ರಾಜ ರಾಜೇಂದ್ರ ಚೋಳ ಹಿಂದೂ ಅಲ್ಲ ಎಂದ ಕಮಲ್ ಹಾಸನ್‌ಗೆ ಬಿಎಲ್ ಸಂತೋಷ್ ತಿರುಗೇಟು
ಗದಗ, ಅಕ್ಟೋಬರ್ 10 : ಕಮಲ್ ಹಾಸನ್ ರಾಜ ರಾಜೇಂದ್ರ ಚೋಳ ಹಿಂದೂ ಅಲ್ಲ ಎಂದು ಹೇಳದೇ ಇದ್ದರೆ ಉತ್ತರ ಭಾರತದ ಜನರಿಗೆ ರಾಜ ರಾಜೇಂದ್ರ ಚೋಳ ಯಾರು ಅಂತಾ ಗೊತ್ತಿರುತ್ತಿರಲಿಲ್ಲ, ಅವರ ಬಗ್ಗೆ ಓದುತ್ತಲೂ ಇರಲಿಲ್ಲ, ಅದಕ್ಕಾಗಿ ಅವರಿಗೆ ಧನ್ಯವಾದ ಹೇಳಬೇಕು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದ್ದಾರೆ.
ನಗರದಲ್ಲಿ ಕಸಾಪ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 'ಪ್ರಜ್ಞಾ ಪ್ರವಾಹ ಜಯೋಸ್ತುತೆ ಸಾವಿರದ ಸಾವರ್ಕರ್' ಕಾರ್ಯಕ್ರಮದಲ್ಲಿ ಮಾತನಾಡಿ," ರಾಜ ರಾಜೇಂದ್ರ ಚೋಳ ಹಿಂದೂ ಅಲ್ಲ ಎಂದು ನಟ ಕಮಲ್ ಹಸನ್ ಹೇಳಿದ್ದಾರೆ. ಕಮಲ್ ಹಾಸನ್ ರಾಜೇಂದ್ರ ಚೋಳ ಹಿಂದೂ ಅಲ್ಲ ಎಂದ ಹೇಳದೇ ಇದ್ದರೆ ಉತ್ತರ ಭಾರತದ ಜನರು ರಾಜ ರಾಜೇಂದ್ರ ಚೋಳ ಯಾರು ಅಂತಾ ಓದುತ್ತಿರಲಿಲ್ಲ. ಕಮಲ್ ಹಾಸನ್ ಹಾಗೂ ಸಿದ್ದರಾಮಯ್ಯ ಅಂಥವರಿಂದ ದೇಶಕ್ಕೆ ಆಗುವ ದೊಡ್ಡ ಲಾಭ ಅಂದರೆ ಇದೆ. ಅವರ ಹೇಳಿಕೆಗಳ ನಂತರ ಜನರು ಆ ವಿಚಾರಗಳನ್ನು ಹೆಚ್ಚಿಗೆ ಓದಿ ತಿಳಿದುಕೊಳ್ಳುತ್ತಾರೆ ಎಂದರು.
ಬೃಹದೀಶ್ವರ ದೇವಸ್ಥಾನ ನಿರ್ಮಾಣ ಮಾಡಿದ್ದ ರಾಜ ರಾಜೇಂದ್ರ ಚೋಳ ಬಗ್ಗೆ ತಮಿಳುನಾಡಿನಲ್ಲಿ ಮೂರ್ಖರು ಚರ್ಚೆ ಎಬ್ಬಿಸಿದ್ದಾರೆ. ರಾಜ ರಾಜೇಂದ್ರ ಚೋಳ ಹಿಂದೂ ಅಲ್ಲ ಆವಾಗ ಹಿಂದೂಗಳೇ ಇರಲಿಲ್ಲ ಎನ್ನುತ್ತಿದ್ದಾರೆ. ರಾಜ ರಾಜೇಂದ್ರ ಚೋಳ ಕಾಲದಲ್ಲಿ ತಮಿಳುನಾಡು ಕೂಡಾ ಇರಲಿಲ್ಲ. ಚೋಳ, ಪಾಂಡ್ಯ ಹಾಗೂ ಪಲ್ಲವರ ಸಾಮ್ರಾಜ್ಯ ಇತ್ತು. ರಾಜ ರಾಜೇಂದ್ರ ಚೋಳ ಹೇಗೆ ದ್ರಾವಿಡರು ಆಗುತ್ತಾರೆ. ಬೃಹದೀಶ್ವರ ದೇವಾಲಯ, ವೇದಗಳ ಸಂಸ್ಕೃತಿ , ಸಂಗಮ ಕೃತಿಗಳ ಬಗ್ಗೆ ಬರಿಸಿದ್ದಾನೆ. ಆದರೂ ಆ ರಾಜ್ಯದ ಕೆಲವು ಮೂರ್ಖರು ರಾಜ ರಾಜೇಂದ್ರ ಚೋಳ ಹಿಂದೂ ಅಲ್ಲ ಎಂದರೂ ವ್ಯಂಗ್ಯವಾಡಿದರು.
