Bhagavad Gita: ಭಗವದ್ಗೀತೆ ಮನೇಲಿ ಹೇಳಿಕೊಡ್ತಾರೆ, ಮಕ್ಕಳಿಗೆ ಮೊದಲು ಬದುಕು ಕಟ್ಟಿಕೊಡಿ; ಎಚ್‌ಡಿಕೆ
ಹಾಸನ, ಮಾರ್ಚ್ 18: "ಭಗವದ್ಗೀತೆಯನ್ನು ಅವರವರ ಕುಟುಂಬದಲ್ಲಿ ಹೇಳಿಕೊಡುತ್ತಾರೆ, ಮಕ್ಕಳ ಬದುಕನ್ನು ಕಟ್ಟಿಕೊಡಲು ಸರ್ಕಾರ ಇದೆ," ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಟಿ. ಮಾಯಗೌಡನಹಳ್ಳಿಯಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಪಠ್ಯ ಪುಸ್ತಕದಲ್ಲಿ ಭಗವದ್ಗೀತೆ ಸೇರ್ಪಡೆ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
"ಮಕ್ಕಳ ಭವಿಷ್ಯ ನಿರ್ಮಾಣ ಮಾಡುವ ವಿಷಯಗಳು ಶಾಲೆಗಳಲ್ಲಿ ಇರಬೇಕು, ಈ ಕುರಿತು ಹಿಂದೂ ಸಮಾಜದ ಎಲ್ಲಾ ಬಂಧುಗಳಿಗೂ ಮನವಿ ಮಾಡುತ್ತೇನೆ," ಎಂದರು.

"ನಾನೂ ಹುಟ್ಟಿರುವುದು ಹಿಂದೂ ಸಮಾಜವೇ, ನಮ್ಮ ಕುಟುಂಬ ದೇವರ ಮೇಲೆ ಅಪಾರ ನಂಬಿಕೆ ಇಟ್ಟಿದೆ. ದೇವರ ಭಯದ ಹಿನ್ನೆಲೆಯಲ್ಲಿ ನಾವು ನಡೆದುಕೊಳ್ಳುವ ರೀತಿ, ನಮ್ಮ ಕುಟುಂಬದವರಷ್ಟು ಯಾವ ಕುಟುಂಬಗಳೂ ರಾಜ್ಯ ಹಾಗೂ ರಾಷ್ಟ್ರದಲ್ಲಿ ದೇವರನ್ನು ನಂಬಿವರು ಇಲ್ಲ. ಕೇವಲ ಮತ ಬ್ಯಾಂಕ್‌ಗಾಗಿ ಈ ರೀತಿ ಘಟನೆಗಳು ನಡೆಯುತ್ತಿವೆ," ಎಂದು ಎಚ್‌ಡಿಕೆ ತಿಳಿಸಿದರು.
"ಒಂದು ಕಾಲದಲ್ಲಿ ವಿದ್ಯೆ ಒಂದು ವರ್ಗಕ್ಕೆ ಸೇರಿದ್ದು ಎನ್ನುವ ವಾತಾವರಣವಿತ್ತು. ಅದೇ ಒಂದು ವರ್ಗದ ಜನ, ಈ ರೀತಿಯ ವಾತಾವರಣ ಎಲ್ಲರ ಮೇಲೆ ಹೇರುತ್ತಿದ್ದಾರೆ. ಶಿಕ್ಷಣ ವ್ಯವಸ್ಥೆಯಲ್ಲಿ ಅನೇಕ ನ್ಯೂನತೆಗಳನ್ನು ಇಟ್ಟುಕೊಂಡಿದ್ದೇವೆ. ಇಂತಹ ಸಂದರ್ಭದಲ್ಲಿ ಈ ರೀತಿಯ ವಿಷಯಗಳನ್ನು ಕೆದಕಿ, ಸಮಾಜದಲ್ಲಿ ಕಲುಷಿತ ವಾತಾವರಣ ನಿರ್ಮಾಣ ಮಾಡಿ ಅಂಥ ಭಗವದ್ಗೀತೆಯಲ್ಲಿ ಹೇಳಿದ್ದಾರಾ? ಭಗವದ್ಗೀತೆಯಲ್ಲಿ ಇರುವುದು ಧರ್ಮೋ ರಕ್ಷಿತ ರಕ್ಷಿತಃ ಹಾಲಿನ ರೀತಿ ಪರಿಶುದ್ಧವಾದ ಮನಸ್ಸನ್ನು ಒಡೆಯಬೇಡಿ," ಎಂದು ಮನವಿ ಮಾಡಿದರು.

