ಅಬ್ಬಿಗೇರಿಯಲ್ಲಿ ಪುರುಷರನ್ನು ಮೀರಿಸುವಂತೆ ನರೇಗಾ ಕೆಲಸ ಮಾಡಿ ಇನ್ನಿತರರಿಗೂ ಮಾದರಿಯಾದ ಮಂಗಳಮುಖಿ
ಗದಗ, ಏಪ್ರಿಲ್, 10: ಸಾಮಾನ್ಯವಾಗಿ ಮಂಗಳಮುಖಿಯರು ಟೋಲ್‌ಗೇಟ್, ಬಸ್ ನಿಲ್ದಾಣಗಳಲ್ಲಿ ಚಂದ ಎತ್ತುವುದನ್ನು ನೋಡಿರುತ್ತೇವೆ. ಆದರೆ ಗದಗ ಜಿಲ್ಲೆಯ ಮಾದೇವಿ ಅಸೂಟಿ ಎಂಬ ಮಂಗಳಮುಖಿಯೊಬ್ಬರು ಪುರುಷರನ್ನೂ ಮೀರಿಸುವಂತೆ ಹೊಲ, ಗದ್ದೆಗಳಲ್ಲಿ ಕೆಲಸ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಗದಗ ಜಿಲ್ಲೆಯ ಅಬ್ಬಿಗೇರಿ ಗ್ರಾಮದ ಮಾದೇವಿ ಅಸೂಟಿ ಎಂಬ ಮಂಗಳಮುಖಿ ಪುರುಷರ ರೀತಿಯಲ್ಲಿ ಹೀಗೆ ಕೆಲಸ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ರೈಲು ನಿಲ್ದಾಣ, ಬಸ್ ನಿಲ್ದಾಣ, ಜನಜಂಗುಳಿ ಸೇರಿದಂತೆ ಇತರಡೆ ಹಣ ವಸೂಲಿ ಮಾಡಿ ಬದುಕುತ್ತಿರುವ ಅದೆಷ್ಟೋ ಮಂಗಳಮುಖಿಯಾರಿಗೆ ಅಬ್ಬಿಗೇರಿ ಗ್ರಾಮದ ಮಾದೇವಿ ಅಸೂಟಿ ಮಾದರಿಯಾಗಿದ್ದಾರೆ. ತನ್ನ ತೋಳು ಬಲ ಹಾಗೂ ಶ್ರಮದಿಂದ ಬದುಕುತ್ತಿರುವ ಮಾದೇವಿ ಅವರ ಈ ಕಾರ್ಯಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಮಂಗಳಮುಖಿಯಾದರೂ ಪುರುಷರನ್ನೂ ಮೀರಿಸುವಂತೆ ಹೊಲ, ಗದ್ದೆ ಕೆಲಸವನ್ನು ಮಾಡುತ್ತಿದ್ದು, ಇದನ್ನು ನೋಡಿದ ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ನರೇಗಾ ಕೆಲ ಮಾಡಿ ಗಮನ ಸೆಳೆದ ಮಂಗಳಮುಖಿ
ಅಬ್ಬಿಗೇರಿ ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ನರೇಗಾ ಯೋಜನೆಯ ಬದುವು ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಯಲ್ಲಿ ಮಾದೇವಿ ಅವರ ಪ್ರಾಮಾಣಿಕ ಕೆಲಸ ನಿರ್ವಹಣೆ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಬದುವು ನಿರ್ಮಾಣ ಕಾಮಗಾರಿಯಲ್ಲಿ ಪಿಕಾಸಿ ಹಿಡಿದು ನೆಲ ಅಗಿಯುವುದು, ಮಣ್ಣು ಹೊರುವುದು ಸೇರಿದಂತೆ ಓರ್ವ ಗಂಡಾಳು ಏನು ಮಾಡುತ್ತಾನೋ ಅದನ್ನು ಅಚ್ಚುಕಟ್ಟಾಗಿ ಮುಗಿಸುವ ಮೂಲಕ ಅಲ್ಲಿನ ಅಧಿಕಾರಿ ವರ್ಗವನ್ನು ಹುಬ್ಬೇರಿಸುವಂತೆ ಮಾಡಿದ್ದಾರೆ.
ಓರ್ವ ಗಂಡಾಳು ಮಾಡುವ ಎಲ್ಲಾ ಕೆಲಸವನ್ನು ಮಾಡಿ ಮುಗಿಸುವ ಮೂಲಕ ಮಾದೇವಿ ಅಸೂಟಿ ಅವರು ಸೈ ಎನಿಸಿಕೊಂಡಿದ್ದಾರೆ. ಕೈಯಲ್ಲಿ ಪಿಕಾಸಿ ಹಿಡಿದು ನಿಂತರೆ ಯಾವುದೇ ಕೆಲಸವಾದರೂ ಅದನ್ನು ಮಾಡಿ ಮುಗಿಸೇ ಬರುತ್ತಾರೆ. ಅವರ ಅಚ್ಚುಕಟ್ಟಾದ ಕೆಲಸವಂತೂ ಇತರರಿಗೂ ಮಾದರಿ ಎಂದು ಮಂಗಳಮುಖಿಯ ಕಾರ್ಯಕ್ಕೆ ನರೇಗಾ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಬ್ಬಿಗೇರಿ ಗ್ರಾಮ ಪಂಚಾಯತಿ ವತಿಯಿಂದ ರೈತರ ಜಮೀನುಗಳಲ್ಲಿ ಕಳೆದು ಹಲವು ದಿನಗಳಿಂದ ಬದುಕು ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಭಿಕ್ಷೆ ಬೇಡಿ ಬದುಕುವುದಕ್ಕಿಂತ ಈ ರೀತಿ ದುಡಿದು ಬದುಕು ಸಾಗಿಸುವುದರಲ್ಲಿ ನನಗೆ ಸುಖ ಇದೆ ಎಂದು ಮಂಗಳಮುಖಿ ಮಾದೇವಿ ಅಸೂಟಿ ಹೇಳಿದ್ದಾರೆ.