ಸಾವರ್ಕರ್ ಬಗ್ಗೆ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಸಾವರ್ಕರ್ ಸೇರಿ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆಯನ್ನು ಮರೆಮಾಚಲಾಯಿತು. ಲಂಡನ್ ಪ್ರಭಾವವನ್ನೇ ಬೀರುವ ಶಿಕ್ಷಣ ನೀಡಲಾಯಿತು. ದೇಶಾಭಿಮಾನ ಮೂಡಿಸುವ ಶಿಕ್ಷಣ ಸ್ವಾತಂತ್ರ್ಯ ಕೊಡಲೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯರಿಗೆ ಧನ್ಯವಾದ
ಇತಿಹಾಸದಲ್ಲಿ ಯಾವ ನಾಯಕರನ್ನು ಅಳಿಸಲು ಕೆಲ ಶಕ್ತಿಗಳು ಹುನ್ನಾರ ನಡೆಸುತ್ತಿವೆಯೋ ಅಂತಹವರಿಗೆ ಸಿಗಬೇಕಾದ ಗೌರವವನ್ನು ಪ್ರಸ್ತುತ ಕೊಡುತ್ತಿದ್ದೇವೆ. ದೆಹಲಿ ಇಂಡಿಯಾ ಗೇಟ್ ಬಳಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆ ಸ್ಥಾಪಿಸುವ ಕೆಲಸವಾಗಿದೆ. ಸಾವರ್ಕರ್ ಅವರಂತೆ ಸಂಗೊಳ್ಳಿ ರಾಯಣ್ಣ ಅವರ ಬಗ್ಗೆಯೂ ಅರಿತುಕೊಳ್ಳಬೇಕು. ಸಾರ್ವಕರ್ ವಿರುದ್ಧ ಮಾತಾನಾಡುವವರು ಭಂಡ ಪ್ರಮುಖರು, ಎಲ್ಲರಲ್ಲೂ ಸಾವರ್ಕರ್ ಬಗ್ಗೆ ಅರಿತುಕೊಳ್ಳುವ ಮನೋಭಾವ ಹುಟ್ಟುವಂತೆ ಮಾಡಿದ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಎಂದರು.

ದೇಶದಲ್ಲಿ ಸಾಂಸ್ಕೃತಿಕ ಉಗ್ರವಾದ
ಸಮಾಜವನ್ನು ಹೊಂದಾಣಿಕೆಯಿಂದ ಮುನ್ನಡೆಸಲು ಸಾಧ್ಯವಿಲ್ಲ. ಪ್ರಖರತೆ, ಸ್ಪಷ್ಟತೆಯಿಂದ ಆಡಳಿತ ವ್ಯವಸ್ಥೆಬೇಕು ಎಂದು ಸಾವರ್ಕರ್‌ಗೆ ಗೊತ್ತಿತ್ತು. ಸ್ವಾತಂತ್ರ್ಯಾನಂತರ ಅವರಿಗೂ ಕೊಡಬೇಕಾದ ಗೌರವ ಅಂದಿನ ರಾಜಕಾರಣಿಗಳು ಕೊಡಲಿಲ್ಲ. ಈ ದೇಶದಲ್ಲಿ ಸಾಂಸ್ಕೃತಿಕ ಉಗ್ರವಾದ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಮೂಲ ಸಂಸ್ಕೃತಿ ಮರೆಮಾಚಲಾಗುತ್ತಿದೆ. ಆದರೆ ಈ ದೇಶದ ನೆಲ ಮೂಲವನ್ನು ಎಂದು ಬಿಟ್ಟು ಕೊಟ್ಟಿಲ್ಲ. ಅದಕ್ಕೆ ಉದಾಹರಣೆ ಇಂದು ಸಾವರ್ಕರ್ ಅವರಿಗೆ ಸಿಗುತ್ತಿರುವ ಗೌರವ ಎಂದು ಹೇಳಿದರು

ಸಾವರ್ಕರ್ ಬರಹದಿಂದ ದೇಶಭಕ್ತಿ
