ಬೇಲೂರು; ಆಧಾರ್ ಕಾರ್ಡ್ ಮಾಡಿಕೊಡಲು ಬೇಕಾಬಿಟ್ಟಿ ಹಣ ವಸೂಲಿ, ಸಾರ್ವಜನಿಕರ ಆಕ್ರೋಶ
ಹಾಸನ, ಅಕ್ಟೋಬರ್, 11: ಬೇಲೂರಿನ ಅಂಚೆ ಕಛೇರಿಯಲ್ಲಿ ಆಧಾರ್ ಕಾರ್ಡ್ ಮಾಡಿಕೊಡುವ ನೆಪದಲ್ಲಿ ಭ್ರಷ್ಟಾಚಾರ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಸಾರ್ವಜನಿಕರಿಂದ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದ ನೌಕರನಿಗೆ ಸ್ಥಳಿಯರು ತರಾಟೆಗೆ ತೆಗದುಕೊಂಡಿದ್ದಾರೆ.
ಅಂಚೆ ಇಲಾಖೆಯ ಬೇಲೂರು ಶಾಖೆ ನೌಕರ ಮಿಥುನ್ ವಿರುದ್ದ ಅಕ್ರಮ ಹಣ ವಸೂಲಿ ಆರೋಪ ಕೇಳಿಬಂದಿದೆ. ಆಕ್ರಮ ಹಣ ವಸೂಲಿ ಬಗ್ಗೆ ಪ್ರಶ್ನಿಸಿದಾಗ ಮಿಥುನ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಫೋನ್ ನಂಬರ್ ಅಪ್ಡೇಟ್ ಮಾಡಲು ಈತ 50 ರೂಪಾಯಿ ಬದಲಾಗಿ 120 ರೂಪಾಯಿ ವಸೂಲಿ ಮಾಡುತ್ತಿದ್ದ. ನಿಯಮದ ಪ್ರಕಾರ ಉಚಿತವಾಗಿ ಜನರಿಗೆ ಆಧಾರ್ ಕಾರ್ಡ್ ಮಾಡಿಕೊಡಬೇಕು. ಆದರೆ ಇವನು ಜನರ ಬಳಿ ಅನಧಿಕೃತವಾಗಿ 200 ರೂಪಾಯಿ ಹಣವನ್ನು ವಸೂಲಿ ಮಾಡುತ್ತಿದ್ದ.

ಜನರ ಬಳಿ ಬೇಕಾಬಿಟ್ಟಿಯಾಗಿ ಹಣ ವಸೂಲಿ
ಇನ್ನು ಬಯೊಮೆಟ್ರಿಕ್ ಅಪ್ಡೇಟ್ಗೆ 100 ರೂಪಾಯಿ ಬದಲಾಗಿ 200 ರೂಪಾಯಿ ವಸೂಲಿ ಮಾಡುತ್ತಿದ್ದ. ಆದರೆ, ಯಾವುದಕ್ಕೂ ರಶೀದಿ ನೀಡದೆ ಜನರನ್ನು ವಂಚಿಸುತ್ತಿದ್ದ. ಈ ದಂಧೆಯನ್ನು ಖಂಡಿಸಿದ ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರು ಅಧಿಕಾರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಗ ಆರೋಪಿ ಮಿಥುನ್ ಎಲ್ಲರ ಮುಂದೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಮಿಥುನ್ ಕಳೆದ ಹಲವು ತಿಂಗಳಿನಿಂದ ಇದೇ ರೀತಿ ಹಣ ವಸೂಲಿ ಮಾಡುತ್ತಿದ್ದು, ಇವನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಆಧಾರ್ ಕಾರ್ಡ್ ಮಾಡಿಕೊಡುವ ನೆಪದಲ್ಲಿ ಜನರ ಬಳಿ ಹಣ ಕೀಳುವವರ ಸಂಖ್ಯೆ ಹೆಚ್ಚಾಗಿದೆ. ಬರೀ ಹಾಸನ ಜಿಲ್ಲೆಯೊಂದರ ಕತೆಯಲ್ಲ ಇದು. ಹಲವು ಜಿಲ್ಲೆಗಳ ಹಳ್ಳಿಗಳಲ್ಲಿ ಜನಸಾಮಾನ್ಯರಿಗೆ ಗೊತ್ತಾಗದಂತೆ ಇಲ್ಲಸಲ್ಲದ ಕಾರಣಗಳನ್ನು ಹೇಳಿ ಹಣವನ್ನು ಕೀಳುವವರ ಸಂಖ್ಯೆ ಹೆಚ್ಚಾಗಿಬಿಟ್ಟಿದೆ. ಹೀಗೆ ದಂಧೆ ನಡೆಸಿದ ಸಾಕಷ್ಟು ಪ್ರಕರಣಗಳು ಬಯಲಿಗೆ ಬಂದಿವೆ. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳದಿರುವುದೇ ದಂಧೆಗಳು ಹೆಚ್ಚಾಗಲು ಕಾರಣ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.











Click it and Unblock the Notifications