Karnataka election 2023: ಹಾಸನದಲ್ಲಿ ಬೈಕ್ ರ್‍ಯಾಲಿ ಮೂಲಕ ಬಿಜೆಪಿಗೆ ಠಕ್ಕರ್ ಕೊಟ್ಟ ಜೆಡಿಎಸ್
ಹಾಸನ, ಮೇ, 07: ಹೈವೋಲ್ಟೇಜ್ ಕಣವಾದ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಪ್ರೀತಂಗೌಡ ವಿರುದ್ಧ ದಳಪತಿಗಳು ಮೊದಲಿನಿಂದಲೂ ಕೆಂಡಕಾರುತ್ತಲೇ ಇದ್ದಾರೆ. ಮತ್ತೆ ಇದೀಗ ಬಿಜೆಪಿಗೆ ಠಕ್ಕರ್ ಕೊಡಲು ನಗರದಲ್ಲಿ ಬೃಹತ್ ಬೈಕ್ ರ್‍ಯಾಲಿ ಆಯೋಜನೆ ಮಾಡಿದ್ದಾರೆ.
ಬೈಕ್ ರ್‍ಯಾಲಿಯಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿಯಾಗುವ ಮೂಲಕ ಗೆಲುವಿನ ರಣೋತ್ಸಾಹವನ್ನು ತೋರಿದ್ದಾರೆ. ರ್‍ಯಾಲಿಯು ಗೋ ಗೋ ಫ್ಯಾಕ್ಟರಿಯಿಂದ ಆರಂಭವಾಗಿದ್ದು, ನಗರದ ಪ್ರಮುಖ ರಸ್ತೆಗಳ ಮೂಲಕ ರಾಜ್‌ಕುಮಾರ್ ನಗರದವರೆಗೂ ತಲುಪಲಿದೆ. ಈ ರ್‍ಯಾಲಿಯ ನೇತೃತ್ವವನ್ನು ಸಂಸದ ಪ್ರಜ್ವಲ್ ರೇವಣ್ಣ ಮತ್ತು ಹಾಸನ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಅವರು ವಹಿಸಿದ್ದಾರೆ.

ಇದೇ ವೇಳೆ ಬುಲೆಟ್ ಬೈಕ್ ಓಡಿಸುವ ಮೂಲಕ ಸ್ವರೂಪ್ ಅವರು ಗಮನ ಸೆಳೆದರು. ಅಲ್ಲದೆ ಸ್ವರೂಪ್ ಹಿಂಬದಿ ಕುಳಿತ ಪ್ರಜ್ವಲ್ ರೇವಣ್ಣ ಅವರು ಸಾಥ್ ನೀಡಿದರು. ಒಟ್ಟಾರೆ ಈ ಚುನಾವಣೆಯಲ್ಲಿ ಸ್ವರೂಪ್ ಅವರ ಸಂಪೂರ್ಣ ಬೆಂಬಲಕ್ಕೆ ರೇವಣ್ಣ ಕುಟುಂಬ ನಿಂತಿರುವುದು ಕಂಡುಬಂದಿತು.
ಮೊನ್ನೆ ಶಾಸಕ ಪ್ರೀತಂಗೌಡ ಅವರು ವಿಜಯೇಂದ್ರ ಅವರನ್ನು ಕರೆಸಿ ಬೈಕ್ ರ್‍ಯಾಲಿ ಮಾಡಿದ್ದು, ಇದೀಗ ಇದಕ್ಕೆ ಠಕ್ಕರ್ ಕೊಡಲು ದಳಪತಗಳು ಕೂಡ ಬೈಕ್ ರ್‍ಯಾಲಿ ಆಯೋಜಿಸಿದ್ದಾರೆ.
ಹಾಗೆಯೆ ಹಾಸನದಲ್ಲೂ ಕೂಡ ರಾಜಕೀಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಲೇ ಇದೆ. ಅದೇ ರೀತಿ ಹೊಳೆನರಸೀಪುರ ಕ್ಷೇತ್ರದಲ್ಲಿ ಜೆಡಿಎಸ್, ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿದೆ.
ಕ್ಷೇತ್ರದಲ್ಲಿ ಮಾಜಿ ಸಚಿವ ಎಚ್.ಡಿ ರೇವಣ್ಣ ಅವರನ್ನು ಸೋಲಿಸಲು ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಪಣತೊಟ್ಟು ನಿಂತಿದ್ದಾರೆ.
ಅಲ್ಲದೆ ಶ್ರೇಯಸ್ ಪರವಾಗಿ ಅವರ ತಾಯಿ ಅನುಪಮ ಮಹೇಶ್ ಭವನಾತ್ಮಕ ಮತಬೇಟೆಗೆ ಮುಂದಾಗಿದ್ದಾರೆ.
