ಶಿಕ್ಷಕನ ಹಲ್ಲೆಯಿಂದ ವಿದ್ಯಾರ್ಥಿ ಸಾವು: ತಾಯಿ ಮೇಲಿನ ಕೋಪಕ್ಕೆ ಮಗನನ್ನು ಕೊಂದ ಆರೋಪಿ ಬಂಧನ
ಗದಗ, ಡಿಸೆಂಬರ್ 21: ಅತಿಥಿ ಶಿಕ್ಷನ ಹಲ್ಲೆಯಿಂದ ಬಾಲಕ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದಲ್ಲಿ ಡಿಸೆಂಬರ್ 19ರಂದು ನಡೆದಿತ್ತು.
ಹದ್ಲಿ ಗ್ರಾಮದ ನಿವಾಸಿ ಮುತ್ತಪ್ಪ(35) ಬಾಲಕನ ಸಾವಿನ ಪ್ರಕರಣದ ಆರೋಪಿ ಎಂದು ಗುರುತಿಸಲಾಗಿದೆ.
ಈ ಪ್ರಕರಣದ ಗದಗ ಜಿಲ್ಲಾ ಎಸ್‌ಪಿ ಶಿವಪ್ರಕಾಶ್ ದೇವರಾಜು, ಸಂಪೂರ್ಣ ಮಾಹಿತಿ ನೀಡಿದಿದ್ದಾರೆ. ಹದ್ಲಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆರೋಪಿ ಮುತ್ತಪ್ಪ ಅತಿಥಿ ಶಿಕ್ಷಕನಾಗಿದ್ದು, ಡಿಸೆಂಬರ್ 19 ಬೆಳಗ್ಗೆ 11:30 ಗಂಟೆ ಸುಮಾರಿಗೆ, ಶಾಲೆಯ ಮೊದಲ ಮಹಡಿಯಲ್ಲಿದ್ದ ಭರತ್ ತರಗತಿಗೆ ಹೋಗಿ ಹೊರಗಡೆ ಕರೆದುಕೊಂಡು ಬಂದು ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಬಳಿಕ ಬಾಲಕನನ್ನು ಮೊದಲನೇ ಮಹಡಿಯಿಂದ ಕೆಳಗೆ ಎಸೆದಿದ್ದಾನೆ. ಗಂಭೀರ ಗಾಯಗೊಂಡಿದ್ದ ಬಾಲಕನನ್ನು ಆಸ್ಪತ್ರೆಗೆ ಸಾಗಿಸುವ ವೇಳೆ, ಮಾರ್ಗಮಧ್ಯೆಯೇ ಭರತ್ ಸಾವನ್ನಪ್ಪಿದ್ದಾನೆ ಎಂದು ಎಸ್‌ಪಿ ತಿಳಿಸಿದ್ದಾರೆ.

ಮಾಹಿತಿ ಮುಂದುವರಿಸಿದ ಶಿವಪ್ರಕಾಶ್ ದೇವರಾಜು, ಆರೋಪಿ ಬಾಲಕನನ್ನು ಕೆಳಗೆ ಎಸೆದ ಮೇಲೆ ಶಿಕ್ಷಕಿ, ಭರತ್ ತಾಯಿಯ ಗೀತಾ ಬಾರಕೇರ ಮೇಲೆ ಸಲಾಕೆಯಿಂದ ಹಲ್ಲೆ ನಡೆಸಿದ್ದಾನೆ. ಗೀತಾ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಸ್ಥಿತಿ ಕೂಡ ಗಂಭೀರವಾಗಿದೆ.
ಘಟನೆಯ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿ ಮುತ್ತಪ್ಪನ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿತ್ತು. ಮಂಗಳವಾರ ಆರೋಪಿಯನ್ನು ಬಂಧಿಸಲಾಗಿದೆ. ಈ ಬಗ್ಗೆ ಸ್ಥಳೀಯರನ್ನು ವಿಚಾರಣೆ ನಡೆಸಿದಾಗ, ತಿಳಿದು ಬಂದ ವಿಷಯವೇನೆಂದರೆ. ಆರೋಪಿ ಮುತ್ತಪ್ಪ ಹಾಗೂ ಶಿಕ್ಷಕಿ ಗೀತಾ ನಡುವೆ ಮೊದಲಿನಿಂದಲೂ ಸಂಬಂಧ ಇತ್ತು. ಇತ್ತೀಚಿಗೆ ಶಾಲಾ ಪ್ರವಾಸದ ವೇಳೆ ಗೀತಾ ಬೇರೆ ಶಿಕ್ಷಕನ ಜೊತೆ ಸಲುಗೆಯಿಂದ ಇರುವುದನ್ನು ಕಂಡು ಮುತ್ತಪ್ಪ ಕೋಪಗೊಂಡಿದ್ದಾನೆ.
ಹೀಗಾಗಿ ಗೀತಾಗೆ ಸಂಬಂಧಿಸಿದ ಯಾವ ವ್ಯಕ್ತಿ ಸಿಕ್ಕರೂ ಹೊಡೆಯಬೇಕು ಎಂದು ಆರೋಪಿ ಮುತ್ತಪ್ಪ ಶಾಲೆಗೆ ಬಂದಿದ್ದಾನೆ. ಈ ವೇಳೆ ಬಾಲಕ ಭರತ್ ಸಿಕ್ಕಿದ್ದು, ಆತನ ಮೇಲೆ ಹಲ್ಲೆ ಮಾಡಿದ್ದಾನೆ. ಬಳಿಕ ಗೀತಾ ಹಾಗೂ ಸಂಗನಗೌಡನ ಮೇಲೂ ಆರೋಪಿ ಹಲ್ಲೆ ಮಾಡಿದ್ದಾನೆ. ಸದ್ಯ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದ್ದು, ನ್ಯಾಯಾಂಗ ಬಂಧನಕ್ಕೆ ನೀಡುತ್ತೇವೆ ಎಂದು ಎಸ್‌ಪಿ ಶಿವಪ್ರಕಾಶ್ ತಿಳಿಸಿದ್ದಾರೆ.

ಘಟನೆಯ ನಂತರ ಹದ್ಲಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಬಿಕೋ ಎನ್ನುತ್ತಿದ್ದು, ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಅತಿಥಿ ಶಿಕ್ಷನ ಕೃತ್ಯಕ್ಕೆ ಗ್ರಾಮಸ್ಥರು ಆಕ್ರೋಶಗೊಂಡಿದ್ದು, ಹಲ್ಲೆ ಮಾಡಿದ ಅತಿಥಿ ಶಿಕ್ಷಕ ಮುತ್ತಪ್ಪನಿಗೆ ಗಲ್ಲು ಶಿಕ್ಷೆ ನೀಡಿ, ಇಲ್ಲವಾದರೆ ನಮಗೆ ಕೊಡಿ ಕೊಚ್ವಿ ಹಾಕುತ್ತೇವೆ ಎಂದು ಕಿಡಿಕಾರಿದ್ದಾರೆ.












Click it and Unblock the Notifications