ಗದಗದಲ್ಲಿ ವೀರಶೈವ-ಲಿಂಗಾಯತ ಸಮಾವೇಶ, 8 ನಿರ್ಣಯ
ಗದಗ, ಡಿಸೆಂಬರ್ 24 : 'ವೀರಶೈವ-ಲಿಂಗಾಯತ ಎರಡೂ ಒಂದೇ' ಎನ್ನುವ ಸಂದೇಶ ಸಾರಲು ಗದಗದಲ್ಲಿ ಭಾನುವಾರ ಬೃಹತ್ ಸಮಾವೇಶ ನಡೆಯಿತು. ಲಕ್ಷಾಂತರ ಜನರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಗದಗದ ವಿದ್ಯಾದಾನ ಸಮಿತಿ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಿತು. 1,200ಕ್ಕೂ ಅಧಿಕ ವೀರಶೈವ ಲಿಂಗಾಯತ ಧರ್ಮದ ಮಠಾಧೀಶರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

'ವೀರಶೈವ ಲಿಂಗಾಯತ ಧರ್ಮದ ಜನಜಾಗೃತಿ ಸಮಾವೇಶ' ಎಂಬ ಹೆಸರಿನಲ್ಲಿ ನಡೆಯಿತು. 8 ನಿರ್ಣಯಗಳನ್ನು ಮಂಡನೆ ಮಾಡಲಾಯಿತು. ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ವಿವಿಧ ಭಾಗಗಳ ನೂರೂರು ಮಠಾಧೀಶರು ಸಮಾವೇಶದಲ್ಲಿ ಭಾಗವಹಿಸಿದ್ದರು.
ಪ್ರತ್ಯೇಕ ಲಿಂಗಾಯತ ಧರ್ಮದ ಸಮಾವೇಶಗಳಿಗೆ ಸೆಡ್ಡು ಹೊಡೆಯಲು. ವೀರಶೈವ ಲಿಂಗಾಯತ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಮಾತನಾಡಿದ ಆಂದೋಲ ಶ್ರೀಗಳು, 'ವೀರಶೈವ ಧರ್ಮ ಒಡೆಯಲು ಸಿಎಂ ತ್ರೀ ಈಡಿಯಟ್ಸ್ ತಯಾರು ಮಾಡಿದ್ದಾರೆ' ಎಂದರು. ಈ ಮೂಲಕ ಸಚಿವರಾದ ಎಂ.ಬಿ.ಪಾಟೀಲ್, ವಿನಯ್ ಕುಲಕರ್ಣಿ ಮತ್ತು ಬಸವರಾಜ ಹೊರಟ್ಟಿ ಅವರನ್ನು ಜರಿದರು.
ಸಮಾವೇಶದಲ್ಲಿ ಕೈಗೊಂಡ 8 ನಿರ್ಣಯಗಳು
* ವೀರಶೈವ-ಲಿಂಗಾಯತ ಧರ್ಮ ಹಿಂದೆ, ಇಂದು, ಮುಂದೆ ಹಾಗೂ ಎಂದೆಂದಿಗೂ ಒಂದೇ
* ವೀರಶೈವ-ಲಿಂಗಾಯತ ಒಂದೇ ಎನ್ನುವ ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ನಿಲುವನ್ನು ಬೆಂಬಲಿಸಿ, ಅನುಮೋದಿಸುವುದು
* ಕಾಂಗ್ರೆಸ್ ಸರ್ಕಾರವು ಚುನಾವಣೆಗೆ ಮುನ್ನ ತರಾತುರಿಯಲ್ಲಿ ರಚಿಸಿರುವ ಪೂರ್ವಗ್ರಹ ಪೀಡಿತ ಸಮಿತಿಯನ್ನು ವಿಸರ್ಜಿಸಬೇಕು ಎಂದು ಅಲ್ಪಸಂಖ್ಯಾತರ ಆಯೋಗವನ್ನು ಆಗ್ರಹಿಸುವುದು
* ಅಲ್ಪಸಂಖ್ಯಾತ ಮಾನ್ಯತೆ ನೀಡುವ ನೆಪದಲ್ಲಿ ವೀರಶೈವ-ಲಿಂಗಾಯತರಿಗೆ ದೊರೆಯುವ ಜಾತಿ ಆಧಾರಿತ ಮೀಸಲಾತಿ ಸೌಲಭ್ಯದಿಂದ ಶಾಶ್ವತವಾಗಿ ವಂಚಿತಗೊಳಿಸಲು ಹಾಗೂ ಧರ್ಮವನ್ನು ಒಡೆಯಲು ಕಾಂಗ್ರೆಸ್ ಸರ್ಕಾರ ನಡೆಸಿದ ಹುನ್ನಾರದ ಕುರಿತು ಎಚ್ಚರ ವಹಿಸುವುದು.
* ವೀರಶೈವ-ಲಿಂಗಾಯತ ಧರ್ಮದ ಎಲ್ಲ ಒಳಪಂಗಡಗಳ ಸರ್ವತೋಮುಖ ಅಭಿವೃದ್ಧಿಗೆ ಕ್ರಮ ವಹಿಸುವುದು
* ವೀರಶೈವ-ಲಿಂಗಾಯತ ಸಮಾಜದ ಸಂಖ್ಯಾಬಲಕ್ಕೆ ಅನುಗುಣವಾಗಿ 2ಎ ಪ್ರವರ್ಗದಲ್ಲಿ ಅಥವ ಪ್ರತ್ಯೇಕ ಪ್ರವರ್ಗವನ್ನೇ ರಚಿಸಿ ಕನಿಷ್ಠ ಶೇ 15ರಷ್ಟು ಮೀಸಲಾತಿ ನೀಡಲು ಒತ್ತಾಯಿಸುವುದು.
* ಉತ್ತರ ಕರ್ನಾಟಕದ ಪ್ರಮುಖ ಬೇಡಿಕೆಯಾದ ಕಳಸಾ ಬಂದೂರಿ, ಮಹದಾಯಿ ಸಮಸ್ಯೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇತ್ಯರ್ಥಪಡಿಸಬೇಕು. ಮಹದಾಯಿ ಯೋಜನೆ ಜಾರಿಗೊಳಿಸಿ ರಾಜ್ಯದ ಜನರಿಗೆ ನ್ಯಾಯ ಒದಗಿಸಬೇಕು.
* ಲಿಂಗಾಯತ ಸ್ವತಂತ್ರ ಧರ್ಮ ಪ್ರತಿಪಾದಿಸುತ್ತಿರುವ ಕಾಂಗ್ರೆಸ್ ನಾಲ್ವರು ಸಚಿವರಿಗೆ ವಕೀಲರ ನೋಟಿಸ್ ಜಾರಿಗೊಳಿಸಿದ ಶಶಿಧರ ಶಾನಭೋಗ ಅವರನ್ನು ಬೆಂಬಲಿಸುವುದು ಮತ್ತು ಮುಂದಿನ ಕಾನೂನು ಕ್ರಮಗಳಿಗೆ ನೆರವು ನೀಡುವುದು.
* ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೀರಶೈವರನ್ನು ಒಡೆಯಲು ಎಂ.ಬಿ.ಪಾಟೀಲ, ಬಸವರಾಜ ಹೊರಟ್ಟಿ ಹಾಗೂ ವಿನಯ ಕುಲಕರ್ಣಿ ಎಂಬ ಥ್ರೀ ಈಡಿಯಟ್ಸ್ ಗಳನ್ನ ಸಿದ್ಧಗೊಳಿಸಿದ್ದಾರೆ.












Click it and Unblock the Notifications