ಸಿಎಂ ಸ್ಥಾನಕ್ಕೆ ಸಿದ್ದು ಹೆಸರು: ಎಲ್ಲೆಲ್ಲೂ ಸಿದ್ದರಾಮಯ್ಯ ಭಾವಚಿತ್ರಕ್ಕೆ ಕ್ಷೀರಾಭಿಷೇಕ
ಗದಗ, ಮೇ 17: ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರ ಹೆಸರು ಬಹುತೇಕ ಅಂತಿಮವಾದ ಹಿನ್ನೆಲೆಯಲ್ಲಿ ಗದಗನಲ್ಲಿ ಬೆಂಬಲಿಗರ ಸಂಭ್ರಮ ಮುಗಿಲು ಮುಟ್ಟಿದೆ. ಗದಗ ಜಿಲ್ಲೆ ರೋಣ ತಾಲೂಕು ಯಾವಗಲ್ ಗ್ರಾಮದಲ್ಲಿ ವಿಜಯೋತ್ಸವ ಮಾಡಿರುವ ಬೆಂಬಲಿಗರು ಸಿದ್ದರಾಮಯ್ಯ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದ್ದಾರೆ.
ಯಾವಗಲ್ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದ ಮುಂದೆ ಸಿದ್ದರಾಮಯ್ಯ ಅವರ ದೊಡ್ಡ ಕಟೌಟ್ ನಿರ್ಮಿಸಿರುವ ಗ್ರಾಮಸ್ಥರು, ಸಿದ್ದರಾಮಯ್ಯ ಚಿತ್ರಕ್ಕೆ ಪೂಜೆ ಸಲ್ಲಿಸಿ ಹಾಲಿ ಅಭಿಷೇಕ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಪರ ಜೈಕಾರ ಕೂಗಿದ ಅಭಿಮಾನಿಗಳು ಎರಡನೇ ಬಾರಿ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೇರುತ್ತಾರೆ ಎಂದು ಸಂಭ್ರಮಿಸಿದ್ದಾರೆ.

ಗದಗ ನಗರದಲ್ಲಿ ಅಹಿಂದ ನಾಯಕರಿಂದ ವಿಜಯೋತ್ಸವ
ರಾಜ್ಯದ ಮುಖ್ಯಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರ ಹೆಸರು ಬಹುತೇಕ ಅಂತಿಮ ಎನ್ನುವ ಸುದ್ದಿ ಹೊರಬೀಳುತ್ತಿದ್ದಂತೆ ಗದಗ ನಗರದಲ್ಲಿ ಅಹಿಂದ ನಾಯಕರು ವಿಜಯೋತ್ಸವ ಮಾಡಿದ್ದಾರೆ. ಗದಗ ಜಿಲ್ಲಾ ಅಹಿಂದ ನಾಯಕ, ಫಕೀರಪ್ಪ ಹೆಬಸೂರು ನೇತೃತ್ವದಲ್ಲಿ ಅಹಿಂದ ಮುಖಂಡರು ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿರುವುದಕ್ಕೆ, ಬಹಳ ಖುಷಿಯಾಗಿದೆ.. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಅಹಿಂದ ನಾಯಕ ಸಿದ್ದರಾಮಯ್ಯನವರ ನಡುವೆ ಪೈಪೋಟಿ ಇತ್ತು. ಅಹಿಂದ ಜನರಿಗೆ ನ್ಯಾಯ ಸಿಗುತ್ತದೆ ಎನ್ನುವ ವಿಶ್ವಾಸ ಇದೆ. ಕಾಂಗ್ರೆಸ್ ಗ್ಯಾರಂಟಿ ಈಡೇರಿಸುತ್ತೇ ಎನ್ನುವ ವಿಶ್ವಾಸ ಇದೆ. ಹಿಂದೆ ಯಾವುದೇ ಜಾತಿ ಒಡೆಯುವ ಕೆಲಸವನ್ನ ಸಿದ್ಧರಾಮಯ್ಯ ಮಾಡಿಲ್ಲ ಎಂದು ಅಹಿಂದ ಮುಖಂಡರು ಹೇಳಿದ್ಧಾರೆ.
ವೀರಶೈವ ಲಿಂಗಾಯತ ಸಮಾಜಕ್ಕೆ ನ್ಯಾಯ ಒದಗಿಸುವದಕ್ಕೆ ಮುಂದಾಗಿದ್ದರು. ಸಿದ್ದರಾಮಯ್ಯ ಯಾವುದೇ ತುಷ್ಠಿಕರಣ ರಾಜಕಾರಣ ಮಾಡಿಲ್ಲ. ಇದೀಗ ಮತ್ತೊಮ್ಮೆ ಸಿದ್ಧರಾಮಯ್ಯ ಸಿಎಂ ಆಗಿದ್ದಾರೆ. ಇದರಿಂದ ಎಲ್ಲ ಸಮಾಜದವರಿಗೂ ನ್ಯಾಯ ಸಿಕ್ಕಿದಂತಾಗಿದೆ ಎಂದು ಸಂಭ್ರಮಿಸಿದ್ದಾರೆ.

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಬಹುತೇಕ ಫಿಕ್ಸ್: ಮುಗಿಲು ಮುಟ್ಟಿದ ಸಂಭ್ರಮ
ಬಳ್ಳಾರಿ: ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಹುತೇಕ ಅಂತಿಮ ಎನ್ನುವ ಸುದ್ದಿ ಹರಿದಾಡುತ್ತಿದ್ದಂತೆ ಬಳ್ಳಾರಿ ನಗರದಲ್ಲಿ ಹಾಲುಮತ ಮಹಾಸಭಾ ಬಳ್ಳಾರಿ ಜಿಲ್ಲಾ ಘಟಕದ ಕಾರ್ಯಕರ್ತರು ಹಾಗೂ ಅಭಿಮಾನ ಬಳಗದ ಸದಸ್ಯರು ಸಂಭ್ರಮಿಸಿದ್ದಾರೆ. ಕನಕ ದುರ್ಗಮ್ಮ ದೇವಸ್ಥಾನ ಮುಂದೆ 101 ತೆಂಗಿನ ಕಾಯಿ ಒಡೆದು ಸಿಹಿ ಹಂಚಿ ಸಂಭ್ರಮಿಸಿದ ಅಭಿಮಾನಿಗಳು ಸಿದ್ದರಾಮಯ್ಯ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ಪಟಾಕಿ ಸಿಡಿಸಿ ಜೈಕಾರ ಹಾಕಿ ಹರ್ಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಹಾಲುಮತ ಮಹಾಸಭಾ ಬಳ್ಳಾರಿ ಜಿಲ್ಲಾ ಘಟಕದ ಮುಖಂಡರಾದ ಈರನಗೌಡ, ಹೊನ್ನೂರು ಸ್ವಾಮಿ, , ಸೂರ್ಯದೇವಶಿವಪ್ಪ, ಶಿವಕುಮಾರ್, ಕೇಶವ, ವಿರುಪಾಕ್ಷ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.












Click it and Unblock the Notifications