ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯಕ್ ಸದ್ಯದಲ್ಲೇ ಕಾಂಗ್ರೆಸ್ ಸೇರ್ಪಡೆ

Posted By: GMR
Subscribe to Oneindia Kannada
   ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯಕ್ ಸದ್ಯದಲ್ಲೇ ಕಾಂಗ್ರೆಸ್ ಸೇರ್ಪಡೆ | Oneindia Kannada

   ಬಳ್ಳಾರಿ, ಮಾರ್ಚ್ 14: 2013ರ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಎಸ್ಸಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಅಲ್ಪಮತಗಳ ಗೆಲುವು ಸಾಧಿಸಿದ್ದವರು ಜೆಡಿ(ಎಸ್)ನ ಹಾಲಿ ಬಂಡಾಯ ಶಾಸಕ ಭೀಮಾನಾಯಕ್. ಅವರೀಗ ಕಾಂಗ್ರೆಸ್ ಸೇರುವ ಸನ್ನಾಹದಲ್ಲಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿ, ಜೆಡಿಎಸ್‍ಗೆ ರಾಜೀನಾಮೆ ನೀಡುವುದು ಇವರ ಯೋಜನೆಯಾಗಿದೆ.

   ಹಾಗೆ ನೋಡಿದರೆ ಕಳೆದ ಬಾರಿ ಭೀಮಾನಾಯಕ್ ಶಾಸಕರಾಗಿದ್ದೇ ಹಲವರನ್ನು ಅಚ್ಚರಿಗೆ ದೂಡಿತ್ತು. ಅಲ್ಲದೆ, ಇದೀಗ ಕಾಂಗ್ರೆಸ್ ಸೇರುತ್ತಿರುವುದರಿಂದ ಕೈ ಪಕ್ಷದಲ್ಲೇ ವಿರೋಧಿಗಳ ಗುಂಪನ್ನು ಎದುರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

   ಒಂದು ಕಾಲದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ರಾಜಕೀಯ ಕ್ಷೇತ್ರಕ್ಕೆ ದಾಪುಗಾಲಿಟ್ಟಿದ್ದ ಭೀಮಾನಾಯಕ್ ಇವತ್ತಿನ ಸ್ಥಿತಿಗೆ ಕಾರಣ ದಿವಂಗತ ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್. ಭೀಮಾನಾಯಕ್ ತಾವು ಪ್ರಕಾಶ್ ಕಣ್ಣಿಗೆ ಬೀಳುತ್ತಿದ್ದಂತೆ ಶಾಸಕರಾಗುವ ಕನಸು ಮೂಡಿಸಿಕೊಂಡವರು. ಜಿಲ್ಲಾ ಪಂಚಾಯಿತಿ ಕ್ಷೇತ್ರವಲ್ಲದೇ ಸಾಧ್ಯವಿರುವಲ್ಲಿ ರಾಜಕೀಯ ರಂಗಗಳಲ್ಲೆಲ್ಲಾ ತೊಡಗಿಸಿಕೊಂಡ ಅವರು ಸ್ವಯಂಕೃಷಿಯಿಂದ ಜೆಡಿಎಸ್‍ನಿಂದ ಶಾಸಕರೂ ಆದರು.

