ಬೆಂಗಳೂರು-ಗದಗ ಬಸ್ ಸೇವೆಗಾಗಿ ಸಿದ್ದರಾಮಯ್ಯಗೆ ಮಾಜಿ ಕ್ರಿಕೆಟಿಗನ ಮನವಿ
ಗದಗ, ಆಗಸ್ಟ್ 20: ಬೆಂಗಳೂರು-ಗದಗ ನಡುವಿನ ಕೆಎಸ್ಆರ್‌ಟಿಸಿ ವೊಲ್ವೋ ಬಸ್ ಸೇವೆ ಪುನಃ ಆರಂಭಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನ ಸೆಳೆಯಲಾಗಿದೆ. ಮಾಜಿ ಕ್ರಿಕೆಟಿಗರೊಬ್ಬರು ಈ ಕುರಿತು ಟ್ವೀಟ್ ಮಾಡಿದ್ದಾರೆ. 2023ರಲ್ಲಿ ಆಗ ಸಾರಿಗೆ ಸಚಿವರಾಗಿದ್ದ ಬಿ. ಶ್ರೀರಾಮುಲು ಬೆಂಗಳೂರು-ಗದಗ ನಡುವೆ ಐರಾವತ ವೊಲ್ವೋ ಬಸ್ ಸೇವೆಯನ್ನು ಉದ್ಘಾಟಿಸಿದ್ದರು.
ಮಾಜಿ ಕ್ರಿಕೆಟಿಗ ಸುನೀಲ್ ಜೋಶಿ ಈ ಕುರಿತು ಟ್ವೀಟ್ ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮತ್ತು ಪ್ರವಾಸೋದ್ಯಮ ಸಚಿವ ಎಚ್. ಕೆ. ಪಾಟೀಲ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಬಸ್ ಸೇವೆಯನ್ನು ಪುನಃ ಆರಂಭಿಸಿ ಎಂದು ಮನವಿ ಮಾಡಿದ್ದಾರೆ.

ಪೋಸ್ಟ್‌ನಲ್ಲಿ ಏನಿದೆ?: ಸುನೀಲ್ ಜೋಶಿ ತಮ್ಮ ಟ್ವೀಟ್‌ನಲ್ಲಿ, 'ನಿರೀಕ್ಷೆಯಿಲ್ಲದೆ ಬೆಂಗಳೂರುದಿಂದ ಗದಗಕ್ಕೆ ಹೋಗುವ ವೋಲ್ವೋ ಬಸ್ ಸೇವೆಯನ್ನು ರದ್ದುಗೊಳಿಸಲಾಗಿದೆ, ಮತ್ತು ಇದಕ್ಕೆ ಯಾವುದೇ ವಿವರ ನೀಡಲಾಗಿಲ್ಲ. ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರಿಗೆ, ಈ ವಿಷಯದಲ್ಲಿ ತಕ್ಷಣವೇ ಚರ್ಚಿಸಬೇಕೆಂದು ವಿನಂತಿಸುತ್ತೇನೆ. ನಿಮ್ಮ ಸಹಕಾರ ತುಂಬಾ ಮೆಚ್ಚುಗೆಯಾಗುತ್ತದೆ' ಎಂದು ಪೋಸ್ಟ್ ಹಾಕಿದ್ದಾರೆ.
'ನಮ್ಮ ಶಾಶಕರಾದ HK Patil sir & ಶ್ರೀ Ramalinga Reddy sir ದಯವಿಟ್ಟು ಈ ಬಸ್ ಅನ್ನು ಮತ್ತೆ ಶುರು ಮಾಡಿ ಅಂತ ವಿನಂತಿಯಿಂದ ಕೇಳಿಕೊಳ್ಳುತ್ತೇನೆ, ಜೈ ಕನಾಟಕ' ಎಂದು ಪೋಸ್ಟ್‌ನಲ್ಲಿ ಮನವಿ ಮಾಡಿದ್ದಾರೆ.
ಈ ಹಿಂದೆ ಸುನೀಲ್ ಜೋಶಿ ಅವರ ಮನವಿಯಂತೆಯೇ ಆಗ ಸಾರಿಗೆ ಸಚಿವರಾಗಿದ್ದ ಬಿ. ಶ್ರೀರಾಮುಲು ಬೆಂಗಳೂರು-ಗದಗ ನಡುವಿನ ಕೆಎಸ್ಆರ್‌ಟಿಸಿ ವೊಲ್ವೋ ಬಸ್ ಸೇವೆಗೆ ಚಾಲನೆ ನೀಡಿದ್ದರು. 2023ರ ಜನವರಿ 9ರಿಂದ ಬೆಂಗಳೂರು-ಗದಗ ನಡುವೆ ವೊಲ್ವೋ ಬಸ್ ಸಂಚಾರ ಆರಂಭವಾಗಿತ್ತು.