ಕಾವ್ಯದ ರೂಪದಲ್ಲಿ ರಾಮಾಯಣ ಕೊಟ್ಟಿದ್ದಕ್ಕೆ ವಾಲ್ಮೀಕಿ ಅವರನ್ನು ಆದಿ ಕವಿ ಎಂದು ಕರೆಯುತ್ತೇವೆ. ನ್ಯಾಯ, ಅನ್ಯಾಯ, ಧರ್ಮ ಹಾಗೂ ಅಧರ್ಮದ ಕುರಿತು ರಾಮಾಯಣದಲ್ಲಿ ಉಲ್ಲೇಖವಾಗಿದೆ. ಸಾವಿರಾರು ವರ್ಷಗಳ ನಂತರವೂ ರಾಮಾಯಣ ಪ್ರಸ್ತುತವಾಗಿವೆ. ಅದರ ಮೌಲ್ಯಗಳು ಎಂದಿಗೂ ಕಡಿಮೆಯಾಗುವುದಿಲ್ಲ. ಹಾಗೆಯೇ ವೀರ ಸಾವರ್ಕರ್ ಬರೆದ ಜಯೋಸ್ತುತೆ ಹಾಡು, ಬರಹಗಳು ಕೇಳುತ್ತಿದ್ದಂತೆ ಮನದಲ್ಲಿ ದೇಶಭಕ್ತಿ ತನ್ನಿಂತಾನೆ ಮೂಡುತ್ತದೆ ಎಂದು ಹೇಳಿದರು.

ಭಯದಿಂದ ಸಾವರ್ಕರ್ ಪುಸ್ತಕ ನಿಷೇಧ
ಸಾವು ಖಚಿತ ಎಂದು ಗೊತ್ತಿದ್ದರೂ ಸಾವರ್ಕರ್, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ಒಂದು ಹೆಜ್ಜೆ ಮುಂದಿಟ್ಟು ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಅಂತಹವರ ಬಗ್ಗೆ ಹಲವರು ಟೀಕೆ ಮಾಡುತ್ತಾರೆ. ಸ್ವಾತಂತ್ರ್ಯ ನಂತರ ಅನೇಕ ರಾಜಕಾರಣಿಗಳ ಕುಟುಂಬಸ್ಥರು ಎಸ್‌ಪಿಜಿ ಭದ್ರತೆಯೊಂದಿಗೆ ಓಡಾಡಿದ್ದಾರೆ. ಆದರೆ, ಸಾವರ್ಕರ್ ಅವರಿಗೆ ವಾಸಸಿಲು ಮನೆ ಕೊಡಲಿಲ್ಲ. ಅವರ ಹಲವು ಪುಸ್ತಕಗಳಿಗೆ ಪ್ರಕಟಣೆ ನಂತರ ನಿಷೇಧ ಹೇರಲಾಯಿತು. ಕೆಲವನ್ನು ಪ್ರಕಟಣೆಗೂ ಮೊದಲೇ ನಿಷೇಧ ಮಾಡಲಾಗಿತ್ತು. ಬ್ರಿಟಿಷರಿಗೆ ಇವರ ಬಗ್ಗೆ ಭಯ ಇದ್ದಿದ್ದರಿಂದ ಹೀಗೆ ಮಾಡಿದರು ಎಂದು ಹೇಳಿದರು.
ಮತ್ತೊಂದು ಕಡೆ ಸಾವರ್ಕರ್ ಕ್ಷಮಾಪಣೆ ಕೇಳಿದ್ರು ಎಂಬ ವಿಚಾರವನ್ನಿಟ್ಟುಕೊಂಡು ರಾಜ್ಯದಲ್ಲಿ ಚರ್ಚೆಯಾಗ್ತಿದೆ. ಇವರು ಮುಖ್ಯಮಂತ್ರಿ ಇದ್ದಾಗ ಬಂದು ಕ್ಷಮಾಪಣೆ ಕೇಳಿದ್ದರು ಅನ್ನೋ ಹಾಗೇ ಹೇಳ್ತಾರೆ. ಏಕವಚನದ ಬ್ರಹ್ಮ, ಬಂಡತನದ ಸರದಾರ, ದೇಶ ಭಕ್ತರ ಬಗ್ಗೆ ನಯಾಪೈಸೆ ಗೊತ್ತಿಲ್ಲದ ವ್ಯಕ್ತಿ ಇವತ್ತು ರಾಜ್ಯದಲ್ಲಿ ಸಾವರ್ಕರ್ ಬಗ್ಗೆ ಮಾತಾಡುತ್ತಾರೆ ಎಂದು ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ ನಡೆಸಿದರು.












Click it and Unblock the Notifications