   ತಂದೆ, ಎಂಪಿ ಪ್ರಕಾಶ್ ಕನಸು

   ತಂದೆ, ಎಂಪಿ ಪ್ರಕಾಶ್ ಕನಸು

   "ನಾನು ಎರಡು ಸಲ ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದೆ. ನಾನು ಶಾಸಕನಾಗಬೇಕು ಎನ್ನುವ ಆಸೆ ನನ್ನ ತಂದೆ ಸ್ವಾಮಿ ನಾಯಕ್ ಹಾಗೂ ಹಿರಿಯ ಮುಖಂಡ ಎಂ.ಪಿ. ಪ್ರಕಾಶ್ ಅವರಿಗೆ ಇತ್ತು . ಚುನಾವಣೆಗೆ ಸ್ಪರ್ಧಿಸಲೇಬೇಕು ಎಂದು ನನ್ನ ಬೆಂಬಲಿಗರು ಪಟ್ಟು ಹಿಡಿದಿದ್ದ ಕಾರಣಕ್ಕಾಗಿ ಚುನಾವಣೆ ಸ್ಪರ್ಧಿಸಿ ಗೆದ್ದೆ. ನನ್ನ ಗೆಲುವನ್ನು ಆನಂದಿಸಲು ನನ್ನ ತಂದೆಯೂ ಇರಲಿಲ್ಲ, ಎಂ.ಪಿ. ಪ್ರಕಾಶ್ ಅವರೂ ನನ್ನೊಂದಿಗೆ ಇರಲಿಲ್ಲ. ಆ ಕ್ಷಣದ ಆನಂದವನ್ನು ನೋವಿನಲ್ಲೇ ಅನುಭವಿಸಿದೆ," ಎನ್ನುತ್ತಾರೆ ಭೀಮಾನಾಯಕ್.

   ನಮ್ಮ ತಂದೆ ರಾಜಕೀಯ ಆರಂಭಿಸಿದ್ದೇ ಕಾಂಗ್ರೆಸ್ಸಿನಿಂದ 1993-94ರಲ್ಲಿ ಕಾಂಗ್ರೆಸ್ಸಿನಿಂದ ಗೆದ್ದು ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದರು. ನಾನು ಮೈನ್ ಸಬ್ ಲೀಸ್ ಪಡೆದು ನಡೆಸುತ್ತಿದ್ದೆ. ನನಗೆ ನನ್ನ ಕೆಲಸ ಮತ್ತು ಕುಟುಂಬದ ನಿರ್ವಹಣೆ ಬಿಟ್ಟರೆ ಬೇರೆ ಜಗತ್ತೇ ಗೊತ್ತಿರಲಿಲ್ಲ. 2004 ರ ಚುನಾವಣೆಯಲ್ಲಿ ಬೂತ್ ಏಜೆಂಟ್ ಆಗಿ ಕೆಲಸ ಮಾಡಿದ್ದೇ ರಾಜಕೀಯ ತಿರುವುಗೆ ಕಾರಣವಾಯಿತು ಎನ್ನುತ್ತಾರೆ ಅವರು.

   ಕಾಂಗ್ರೆಸ್, ಜೆಡಿಎಸ್ ಟಿಕೆಟ್ ಹೋರಾಟ

   ಕಾಂಗ್ರೆಸ್, ಜೆಡಿಎಸ್ ಟಿಕೆಟ್ ಹೋರಾಟ

   ಸಂತೋಷ್ ಲಾಡ್ ತಾಲ್ಲೂಕಿನ ಕಲ್ಲಹಳ್ಳಿಗೆ ಬಂದಿದ್ದರು. ಆಗ ಅವರು ಜೆಡಿಎಸ್ ನಲ್ಲಿ ಇದ್ದರು. ನಾನೇ ಅವರನ್ನು ಬರಮಾಡಿಕೊಂಡೆ. ಜನ ನನ್ನ ಕೈಗಳಿಂದಲೇ ಅವರಿಗೆ ಹಾರ ಹಾಕಿಸಿದರು. ಅವರ ಪರವಾಗಿ ಪ್ರಚಾರ ನಡೆಸಿ ಜೆಡಿಎಸ್ ಜೊತೆಗೆ ಗುರುತಿಸಿಕೊಂಡಿದ್ದೆ. ನಾನು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ಲಾಡ್ 2005 ರಲ್ಲಿ ಸಂಡೂರಿನ ಯಶವಂತನಗರ ಎಸ್ಸಿ ಮೀಸಲು ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿ ಚುನಾವಣೆಗೆ ನಿಲ್ಲಿಸಿ, ಗೆಲ್ಲಿಸಿದರು.