ಕಣ್ಣೀರು ಹಾಕುತ್ತಾ ಸೆರಗೊಡ್ಡಿ ಮತಭಿಕ್ಷೆ ನೀಡಿ ಎಂದು ಕೇಳ್ಳುತ್ತಿದ್ದು, ತಾಯಿಯ ಕಣ್ಣೀರಿಗೆ ಅಭ್ಯರ್ಥಿ ಶ್ರೇಯಸ್ ಗದ್ಗದಿತರಾಗಿದ್ದಾರೆ. ಹೀಗೆ ಹೊಳೆನರಸೀಪುರ ಪುಟ್ಟಸ್ವಾಮಿ ಗೌಡರ ಮೊಮ್ಮಗನ ಸ್ಪರ್ಧೆಯಿಂದ ಕುತೂಹಲ ಮೂಡಿಸಿದ ಕ್ಷೇತ್ರವಾಗಿದೆ.
ಎಚ್.ಡಿ.ದೇವೇಗೌಡರಿಂದ ಭರ್ಜರಿ ಪ್ರಚಾರ
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಭರ್ಜರಿ ಪ್ರಚಾರ ಮಾಡಿದರು. ಸಮಾವೇಶದಲ್ಲಿ ಭಾವುಕರಾಗಿ ಮಾತನಾಡಿದ ಅವರು, ಹಾಸನ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೋಲು ಕಂಡ ನಂತರವೇ ನನಗೆ ಸಮಾಧಾನವಾಗುತ್ತದೆ ಎಂದು ಇತ್ತೀಚೆಗಷ್ಟೇ ಭಾವನಾತ್ಮಕವಾಗಿ ಮಾತನಾಡಿದ್ದರು.
ಸಭೆಗೆ ಮುನ್ನ ಮಾತನಾಡಿದ ಅವರು, ಹಾಸನದಲ್ಲಿ ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಮಂಜೂರಾದ ಬಹುಮುಖ್ಯ ಅಭಿವೃದ್ಧಿ ಕಾಮಗಾರಿಗಳನ್ನು ಹಾಳು ಮಾಡಿದ ಪ್ರೀತಂ ಜೆ ಗೌಡರನ್ನು ಸೋಲಿಸುವುದನ್ನು ನೋಡಬೇಕು ಎಂದು ಹೇಳಿದರು. ರಾಜ್ಯದಲ್ಲಿ ಅಲ್ಪಸಂಖ್ಯಾತರ ಹಿತಾಸಕ್ತಿ ಕಾಪಾಡುವಲ್ಲಿ ವಿಫಲವಾಗಿರುವ ಬಿಜೆಪಿಗೆ ಒಂದೂ ಮತವನ್ನು ಹಾಕದಂತೆ ದೇವೇಗೌಡ ಕರೆ ನೀಡಿದ್ದರು.
ಪ್ರೀತಂ ಗೌಡ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕ್ಷೇತ್ರದಲ್ಲಿ ಬಿಜೆಪಿ ಸೋಲಿಸಲು ಅಲ್ಪಸಂಖ್ಯಾತರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು. ಜೆಡಿಎಸ್ ಜಾತ್ಯಾತೀತವಾಗಿದ್ದು, ಧರ್ಮದ ಆಧಾರದ ಮೇಲೆ ಎಂದಿಗೂ ತಾರತಮ್ಯ ಮಾಡಲ್ಲ ಎಂದು ಹೇಳಿದರು. ಆತುರದಲ್ಲಿ ಹೇಳಿಕೆ ತಮ್ಮ ಕುಟುಂಬಕ್ಕೆ ಅವಮಾನ ಮಾಡಿದ ಬಿಜೆಪಿ ಅಭ್ಯರ್ಥಿ ಹೆಸರು ಹೇಳಲು ಇಷ್ಟವಿಲ್ಲ, ಚುನಾವಣೆಯಲ್ಲಿ ಬೇರೆ ಪಕ್ಷಗಳಿಗೆ ಮತ ಹಾಕಿ ನೋವು ಕೊಡಬೇಕು ಎಂದು ಮನವಿ ಮಾಡಿದ್ದರು.
ತಮ್ಮ ಕೊನೆಯ ಉಸಿರು ಇರುವವರೆಗೂ ಸಮಸ್ಯೆಗಳ ವಿರುದ್ಧ ಹೋರಾಡುವುದಾಗಿ ತಿಳಿಸಿದ ಅವರು, ಇಲ್ಲಿ ಬಿಜೆಪಿ ಅಭ್ಯರ್ಥಿ ಸೋಲುವುದನ್ನು ನೋಡಬೇಕು, ಮೂರು ಬಾರಿ ಪ್ರಧಾನಿಯನ್ನು ಭೇಟಿ ಮಾಡಿ ಐಐಟಿ ಸ್ಥಾಪನೆಗೆ ಮನವಿ ಮಾಡಿದರೂ, ಪ್ರಸ್ತಾವನೆಯನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಸಮಾವೇಶದಲ್ಲಿ ರಾಜ್ಯ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಮಾಜಿ ಸಚಿವ ಎಚ್.ಡಿ.ರೇವಣ್ಣ, ಭವಾನಿ ರೇವಣ್ಣ ಮಾತನಾಡಿದ್ದರು.












Click it and Unblock the Notifications