Breaking: ಪ್ರವಾದಿ ಬಗ್ಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದ ಮುಖ್ಯ ಶಿಕ್ಷಕ ಅಮಾನತು
ಗದಗ, ಸೆಪ್ಟೆಂಬರ್ 29: ಸರಕಾರದ ನಿರ್ದೇಶನ ಇಲ್ಲದಿದ್ದರೂ, ಪ್ರವಾದಿ ಕುರಿತು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಆಯೋಜಿಸಿದ ಆರೋಪದ ಮೇಲೆ ಗದಗ ತಾಲ್ಲೂಕಿನ ನಾಗಾವಿ ಗ್ರಾಮದ ಸರಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಅಬ್ದುಲ್ ಮುನಾಫ್ ಬಿಜಾಪೂರರನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತ ಸಿದ್ರಾಮಪ್ಪ ಎಸ್.ಬಿರಾದಾರ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಮುಖ್ಯಶಿಕ್ಷಕ ಅಬ್ದುಲ್ ಮುನಾಫ್ ಬಿಜಾಪೂರ ಶಾಲೆಯ 43 ವಿದ್ಯಾರ್ಥಿಗಳಿಗೆ 'ಮಹನ್ನದ (ಸ) ಎಲ್ಲರಿಗಾಗಿ' ಹಾಗೂ 'ಅಂತಿಮ ಪ್ರವಾದಿ ಮಹಮ್ಮದ (ಸ)' ಪುಸ್ತಕವನ್ನು ತರಗತಿಯಲ್ಲಿ ವಿತರಿಸಿ, ಶಿಕ್ಷಣ ಇಲಾಖೆ ಹಾಗೂ ಶಿಕ್ಷಕರಿಗೂ ಮಾಹಿತಿ ನೀಡದೆ ಪ್ರಬಂಧ ಸ್ಪರ್ಧೆಯನ್ನು ನಡೆಸಿದ್ದಾರೆ. ಉತ್ತಮ ಪ್ರಬಂಧಗಳಿಗೆ 5 ಸಾವಿರ ರೂಪಾಯಿ, 3 ಸಾವಿರ ರೂಪಾಯಿ, 2 ಸಾವಿರ ರೂಪಾಯಿ ಬಹುಮಾನವನ್ನು ಘೋಷಿಸಲಾಗಿದೆ.
ಪ್ರವಾದಿ ಬಗ್ಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿದ ಮುಖ್ಯೋಪಾಧ್ಯಾಯ: ಶ್ರೀರಾಮ ಸೇನೆ ಪ್ರತಿಭಟನೆ
ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಈ ರೀತಿ ಮಾಡಿರುವುದರಿಂದ ಹಾಗೂ ಪ್ರಾಥಮಿಕ ವಿಚಾರಣೆಯಲ್ಲಿ ಮೇಲುನೋಟಕ್ಕೆ ಆರೋಪ ಸಾಬೀತಾಗಿರುವುದರಿಂದ ಸರಕಾರದ ಅಧಿಸೂಚನೆಯನ್ವಯ ನನಗೆ ಪ್ರತ್ಯಾಯೋಜಿಸಿದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ವಿಚಾರಣೆಯನ್ನು ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಿ ಈ ಆದೇಶ ಹೊರಡಿಸಲಾಗಿದೆ ಎಂದು ಅವರು ಅಮಾನತು ಅದೇಶ ಪತ್ರದಲ್ಲಿ ತಿಳಿಸಿದ್ದಾರೆ.
ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಪ್ರವಾದಿ ಕುರಿತಾದ ಪುಸ್ತಕ ನೀಡಿ, ಇದೇ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆ ಆಯೋಜಿಸಿದ್ದಾರೆ ಎಂದು ಆರೋಪಿಸಿ ಶ್ರೀರಾಮ ಸೇನೆಯ ಗದಗ ಜಿಲ್ಲಾ ಘಟಕದ ಕಾರ್ಯಕರ್ತರು ಮಂಗಳವಾರ ಶಾಲೆಗೆ ನುಗ್ಗಿ ಮುಖ್ಯಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಪ್ರವಾದಿ ಕುರಿತು ಪ್ರಬಂಧ ಆಯೋಜಿಸಲು ಕಾರಣ?
ಮುಖ್ಯೋಪಾಧ್ಯಾಯ ಅಬ್ದುಲ್ ಮುನಾಫ್ ಬಿಜಾಪುರ ಹೇಳುವ ಪ್ರಕಾರ '' ಗದಗ ಮೂಲದ ಜುನೇದ್ ಸಾಬ್ ಉಮಚಗಿ ಎಂಬುವರು ಶಾಲೆಗೆ ಆಗಮಿಸಿ ಪ್ರವಾದಿ ಕುರಿತು ಪುಸ್ತಕ ವಿತರಿಸಿದರು. ಪುಸ್ತಕಗಳನ್ನು ಒದಿ ಅವರ ಕುರಿತು ಪ್ರಬಂಧ ಸ್ಪರ್ಧೆ ಆಯೋಜನೆ ಮಾಡಿದರೆ, ಉತ್ತಮ ಪ್ರಬಂಧಕ್ಕೆ ಬಹುಮಾನ ನೀಡುವುದಾಗಿ ಹೇಳಿದ್ದಾರೆ. ಪ್ರವಾದಿಯ ಕುರಿತು ಎರಡು ಪುಸ್ತಕ ನೀಡಿದ್ದ ಜುನೇದ್, ಉತ್ತಮ ಪ್ರಬಂಧಗಳಿಗೆ 5 ಸಾವಿರ ರೂಪಾಯಿ, 3 ಸಾವಿರ ರೂಪಾಯಿ, 2 ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಮುಖ್ಯೋಪಾಧ್ಯಾಯರಿಗೆ ತಿಳಿಸಿದ್ದಾರೆ. ಅವರ ಸೂಚನೆಯಂತೆ ಮುಖ್ಯೋಪಾಧ್ಯಾಯರು ಪ್ರಬಂಧ ಬರೆಯಲು ವಿದ್ಯಾರ್ಥಿಗಳಿಗೆ ಸೂಚಿಸಿದ್ದಾರೆ.