ವಿಧಾನಸೌಧ ಅಲ್ಲ ಚುನಾವಣೆ ಬಳಿಕ ನೇರ ತಿಹಾರ್ ಜೈಲಿಗೆ: ಡಿಕೆಶಿ ವಿರುದ್ಧ ಯತ್ನಾಳ್ ಕಿಡಿ
ಗದಗ, ಮೇ 03: ವಿಜಯಪುರದಲ್ಲಿ ಒಂದು ಲಕ್ಷ ಪಾಕಿಸ್ತಾನಿ ಮತದಾರರಿದ್ದಾರೆ. ನಿಮ್ಮ ಒಂದೇ ಒಂದು ವೋಟ್ ನನಗೆ ಬೇಡ. ನಾನು ಹಿಂದೂಗಳಿಂದಲೇ ಆರಿಸಿ ಬರುವೆ ಎಂದು ಹೇಳಿದ್ದೆ. ಆ ಮಾತಿಗೆ ಈಗಲೂ ಬದ್ಧ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಮಂಗಳವಾರ ರಾತ್ರಿ ಗದಗ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಪರ ರೋಡ್ ಶೋ ನಡೆಸಿ ಮಾತನಾಡಿದ ಅವರು, ಇಂದು ನಮ್ಮ ಮಂದಿಗೆ ಕಿಮ್ಮತ್ತಿಲ್ಲ ಎನ್ನುವಂತಾಗಿದೆ. ಈ ದೇಶದಲ್ಲಿ ಮುಸ್ಲೀಮರಿಗಾಗಿ ನಾವಿದ್ದೀವಾ? ಎನ್ನುವಂತಾಗಿದೆ. ಗಣಪತಿ ಹಬ್ಬ ಸೇರಿ ಎಲ್ಲದಕ್ಕೂ ನಮಗೆ ಅನುಮತಿ ಬೇಕು. ಪೊಲೀಸರು ಸುಪ್ರೀಂ ಕೋರ್ಟ್ ಆರ್ಡರ್ ಇದೆ, ಮೈಕ್ ಹಾಕಬೇಡಿ ಎನ್ನುತ್ತಾರೆ ಎಂದರು.

ನಮಗೆ ಮೈಕ್ ಹಾಕಬೇಡಿ ಅಂತಾರೆ, ಡಿ.ಜೆ ಹಾಕಬೇಡಿ ಅಂತಾರೆ. ಗಣಪತಿ ಕೂರಿಸಲಿಕ್ಕೆ ಅನುಮತಿ ಬೇಕು ಅಂತಾರೆ. ಆದರೆ, ನಮ್ಮ ವಿಜಯಪುರದಲ್ಲಿ ಇದೆಲ್ಲವನ್ನೂ ತೆಗೆದು ಹಾಕಿದ್ದೇನೆ. ಪೊಲೀಸರು ಹಾಗೂ ಕಾರ್ಪೋರೇಶನ್ ಅಧಿಕಾರಿಗಳು ಗಣಪತಿ ಕುರಿಸುವ ಪೆಂಡಾಲ್ ಬಳಿ ಅವರೇ ಬಂದು ಬರೆದುಕೊಂಡು ಬರಬೇಕು. ಗಣಪತಿ ಕೂರಿಸಲಿಕ್ಕೆ ಮೊದಲು ನಾಲ್ಕೂವರೆ ಸಾವಿರ ತೆಗೆದುಕೊಳ್ಳುತ್ತಿದ್ದರು. ಆದರೆ ಈಗ ಯಾವುದಕ್ಕೂ ರೊಕ್ಕ ಇಲ್ಲ, ರೂಪಾಯಿ ಇಲ್ಲ. ಎಲ್ಲವೂ ಉಲ್ಟಾ ಆಗಿದೆ. ನಾನೇ ಒಂದೊಂದು ಗಣಪತಿಗೆ ಐದು ಸಾವಿರ ಕೊಡುತ್ತೇನೆ, ಕಾಂಗ್ರೆಸ್ ಪಕ್ಷ ಮುಸ್ಲಿಂ ಪರವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳ ಬ್ಯಾನ್ ಭರವಸೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಬಸನಗೌಡ ಪಾಟೀಲ್ ಯತ್ನಾಳ್, ಕರ್ನಾಟಕದವರು ನಿಮ್ಮನ್ನೇ ಬ್ಯಾನ್ ಮಾಡಲಿದ್ದಾರೆ. ಇನ್ನು ನೀವೇನು ಬ್ಯಾನ್ ಮಾಡುತ್ತೀತಿ? ಎಂದು ವ್ಯಂಗ್ಯವಾಡಿದರು. ಅಲ್ಲದೇ ನಿಮಗೆ ಕಡೆಗಾಲ ಬಂದಿದೆ. ಈಗಾಗಲೇ ಹೆಲಿಕಾಪ್ಟರ್‌ನಲ್ಲಿ ಹೋದಾಗ ನಮ್ಮ ಹನುಮಪ್ಪ ದೇವರು ತೋರಿಸಿದ್ದಾನೆ. ಇದು ತಾಲಿಬಾನ್ ಅಲ್ಲ. ಚುನಾವಣೆ ಮುಗಿದ ಮೇಲೆ ವಿಧಾನಸೌಧಕ್ಕೆ ಹೋಗಲ್ಲ, ನೇರ ತಿಹಾರ್ ಜೈಲಿಗೆ ಹೋಗುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದರು.