2023ರಲ್ಲಿ ಆರಂಭವಾದ ಬೆಂಗಳೂರು-ಗದಗ ನಡುವಿನ ಕೆಎಸ್ಆರ್‌ಟಿಸಿ ವೊಲ್ವೋ ಬಸ್ ಚಿತ್ರದುರ್ಗ, ಹರಿಹರ, ಮುಂಡರಗಿ ಮಾರ್ಗವಾಗಿ ಸಂಚಾರ ನಡೆಸುತ್ತಿತ್ತು. ಆದರೆ ಈಗ ಬಸ್ ಸೇವೆ ಸ್ಥಗಿತವಾಗಿದೆ ಎಂದು ಮಾಜಿ ಕ್ರಿಕೆಟಿಗ ಸುನೀಲ್ ಜೋಶಿ ಹೇಳಿದ್ದಾರೆ.
ಈ ಬಸ್ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದ ಟರ್ಮಿನಲ್-1ರಿಂದ ಮಧ್ಯಾಹ್ನ 2 ಗಂಟೆಗೆ ಐರಾವತ ಬಸ್ ಹೊರಟು, ನವರಂಗ್, ಯಶವಂತಪುರ ಗೋವರ್ಧನ್ ಚಿತ್ರಮಂದಿರ, ಗೊರಗುಂಟೆಪಾಳ್ಯ ಕೆಎಲ್‌ಇ ಡೆಂಟಲ್ ಕಾಲೇಜು, ಜಾಲಹಳ್ಳಿ ಕ್ರಾಸ್, ನೆಲಮಂಗಲ ಮೂಲಕ ಬಸ್ ಸಾಗಿ ದಾವಣಗೆರೆ ಹರಿಹರ, ಹರಪನಹಳ್ಳಿ, ಹೂವಿನ ಹಡಗಲಿ, ಮುಂಡರಗಿ ಮೂಲಕ ಸಂಚಾರ ನಡೆಸಿ 6.15ಕ್ಕೆ ಗದಗ ತಲುಪುತ್ತಿತ್ತು.
ಈ ಬಸ್ ಸೇವೆ ಏಕೆ ಸ್ಥಗಿತವಾಗಿದೆ ಎಂದು ಸಾರಿಗೆ ಸಚಿವರಾಗಲಿ, ಸಚಿವ ಎಚ್. ಕೆ. ಪಾಟೀಲ್ ಆಗಲಿ ಸುನೀಲ್ ಜೋಶಿ ಟ್ವೀಟ್‌ಗೆ ಯಾವುದೇ ಪ್ರತಿಕ್ರಿಯೆಯನ್ನು ಇನ್ನೂ ನೀಡಿಲ್ಲ. ಈ ಬಸ್ ಸೇವೆ ಆರಂಭವಾದರೆ ಹಲವು ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ.
2023ರಲ್ಲಿ ಟ್ವೀಟ್ ಮಾಡಿದ್ದ ಸುನೀಲ್ ಜೋಶಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಾರಿಗೆ ಸಚಿವ ಬಿ. ಶ್ರೀರಾಮುಲು ಟ್ಯಾಗ್ ಮಾಡಿದ್ದರು. 'ನನ್ನ ವಿನಯ ಪೂರ್ವಕ ಮನವಿ ಬೆಂಗಳೂರಿನಿಂದ ಗದಗಕ್ಕೆ ವೊಲ್ವೋ ಬಸ್ ಸೇವೆ ಆರಂಭವಾಗಬೇಕು. ಇದಕ್ಕಾಗಿ ನಾವು 25 ವರ್ಷಗಳಿಂದ ಕಾಯುತ್ತಿದ್ದೇವೆ. ಇದು 'ಐರಾವತ' ಬಸ್ ಗದಗಕ್ಕೆ ಬರುವ ಸಮಯ' ಎಂದು ಹೇಳಿದ್ದರು. ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದ ಬಿ. ಶ್ರೀರಾಮುಲು ಜನವರಿ 9ರಿಂದಲೇ ಬಸ್ ಸಂಚಾರ ನಡೆಸಲಿದೆ ಎಂದು ಹೇಳಿದ್ದರು, ಬಸ್ ಆರಂಭವಾಗಿತ್ತು.












Click it and Unblock the Notifications