ವಾಹನ ಸವಾರರಿಗೆ ನೆರಳು ನೀಡಿದ ಪೊಲೀಸ್ ವರಿಷ್ಠಾಧಿಕಾರಿ
ಜಿಲ್ಲೆಯಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದನ್ನರಿತ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ಎಸ್ ನೇಮಗೌಡ, ವಾಹನ ಸವಾರರಿಗೆ ಅನುಕೂಲ ಆಗುವಂತಹ ಉತ್ತಮ ಕೆಲಸವೊಂದನ್ನು ಮಾಡಿದ್ದಾರೆ. ಅವರ ಈ ಒಂದು ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆ ಸಾಮಾಜಿಕ ಕಳಾಕಳಿ ಕಾರ್ಯ ಯಾವುದು ಅಂತೀರಾ ಇಲ್ಲಿದೆ ನೋಡಿ ವಿವರ.
ನಗರದ ಪ್ರಮುಖ ಟ್ರಾಫಿಕ್ ಸಿಗ್ನಲ್‌ನಲ್ಲಿ ಬಿಸಿಲಿನ ಬೇಗೆಯಲ್ಲಿ ಒದ್ದಾಡುವ ವಾಹನ ಸವಾರರಿಗೆ ಹಸಿರು ನರ್ಸರಿ ತಾರ್ಪಾಲಿನ್ ಹಾಕಿ ನೆರಳು ಕಲ್ಪಿಸಿಕೊಡುವ ನೂತನ ವ್ಯವಸ್ಥೆ ಮಾಡಿದ್ದು, ಇದಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಟ್ರಾಫಿಕ್ ಕಿರಿಕಿರಿ ಮತ್ತು ಬಿಸಿಲಿನಿಂದ ಬೇಸತ್ತ ಜನರಿಗೆ ಇದು ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಳ್ಳಲು ಉತ್ತಮ ವ್ಯವಸ್ಥೆಯಾಗಿದೆ. ಎಷ್ಟೇ ಟ್ರಾಫಿಕ್ ಆದರೂ ಈ ಹಸಿರು ನರ್ಸರಿ ತಾರ್ಪಾಲಿನ್ ನೆರಳಿನಲ್ಲಿ ನಿಂತು ಸುಧಾರಿಸಿಕೊಂಡ ಬಳಿಕ ವಾಹನ ಸವಾರರು ಪ್ರಯಾಣವನ್ನು ಮುಂದುವರೆಸುತ್ತಾರೆ.
ಗದಗ-ಬೆಟಗೇರಿ ನಗರಸಭೆಯ ಸಂಯೋಗದೊಂದಿಗೆ ಮುಳುಗುಂದ ನಾಕಾ ಟ್ರಾಫಿಕ್ ಸಿಗ್ನಲ್‌ನಲ್ಲಿ ವಾಹನ ಸವಾರರು ಎದುರಿಸುವ ಬಿಸಿಲು ಬೇಗೆಯನ್ನು ನಿವಾರಿಸಲು ಹಸಿರು ನರ್ಸರಿ ತಾರ್ಪಾಲಿನ್ ಅಳವಡಿಸಲಾಗಿದೆ. ಈ ಮೂಲಕ ನೆರಳಿನ ವ್ಯವಸ್ಥೆಯನ್ನು ಮಾಡಲಾಗಿದ್ದು, ಇದು ವಾಹನ ಸವಾರರಿಗೆ ತುಂಬಾ ಅನುಕೂಲವಾಗಲಿದೆ ಎಂದು ಸಾಮಾಜಿಕ ಜಾಲತಾಣವಾದ ಟ್ವೀಟ್‌ನಲ್ಲಿ ಸಂತಸವನ್ನು ಹಂಚಿಕೊಂಡಿದ್ದಾರೆ.
ಸದ್ಯ ಪೊಲೀಸರ ಈ ಮಾನವೀಯ ಕಾರ್ಯಕ್ಕೆ ವಾಹನ ಸವಾರರು ಮತ್ತು ಸಾರ್ವಜನಿಕರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ಹಲವರು ಅವರ ಕಾರ್ಯ ಮೆಚ್ಚಿ ಕಾಮೆಂಟ್ ಮಾಡುತ್ತಿದ್ದಾರೆ. ಸುಮಾರು ವರ್ಷಗಳಿಂದ ಸಾಕಷ್ಟು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಆದರೆ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಬಿ.ಎಸ್. ನೇಮಗೌಡ ಮಾತ್ರ ಸಾರ್ವಜನಿಕರು ಬಿಸಿಲಿನಲ್ಲಿ ಬೇಯುತ್ತಿರುವುದನ್ನು ಮನಗೊಂಡು ಈ ಉತ್ತಮ ಕಾರ್ಯ ಮಾಡಿದ್ದು ನಿಜಕ್ಕೂ ಪ್ರಶಂಸನೀಯ.












Click it and Unblock the Notifications