ಕಾಂಗ್ರೆಸ್‌ನವರು ಎಲ್ಲಾ ಲೂಟಿ ಹೊಡೆದಿದ್ದಾರೆ. ಆದರೆ ಈಗ ನಮಗೆ ಭ್ರಷ್ಟಾಚಾರ ಎಂದು ಹೇಳುತ್ತಾರೆ. ಇವರು ತಿಹಾರ್ ಜೈಲಿಗೆ ಹೋಗಿದ್ದು ಸ್ವಾತಂತ್ರ್ಯ ಹೋರಾಟಕ್ಕಾ? ಅಲ್ಲ ಮಹದಾಯಿ ನೀರಿನ ಸಲುವಾಗಿ ಹೋಗಿದರಾ? ಅಥವಾ ಮೇಕೆದಾಟು ದಾಟಲು ಹೋಗಿದ್ದರಾ? ಮಾಡೋದೆಲ್ಲ ಕಳ್ಳತನ, ಮತ್ತೆ ಬಿಜೆಪಿಯವರ ಮೇಲೆ 40% ಎಂದು ಹೇಳುತ್ತಾರೆ? ಇಡೀ ಕನಕಪುರದಲ್ಲಿ ಗುಡ್ಡಗಳೆಲ್ಲ ಖಾಲಿಯಾಗಿವೆ ಎಂದು ಡಿಕೆಶಿ ವಿರುದ್ಧ ವ್ಯಂಗ್ಯವಾಡಿದರು.
ಭಜರಂಗದಳ ಏನಾದರೂ ದೇಶದ್ರೋಹಿ ಕೆಲಸ ಮಾಡಿದೆಯಾ? ಭಯೋತ್ಪಾದನೆ ಕೆಲಸ ಮಾಡಿದೆಯಾ? ಕೇಸರಿ ಹಾರಿಸಿದ್ದು ತಪ್ಪಾ? ಭಜರಂಗದಳ ಎನ್ನುವುದು ಹನುಮಾನ್ ದೇವರ ಒಂದು ಶಕ್ತಿ. ಈ ದೇಶದಲ್ಲಿ ಇವತ್ತಿನ ರಾಮ ಅಂದ್ರೆ ನರೇಂದ್ರ ಮೋದಿ. ಹನುಮಂತ ಯಾರು ಅಂದ್ರೆ ಯೋಗಿ ಆದಿತ್ಯನಾಥರು. ಲಕ್ಷ್ಮಣ ಯಾರು ಅಂದ್ರೆ ಅಮಿತ ಶಾ ಅವರು. ನಿಮ್ಮದು ವಾದ್ರಾ ಯಾರೋ, ಗೊಡ್ರಾ ಯಾರೋ, ಗಾಂಧಿ ಯಾರೋ ಗುರುತೇ ಇಲ್ಲ. ಇವೆಲ್ಲ ಡುಪ್ಲಿಕೇಟ್ ಗಾಂಧಿಗಳು ಯಾರದೋ ವಿಳಾಸ ತಂದು ಹಚ್ಚಿಕೊಂಡು ಹುಟ್ಟಿವೆ. ಆ ರೀತಿ ಹಚ್ಚಿಕೊಂಡು ಗಾಂಧಿ ಹೆಸರಿನಲ್ಲಿ ದೇಶ ಲೂಟಿ ಮಾಡಿದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.
ಪ್ರಿಯಾಂಕ್ ಖರ್ಗೆ, ಪ್ರಿಯಾಂಕ ಗಾಂಧಿ ಹೆಸರಿನ ಬಗ್ಗೆ ವ್ಯಂಗ್ಯವಾಡಿದ ಯತ್ನಾಳ್, ಇದರಲ್ಲಿ ಗಂಡು ಯಾವುದೋ, ಹೆಣ್ಣು ಯಾವುದೋ, ನಂಗೆ ಗೊತ್ತೇ ಇಲ್ಲ. ಪ್ರಿಯಾಂಕ್ ಅನ್ನೋದು ಸ್ತ್ರೀಲಿಂಗವೋ? ಪುಲ್ಲಿಂಗವೋ? ಎಂದು ಪ್ರಶ್ನೆ ಮಾಡಿದರು.












Click it and Unblock the Notifications