ಹಿಜಾಬ್ ಬಗ್ಗೆ ಹೈಕೋರ್ಟ್ ನೀಡಿರುವ ತೀರ್ಪನ್ನು ಕೆಲವರು ವಿರೋಧಿಸುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ನನ್ನ ಹೇಳಿಯನ್ನು ವ್ಯಾಟ್ಸಪ್‍ನಲ್ಲಿ ತಿರುಚಿದ್ದಾರೆ. ನಾನು ಎಲ್ಲೂ ಸಹ ವೈಯಕ್ತಿಕವಾಗಿ ಹಿಜಾಬ್ ಬಗ್ಗೆ ಚರ್ಚೆ ಮಾಡಿಲ್ಲ. ಹೈಕೋರ್ಟ್ ತೀರ್ಪನ್ನು ನಾವೆಲ್ಲರೂ ತಲೆ ಭಾಗಿ ಸ್ವೀಕರಿಸಬೇಕು ಎಂದು ಹೇಳಿದ್ದೇನೆ. ಇದೇ ವೇಳೆ ಪಿಯುಸಿವರೆಗೂ ಸಮವಸ್ತ್ರ ಇದೆ ಎಂದರು.
ಹಿಂದಿನ ಕಾಲದಲ್ಲಿ ಒಂದು ವರ್ಗದ ಯಾರಾದರೂ ತೀರಿಕೊಂಡರೆ ತಲೆ ಬೋಳಿಸಿ, ಬಳೆ ಒಡೆದು, ತಲೆಗೆ ಸೆರಗು ಹಾಕಿಕೊಂಡು ಇರಬೇಕು ಎಂಬ ಮೌಢ್ಯ ತಂದಿದ್ದರು. ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಟ್ಟಾಗ ಆ ಮೌಲ್ಯಗಳೆಲ್ಲ ಹೋದವು. ಈಗ ಹಿಜಾಬ್ ವಿಷಯ ಇಟ್ಟುಕೊಂಡು ಕೆಲವರು ರಾಜಕಾರಣ ಮಾಡಲು ಪ್ರಯತ್ನ ಪಡುತ್ತಿದ್ದಾರೆ ಎಂದು ಹೇಳಿದರು.
''ಮುಸ್ಲಿಂ ಸಮಾಜದ ಹೆಣ್ಣುಮಕ್ಕಳಿಗೆ ಹೆಚ್ಚಿನ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಸರ್ಕಾರದ ನಡವಳಿಕೆಗಳಿದ್ದರೆ ಈ ಮೌಡ್ಯಗಳು ತನಗೆ ತಾನೇ ಹೊರಟು ಹೋಗುತ್ತವೆ. ಇವತ್ತು ದೊಡ್ಡ ಘರ್ಷಣೆಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಶಾಲಾ ಮಕ್ಕಳು ಮನಸ್ಸು ಪರಿಶುದ್ಧ ಹಾಲಿನಂತಹದ್ದು, ಆ ಮನಸ್ಸನ್ನು ಕಲುಷಿತಗೊಳಿಸಬೇಡಿ. ಅದು ಯಾವುದೇ ಸಮಾಜವಿರಲಿ,'' ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.












Click it and Unblock the Notifications