Lakkundi Utsava 2023: 1 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ
2023ರ ಲಕ್ಕುಂಡಿ ಉತ್ಸವಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬಿಡುಗಡೆ ಮಾಡಿದ ಅನುದಾನದ ವಿವರ ಇಲ್ಲಿದೆ.
ಗದಗ, ಫೆಬ್ರವರಿ, 02: ಐತಿಹಾಸಿಕ ಲಕ್ಕುಂಡಿ ಉತ್ಸವಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು 1 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದಾರೆ. ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಲಕ್ಕುಂಡಿಯಲ್ಲಿ ಹೇಳಿದರು.
ತಾಲೂಕಿನ ಲಕ್ಕುಂಡಿ ಗ್ರಾಮದ ಅನ್ನದಾನೇಶ್ವರ ಮಠದ ಸಭಾ ಭವನದಲ್ಲಿ ಲಕ್ಕುಂಡಿ ಉತ್ಸದ ಲೋಗೋ ಹಾಗೂ ಬ್ಯಾನರಗಳನ್ನು ಅನಾವರಣಗೊಳಿಸಿ ಅವರು ಮಾತನಾಡಿದರು. ಫೆಬ್ರವರಿ 10, 11 ಹಾಗೂ 12ರಂದು ಮೂರು ದಿನಗಳ ಕಾಲ ನಡೆಯುವ ಲಕ್ಕುಂಡಿ ಉತ್ಸವದಲ್ಲಿ ಸಮಯದ ಹೊಂದಾಣಿಕೆ ಮಾಡಲಾಗುವುದು. ಸ್ಥಳೀಯ ಕಲಾವಿದರಿಗೆ ಪ್ರಾಶಸ್ತ್ಯ, ಪ್ರಾತಿನಿಧ್ಯ ಸಿಗಬೇಕು ಎನ್ನುವ ದೃಷ್ಟಿಯಲ್ಲಿ ಸಮಯ ಹೊಂದಾಣಿಕೆಯನ್ನು ಮಾಡಲಾಗುತ್ತಿದೆ. ಲಕ್ಕುಂಡಿಯ ಬಿ.ಎಚ್. ಪಾಟೀಲ ಹೈಸ್ಕೂಲ್ ಆವರಣದಲ್ಲಿ ರಾಣಿ ಚೆನ್ನಮ್ಮ ನಾಟಕ ಪ್ರದರ್ಶನ ನಡೆಯಲಿದೆ ಎಂದರು.
ಹಲವು ಗಣ್ಯರಿಗೆ ಆಮಂತ್ರಣ
ಸಸಿ ನೆಡುವ ಮೂಲಕ ಲಕ್ಕುಂಡಿ ಉತ್ಸವ ಉದ್ಘಾಟನೆಗೊಳ್ಳಲಿದ್ದು, ಸಚಿವರಾದ ಬಿ.ಸಿ. ಪಾಟೀಲ್, ಗೋವಿಂದ ಕಾರಜೋಳ, ಸುನೀಲ್ ಕುಮಾರ್ ಸೇರಿ ಹಲವು ಸಚಿವರಿಗೆ ಆಮಂತ್ರಣ ನೀಡಲಾಗಿದೆ ಎಂದು ಹೇಳಿದರು.
ಈ ಉತ್ಸವದ ಮೂಲಕ ಲಕ್ಕುಂಡಿ ಗ್ರಾಮದ ಪರಂಪರೆಯನ್ನು ನಾಡಿನಾದ್ಯಂತ ಪಸರಿಸುವ ಉದ್ದೇಶ ಇಟ್ಟುಕೊಳ್ಳಲಾಗಿದೆ. ಗ್ರಾಮಸ್ಥರ ಪಾಲ್ಗೊಳ್ಳಲುವಿಕೆ ಮತ್ತು ಸಹಕಾರ ಅತಿ ಮುಖ್ಯವಾಗಿದೆ. ಹಾಗೆಯೇ ಉಪಹಾರ, ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ನಡೆಸಲು ಉದ್ದೇಶಿಸಲಾಗಿದೆ ಎಂದರು.

ಖ್ಯಾತ ಗಾಯಕರಿಂದ ಸಂಗೀತ ಕಾರ್ಯಕ್ರಮ
ಗ್ರಾಮದ ಸೌಂದರ್ಯ ಹೆಚ್ಚಿಸುವ ಸಲುವಾಗಿ ಗ್ರಾಮಸ್ಥರು ತಮ್ಮ ಹಂತದಲ್ಲಿ ಪ್ರಯತ್ನಿಸಿ ಎಂದು ಮನವಿ ಮಾಡಿದರು. ಇನ್ನು ಖ್ಯಾತ ಗಾಯಕರಾದ ಕುನಾಲ್ ಗಾಂಜಾವಾಲಾ, ಅನನ್ಯ ಭಟ್ ಸೇರಿದಂತೆ ಇನ್ನಿತರ ಗಾಯಕರು ಸಂಗೀತ ಕಾರ್ಯಕ್ರಮದ ಮೂಲಕ ಜನರನ್ನು ರಂಜಿಸಲಿದ್ದಾರೆ. ಹಾಗೆಯೇ ಕಾರ್ಯಕ್ರಮದಲ್ಲಿ ಲಕ್ಕುಂಡಿ ಹಾಗೂ ಜಿಲ್ಲೆಯ ವಿಧಾನಸಭಾ ಮತಕ್ಷೇತ್ರದ ಕಲಾವಿದರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಉಷಾ ದಾಸರ, ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತಾ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ಜಿಲ್ಲಾ ಪಂಚಾಯತ್ ಸಿಇಒ ಡಾ. ಸುಶೀಲಾ ಬಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಾಬಾಸಾಬ್ ನೇಮಗೌಡ, ಎಸಿಎಫ್ ದೀಪಿಕಾ ಬಾಜಪೇಯಿ, ಉಪವಿಭಾಗಧಿಕಾರಿ ಅನ್ನಪೂರ್ಣ ಎಂ., ಸೇರಿದಂತೆ ಮತ್ತಿತರರು ಹಾಜರಿದ್ದರು.












Click it and Unblock the Notifications