ಯಶ್ ಹುಟ್ಟುಹಬ್ಬದ ಬ್ಯಾನರ್ ಕಟ್ಟುವಾಗ ವಿದ್ಯುತ್ ಅವಘಡ: ಮೂವರು ಯುವಕರು ಸಾವು
ಗದಗ, ಜನವರಿ 08: ಹುಟ್ಟುಹಬ್ಬದ ಬ್ಯಾನರ್ ಕಟ್ಟುವ ವೇಳೆ ವಿದ್ಯುತ್ ತಂತಿ ತಗುಲಿ ಮೂವರು ಯುವಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿದೆ. ಹನಮಂತ ಹರಿಜನ (21), ಮುರಳಿ ನಡವಿನಮನಿ (20) ಹಾಗೂ ನವೀನ್ ಗಾಜಿ (19) ಮೃತ ಯುವಕರು ಎಂದು ಗುರುತಿಸಲಾಗಿದೆ.
ಇಂದು(ಜನವರಿ 08)ರಂದು ಕನ್ನಡ ಚಿತ್ರರಂಗದ ನಟ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸೂರಣಗಿ ಗ್ರಾಮದ ಯುವಕರು ಬ್ಯಾನರ್ ಕಟ್ಟಲು ಹೋದ ಸಂದರ್ಭದಲ್ಲಿ ಈ ದುರಂತ ನಡೆದಿದೆ ಎನ್ನಲಾಗಿದೆ. ಹನಮಂತ ಹರಿಜನ, ಮುರಳಿ ನಡವಿನಮನಿ ಹಾಗೂ ನವೀನ್ ಗಾಜಿ ಸೇರಿದಂತೆ ಇನ್ನುಳಿದ ಯುವಕರು ಬ್ಯಾನರ್ ರಚಿಸಿ ನೀಲಗಿರಿ ತೋಪಿಗೆ ಕಟ್ಟುವ ಸಂದರ್ಭದಲ್ಲಿ ಮೇಲಿದ್ದ ವಿದ್ಯುತ್ ತಂತಿಗೆ ತಗುಲಿದೆ.

ಈ ವೇಳೆ ಏಕಾಏಕಿ ವಿದ್ಯುತ್ ಪ್ರವಹಿಸಿದ್ದು, ವಿದ್ಯುತ್ ಶಾಕ್‌ನಿಂದ ಮೂವರು ಯುವಕರು ಸಾವನ್ನಪ್ಪಿದ್ದಾರೆ. ಇನ್ನು ಘಟನೆಯಲ್ಲಿ ಮಂಜುನಾಥ್ ಹರಿಜನ, ದೀಪಕ ಹರಿಜನ ಹಾಗೂ ಪ್ರಕಾಶ ಮ್ಯಾಗೇರಿ ಎನ್ನುವ ಯುವಕರು ಗಂಭೀರ ಗಾಯಗೊಂಡಿದ್ದಾರೆ. ಯುವಕರು ಚೀರಾಟ ಕೇಳಿ ಸ್ಥಳೀಯರು ದೌಡಾಯಿಸಿದ್ದು, ಕೂಡಲೇ ಗಾಯಾಳು ಯುವಕರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಮೃತ ಯುವಕರ ಪೋಷಕರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಮಕ್ಕಳ ಮೃತದೇಹ ಕಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.












Click it and Unblock the Notifications