ಬೆಂಗಳೂರು-ಸಕಲೇಶಪುರ ರೈಲು ಸಂಚಾರ ಆರಂಭ
ಬೆಂಗಳೂರು, ಸೆಪ್ಟೆಂಬರ್ 25 : ಭಾರಿ ಮಳೆ ಮತ್ತು ಭೂ ಕುಸಿತದ ಕಾರಣ ಬೆಂಗಳೂರು-ಸಕಲೇಶಪುರ ನಡುವಿನ ರೈಲು ಸಂಚಾರ ಸ್ಥಗಿತಗೊಂಡಿತ್ತು. ಈಗ ರೈಲು ಸಂಚಾರ ಆರಂಭವಾಗಿದ್ದು, ಕಲವೇ ದಿನಗಳಲ್ಲಿ ಬೆಂಗಳೂರು-ಮಂಗಳೂರು ನಡುವಿನ ರೈಲು ಸಂಚಾರವೂ ಆರಂಭವಾಗುವ ನಿರೀಕ್ಷೆ ಇದೆ.
ಗುಡ್ಡ ಕುಸಿತದಿಂದಾಗಿ ಹಾಸನ ಜಿಲ್ಲೆಯ ಸಕಲೇಶಪುರಲ್ಲಿ ರೈಲ್ವೆ ಹಳಿಯ ಮೇಲೆ ಕಲ್ಲುಗಳು ಕುಸಿದು ಬಿದ್ದಿದ್ದವು. ರೈಲ್ವೆ ಇಲಾಖೆ ಸಿಬ್ಬಂದಿಗಳು ಕಲ್ಲು ಮತ್ತು ಮಣ್ಣನ್ನು ತೆರವುಗೊಳಿಸಿ ರೈಲ್ವೆ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
ಸೋಮವಾರ ರಾತ್ರಿ ಒಂದು ರೈಲು ಬೆಂಗಳೂರಿನಿಂದ ಸಕಲೇಶಪುರಕ್ಕೆ ಆಗಮಿಸಿದೆ. ಮಂಗಳವಾರ ಮತ್ತೊಂದು ರೈಲು ಸಕಲೇಶಪುರದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದೆ.

ಸಕಲೇಶಪುರದಿಂದ ಸುಬ್ರಮಣ್ಯ ರೈಲ್ವೆ ನಿಲ್ದಾಣದ ತನಕ ರೈಲ್ವೆ ಹಳಿಯ ಮೇಲೆ ಬಾರಿ ಮಣ್ಣು ಕುಸಿದು ಬಿದ್ದಿದೆ. ಅದನ್ನು ತೆರವುಗೊಳಿಸುವ ಕಾರ್ಯ ಇನ್ನೂ ನಡೆಯುತ್ತಿದೆ. ಆದ್ದರಿಂದ, ಇನ್ನೂ ಕೆಲವು ದಿನಗಳ ಕಾಲ ಬೆಂಗಳೂರು-ಮಂಗಳೂರು ರೈಲು ಸಂಚಾರ ಆರಂಭವಾಗುವುದಿಲ್ಲ.
ಆಗಸ್ಟ್ ತಿಂಗಳಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸಕಲೇಶಪುರದಲ್ಲಿ ಅಪಾರ ಹಾನಿಯಾಗಿತ್ತು. ಯಡಕುಮರಿ ರೈಲು ನಿಲ್ದಾಣದ ಸಮೀಪ ಭೂ ಕುಸಿತ ಉಂಟಾಗಿತ್ತು. ರೈಲ್ವೆ ಇಲಾಖೆಯ ಸಿಬ್ಬಂದಿಗಳು ಅಪಾಯಕ್ಕೆ ಸಿಲುಕಿದ್ದರು.












Click it and Unblock the Notifications