ಶೀಘ್ರವೇ ನಾಡಗೀತೆಗೆ ಕತ್ತರಿ; ಸುಳಿವು ಕೊಟ್ಟ ಸಚಿವರು
ಗದಗ, ಮಾರ್ಚ್ 15; "ನಾಡಗೀತೆ ಸುಧೀರ್ಘವಾಗಿದ್ದು, ಅದರ ಘನತೆಗೆ ಧಕ್ಕೆ ಬಾರದ ಹಾಗೆ ಹಾಡುವ ಅವಧಿ ಕಡಿತಗೊಳಿಸಲು ಚಿಂತನೆ ನಡೆಸಲಾಗುತ್ತಿದೆ" ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಗದಗ ಜಿಲ್ಲೆಯ ಮುಂಡರಗಿಯಲ್ಲಿ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರ ಸಮ್ಮುಖದಲ್ಲಿ ನಡೆದ ಜಗದ್ಗುರು ಶ್ರೀ ಸಿದ್ದರಾಮೇಶ್ವರರ 849 ನೇ ಜಯಂತೋತ್ಸವ ಹಾಗೂ ಗದಗ ಜಿಲ್ಲಾ ಭೋವಿ ವಡ್ಡರ ಸಮಾಜದ ಬೃಹತ್ ಸಮಾವೇಶದಲ್ಲಿ ಸಚಿವರು ಮಾತನಾಡಿದರು.
"ಸದ್ಯಕ್ಕಿರುವ ನಾಡಗೀತೆ ಅವಧಿ ಸುದೀರ್ಘವಾಗುತ್ತಿದೆ. ನಾಡಗೀತೆಗೆ ಗೌರವ ಸೂಚಕವಾಗಿ ಎಲ್ಲರೂ ಎದ್ದು ನಿಲ್ಲುವುದು ಸಹಜ. ಗೀತೆ ಸುದೀರ್ಘವಾಗಿರುವುದರಿಂದ ನಿಂತ ವ್ಯಕ್ತಿಗಳು ಕುಸಿದು ಬೀಳುವ ಸಾಧ್ಯತೆ ಹೆಚ್ಚು" ಎಂದು ಸಚಿವರು ತಿಳಿಸಿದರು.

"ಈ ಗೀತೆಗೆ ಧಕ್ಕೆ ಬಾರದ ಹಾಗೆ ಕಡಿಮೆ ಅವಧಿಯಲ್ಲಿ ಮುಗಿಯುವ ಹಾಗೆ ಮಾಡುವ ಚಿಂತನೆ ನಡೆದಿದೆ. ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುತ್ತದೆ" ಎಂದರು.
"ನಾಡಗೀತೆ ದೊಡ್ಡದಾಗಿರುವುದರಿಂದ ಹಿರಿಯ ವಯಸ್ಕರು ನಿಂತುಕೊಳ್ಳಲು ಕಷ್ಟ ಆಗುತ್ತಿದೆ. ಹೀಗಾಗಿ ಹಿಂದೆಯೂ ನಾಡಗೀತೆ ಕಡಿತ ಮಾಡುವ ಬಗ್ಗೆ ಸಾಕಷ್ಟು ಚರ್ಚೆಗಳಾಗಿತ್ತು. ಕಡಿಮೆ ಅವಧಿಯಲ್ಲಿ ನಾಡಗೀತೆ ಹಾಡುವಂತೆ ಮಾಡಲು ಚಿಂತನೆ ನಡೆಸುತ್ತಿದ್ದೇವೆ" ಎಂದು ಅರವಿಂದ ಲಿಂಬಾವಳಿ ಹೇಳಿದರು.
ಸಾಹಿತ್ಯ ಸಮ್ಮೇಳನ ಮುಂದೂಡಿಕೆ?: ಹಾವೇರಿಯಲ್ಲಿ ನಡೆಯಬೇಕಿದ್ದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮತ್ತೆ ಮುಂದೂಡಲಾಗುತ್ತದೆ ಎಂದು ಸಚಿವರು ಸುಳಿವು ಕೊಟ್ಟಿದ್ದಾರೆ.
"ಮಾರ್ಚ್ 9ರಂದು ಸಮ್ಮೇಳನದ ದಿನಾಂಕ ನಿಗದಿ ಮಾಡಲು ಸಭೆ ನಡೆಯಬೇಕಿತ್ತು. ಆದರೆ, ಕರ್ನಾಟಕ ಸರ್ಕಾರ 500ಕ್ಕಿಂತ ಹೆಚ್ಚು ಜನ ಸೇರಬಾರದು ಎಂದು ಆದೇಶ ಹೊರಡಿಸಿರುವುದರಿಂದ ಸಮ್ಮೇಳನ ಮುಂದೂಡಿಕೆ ಬಗ್ಗೆ ನಾನು ಚಿಂತನೆ ಮಾಡುತ್ತಿದ್ದಾನೆ" ಎಂದು ಸಚಿವರು ಹೇಳಿದರು.












Click it and Unblock the Notifications