್.ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರಜೋಳ ಅವರು ಭಾಗವಹಿಸಿದ್ದರು.












Click it and Unblock the Notifications