ಗದಗ: ಕೈ ಕೊಟ್ಟ ಮಳೆ, ಬೆಳೆ ಉಳಿಸಿಕೊಳ್ಳಲು ಚರಂಡಿ ನೀರಿಗೂ ಭಾರೀ ಬೇಡಿಕೆ
ಗದಗ, ಆಗಸ್ಟ್ 29: 'ಹೊತ್ತು ಬಂದಾಗ ಕತ್ತೆ ಕಾಲು ಹಿಡಿ' ಎನ್ನುವ ಗಾದೆ ಮಾತೊಂದಿದೆ. ಈಗ ಗದಗ ಜನರ ಸ್ಥಿತಿಯೂ ಅದೇ ಆಗಿದ್ದು, ಮಳೆ ಕೊರತೆಯಿಂದ ಒಣಗುತ್ತಿರುವ ಬೆಳೆ ರಕ್ಷಣೆಗೆ ರೈತರು ಚರಂಡಿ ನೀರು, ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ.
ಗದಗ ಜಿಲ್ಲೆಯ ಮಸಾರಿ ಭಾಗದ ಬೆಳೆಗಳು ಒಣಗಿದ್ದು, ಕಪ್ಪು ಮಣ್ಣಿನ ಜಮೀನಿನಲ್ಲಿ ಬೆಳೆಗಳು ಬಾಡಿವೆ. ಸಾವಿರಾರೂ ಖರ್ಚು ಮಾಡಿ ಬೆಳೆದಿರುವ ಶೇಂಗಾ, ಹತ್ತಿ, ಉಳ್ಳಾಗಡ್ಡಿ, ಮೆಣಸಿನಕಾಯಿ, ಹೆಸರು ಮತ್ತಿತರ ಬೆಳೆಗಳು ಬಿಸಿಲ ಹೊಡೆತಕ್ಕೆ ಕಮರುತ್ತಿವೆ. ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಬೋರ್‌ವೆಲ್ ಮತ್ತು ಇತರ ನೀರಿನ ಮೂಲ ಇಲ್ಲದೇ ಕೆಲ ರೈತರು ಜಮೀನು ಸಮೀಪದ ಚರಂಡಿ, ಹಳ್ಳದ ನೀರನ್ನು ಪಂಪ್‌ಸೆಟ್ ಮೂಲಕ ಬಳಸಿಕೊಳ್ಳುತ್ತಿದ್ದಾರೆ.

ಜುಲೈನಲ್ಲಿ ಸುರಿದ ಮಳೆಯಿಂದಾಗಿ ಗದಗ ಜಿಲ್ಲೆಯಾದ್ಯಂತ 32,200 ಹೆಕ್ಟೇರ್ ಕ್ಷೇತ್ರದಲ್ಲಿ ಗೋವಿನಜೋಳ ಬಿತ್ತನೆಯಾಗಿದೆ. ಇದೀಗ ತೇವಾಂಶದ ಕೊರತೆಯಿಂದ ಗಿಡಗಳು ಒಣಗುತ್ತಿದ್ದು, ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಮಾಡುತ್ತಿದ್ದಾರೆ. ಪಟ್ಟಣದಿಂದ ನಿತ್ಯ ಚರಂಡಿ ಮೂಲಕ ಹರಿಯುವ ನೀರನ್ನು ಹಳ್ಳದ ಅಕ್ಕಪಕ್ಕದ ರೈತರು ಬೆಳೆಗೆ ಬಳಸಿಕೊಳ್ಳುತ್ತಿದ್ದಾರೆ.
ತಾಲೂಕಿನ ಅಡರಕಟ್ಟಿ ಗ್ರಾಮದ ರೈತರು ಟ್ಯಾಂಕರ್ ಮೂಲಕ ಗೋವಿನ ಜೋಳದ ಬೆಳೆಗೆ ನೀರುಣಿಸುತ್ತಿದ್ದಾರೆ. ಕೊಂಡಿಕೊಪ್ಪ ಹತ್ತಿರವಿರುವ ಅವರ ಜಮೀನಿನ ಹತ್ತಿರದ ಹಳ್ಳದಲ್ಲಿ ನಿಂತಿರುವ ನೀರನ್ನು 2 ಟ್ರ್ಯಾಕ್ಟರ್ ಹಾಗೂ ಟ್ಯಾಂಕರ್ ಮೂಲಕ ನೀರೆತ್ತಿ ತಂದು ಸ್ಪಿಂಕ್ಲರ್ ಮೂಲಕ ಬೆಳೆಗೆ ನೀರಿನ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ಈ ಕಾರ್ಯ ಆರಂಭಿಸಿರುವ ಅವರು ಈಗಾಗಲೇ 10 ಎಕರೆ ಬೆಳೆಗೆ ನೀರು ಪೊರೈಸಿ ಒಣಗುತ್ತಿರುವ ಬೆಳೆಗೆ ಜೀವಕಳೆ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ರೈತರು 'ಕೃಷಿಯನ್ನೇ ಬದುಕಾಗಿಸಿಕೊಂಡಿರುವ ರೈತರಿಗೆ ಮಳೆಯೇ ಆಧಾರ. ಆದರೆ, ಮಳೆ ಕೈಕೊಟ್ಟಿದ್ದರಿಂದ ಬೆಳೆ ಉಳಿಸಿಕೊಳ್ಳದಿದ್ದರೆ ನಷ್ಟ ಅನುಭವಿಸಬೇಕಾಗುತ್ತದೆ. ಖರ್ಚು ಹೆಚ್ಚಾದರೂ ಸರಿ ಉತ್ತಮ ಬೆಲೆ ಸಿಕ್ಕರೆ ಪೂರ್ಣ ಪ್ರಮಾಣದ ನಷ್ಟದಿಂದ ತಪ್ಪಿಸಿಕೊಳ್ಳಬಹುದು. ಈ ಹಿಂದೆಯೂ ಒಣಗುತ್ತಿರುವ ಉಳ್ಳಾಗಡ್ಡಿ ಬೆಳೆಗೆ ಟ್ಯಾಂಕರ್ ನೀರು ಹಾಯಿಸಿ ನಷ್ಟದಿಂದ ಪಾರಾಗಿದ್ದೇವೆ. ಆದರೆ, ಎಲ್ಲಾ ರೈತರಿಗೂ ಇದು ಕಷ್ಟಸಾಧ್ಯ. ಸರ್ಕಾರ ತಾಲೂಕನ್ನು ಬರಪೀಡಿತ ಎಂದು ಘೋಷಿಸಿ ರೈತರ ಹಿತ ಕಾಪಾಡಬೇಕು' ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡರು.












Click it and Unblock the Notifications