   ರಾಜಕೀಯ ಬದಲಾಯಿತು. ಎಂ.ಪಿ. ಪ್ರಕಾಶ್, ಸಂತೋಷ್ ಲಾಡ್ ಕಾಂಗ್ರೆಸ್ ಸೇರಿದರು. ಕ್ಷೇತ್ರ ಪುನರ್ ವಿಂಗಡನೆ ಕೂಡ ಆಯಿತು. 2008 ರ ಚುನಾವಣೆಗೆ ನಾನು ನಿಲ್ಲಬೇಕೆಂದು ನನ್ನ ತಂದೆ ಹಾಗೂ ಬೆಂಬಲಿಗರು ಪಟ್ಟು ಹಿಡಿದರು. ಕಾಂಗ್ರೆಸಿನಿಂದ ಟಿಕೆಟ್ ಗೆ ಪ್ರಯತ್ನಿಸಿದೆ. ಆದರೆ ಸಾಮಾಜಿಕ ನ್ಯಾಯ ಅಡ್ಡಿಯಾಗಿ ಟಿಕೆಟ್ ತಪ್ಪಿತು. ನನ್ನ ಬೆಂಬಲಿಗರು ಸುಮ್ಮನಾಗಲಿಲ್ಲ. ಅವರ ಒತ್ತಾಯಕ್ಕೆ ಮಣಿದು ಸ್ಪರ್ಧೆಗೆ ಸಮ್ಮತಿ ಸೂಚಿಸಿದೆ.

   ಬಿಜೆಪಿಗೆ ಬಂದರೂ ದಕ್ಕದ ಟಿಕೆಟ್

   ಬಿಜೆಪಿಗೆ ಬಂದರೂ ದಕ್ಕದ ಟಿಕೆಟ್

   ಜನಾರ್ದನ ರೆಡ್ಡಿ ಟಿಕೆಟ್ ಕೊಡುವ ಭರವಸೆ ನೀಡಿದ್ದರಿಂದ ಬಿಜೆಪಿಗೆ ಸೇರಿದೆ. ಆದರೆ ಕೊನೆಯ ಕ್ಷಣದಲ್ಲಿ ಅಲ್ಲೂ ಟಿಕೆಟ್ ಕೈ ತಪ್ಪಿತ್ತು. ಆಗ ಎಚ್.ಡಿ. ಕುಮಾರಸ್ವಾಮಿ ಅವರು ಕರೆ ಮಾಡಿ ಜೆಡಿಎಸ್ ನಿಂದ ಚುನಾವಣೆಗೆ ನಿಲ್ಲಬೇಕು ಎಂದರು. ಆ ಚುನಾವಣೆಯಲ್ಲಿ 27ಸಾವಿರ ಮತ ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು ಎಂದು ಅಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ಭೀಮಾ ನಾಯಕ್.

   ನಾನು ಕ್ಷೇತ್ರದಲ್ಲಿ ಸೋತರೂ ಜನರೊಂದಿಗೆ ನಿರಂತರ ಸಂಪರ್ಕ ಹೊಂದಿದ್ದೆ. 2010ರಲ್ಲಿ ಎಂಪಿ ಪ್ರಕಾಶ್ ಅವರು ನನ್ನನ್ನು ಪುನಃ ಕಾಂಗ್ರೆಸ್ಸಿಗೆ ಸೇರಿಸಿಕೊಂಡರು. ಚೋರನೂರು ಜಿಲ್ಲಾ ಪಂಚಾಯಿತಿಯಿಂದ ಸ್ಪರ್ಧಿಸಿ, ಗೆಲ್ಲಿಸಿದರು. ಜಿಲ್ಲಾ ಕಾಂಗ್ರೆಸ್ ಎಸ್ಸಿ ವಿಭಾಗದ ಜಿಲ್ಲಾ ಉಪಾಧ್ಯಕ್ಷನಾದೆ.

   ವಿಪ್ ಉಲ್ಲಂಘನೆ ಕಾಂಗ್ರೆಸ್ ನಿಂದ ಉಚ್ಛಾಟನೆ!

   ವಿಪ್ ಉಲ್ಲಂಘನೆ ಕಾಂಗ್ರೆಸ್ ನಿಂದ ಉಚ್ಛಾಟನೆ!

   ಜಿಲ್ಲಾ ಪಂಚಾಯಿತಿಯಲ್ಲಿ ವಿಪ್ ಉಲ್ಲಂಘಿಸಿ ಮತ ಚಲಾಯಿಸಿದ ಕಾರಣಕ್ಕೆ ಪಕ್ಷದಿಂದ ಉಚ್ಛಾಟನೆಗೊಂಡೆ. ಬಿಎಸ್ಆರ್ ಕಾಂಗ್ರೆಸ್ ಸೇರಿದೆ. ಪುನಃ ಜೆಡಿಎಸ್ ಸೇರಿ 2013ರಲ್ಲಿ ಹಗರಿಬೊಮ್ಮನಹಳ್ಳಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿ, ಜನಸೇವೆ ಮಾಡಿದೆ. ಈಗ, ಕಾಂಗ್ರೆಸ್ ಸೇರಲಿದ್ದೇನೆ. ಕ್ಷೇತ್ರದ ಅಭಿವೃದ್ಧಿಯ ಮಂತ್ರವನ್ನು ಪಠಿಸುತ್ತಿರುವೆ ಎನ್ನುತ್ತಾರೆ ಭೀಮಾ ನಾಯಕ್.

   ಕಾಂಗ್ರೆಸ್ ನಿಂದ ಸ್ಪರ್ಧೆ

   ಕಾಂಗ್ರೆಸ್ ನಿಂದ ಸ್ಪರ್ಧೆ

   ಮಾಲವಿ ಜಲಾಶಯಕ್ಕೆ ಶಾಶ್ವತ ನೀರೊದಗಿಸುವ ಯೋಜನೆಗೆ ಚಾಲನೆ ಕೊಡಬೇಕೆಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಜನ ನಲವತ್ತು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರು. ಹಿಂದಿನ ಜನಪ್ರತಿನಿಧಿಗಳು ಭರವಸೆಯಲ್ಲೇ ಕಾಲ ಕಳೆದಿದ್ದರು. ಅಷ್ಟೇ ಅಲ್ಲ ಅದನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದರು. ಆದರೆ ನಾನು ಶಾಸಕನಾದ ನಂತರ, ಸಿಎಂ ಬೆನ್ನು ಬಿದ್ದು ಈ ಯೋಜನೆಗೆ ಚಾಲನೆ ಕೊಡಿಸಿದೆ ಎಂದು ಸಂತೋಷದಿಂದ ಹೇಳುತ್ತಾರೆ ಭೀಮಾನಾಯಕ್.

   ಚಿಲವಾರ ಬಂಡಿ ಏತ ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಚಾಲನೆ ನೀಡಿದ್ದಾರೆ. ನೂತನ ಕೊಟ್ಟೂರು ತಾಲ್ಲೂಕಿಗೆ ರೂ. 10 ಕೋಟಿ, ಕೊಟ್ಟೂರೇಶ್ವರ ರಥ ನಿರ್ಮಾಣಕ್ಕೆ ರೂ. 2 ಕೋಟಿ ವಿಶೇಷ ಅನುದಾನ ತಂದಿದ್ದೇನೆ. 1300 ಮನೆ ಹಂಚಿಕೆ ಮಾಡಲಾಗಿದೆ. ಕ್ಷೇತ್ರದ ಒಟ್ಟಾರೆ ಅಭಿವೃದ್ಧಿಗೆ ಬದ್ಧನಾಗಿ, ಹಗಲಿರುಳು ದುಡಿದಿದ್ದೇನೆ. ಮತದಾರರು ಮತ್ತೊಮ್ಮೆ ಆಶೀರ್ವಾದ ಮಾಡುವ ವಿಶ್ವಾಸವಿದೆ ಎನ್ನುತ್ತಾರೆ ಅವರು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Bheema Naik, the rebel MLA of JD(S) from the Hagaribommanahalli SC reserved constituency soon to be join into Congress. His plan is to vote for the Congress candidate in the Rajya Sabha elections and resign to the JD (S).

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