ಬಿಜೆಪಿ ಮಾಜಿ ಸಚಿವರ ಮನೆಗಳ ಮೇಲೆ ಐಟಿ ದಾಳಿ

ಮಾಜಿ ಸಚಿವ ಮಾಲೂರಿನ ಕೃಷ್ಣಯ್ಯ ಶೆಟ್ಟಿ ಮತ್ತು ಅವರ ಸಂಬಂಧಿಕರಿಗೆ ಸೇರಿದ ಬೆಂಗಳೂರಿನ ಮಲ್ಲೇಶ್ವರ, ಕೋಲಾರ, ಮಾಲೂರು ಸೇರಿದಂತೆ 7 ಕಡೆ ದಾಳಿ ಮಾಡಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ಮಾಡಿದ್ದಾರೆ.
ಇನ್ನು ಬೆಂಗಳೂರಿನಿಂದ ಮೈಸೂರಿಗೆ ಬಂದ 25 ಅಧಿಕಾರಿಗಳ ತಂಡ ಮೈಸೂರಿನ ಗೋಕುಲಂ ಬಡಾವಣೆಯಲ್ಲಿರುವ ಮಾಜಿ ಸಚಿವ ರಾಮದಾಸ್ ಮನೆ, ಕಚೇರಿ ಮೇಲೆ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ಮಾಡಿವೆ. ಅದಕ್ಕೂ ಮುನ್ನ, ಬೆಂಗಳೂರಿನ ನೆಟ್ಟಕಲ್ಲಪ್ಪ ವೃತ್ತದಲ್ಲಿರುವ ರಾಮದಾಸ್ ಸಹೋದರ ಶ್ರೀಕಾಂತ್ ದಾಸ್ ಅವರ ಕಚೇರಿ ಮತ್ತು ಮನೆಗಳ ಮೇಲೂ ದಾಳಿ ಮಾಡಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಇತ್ತೀಚೆಗೆ ಮೈಸೂರಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಭೂ ಹಗರಣಗಳ ಬಗ್ಗೆ ತನಿಖೆ ಮಾಡುವುದಾಗಿ ಹೇಳಿಕೆ ನೀಡಿದ್ದ ಕೆಲವೇ ಗಂಟೆಗಳ ಅವಧಿಯಲ್ಲಿ ಈ ದಾಳಿ ನಡೆದಿರುವುದನ್ನು ನೋಡಿದರೆ ಇದರ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿರಬಹುದು ಎಂಬ ಅಸಮಾಧಾನದ ಮಾತುಗಳು ಕೇಳಿಬರುತ್ತಿವೆ.
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಕೃಷ್ಣಯ್ಯ ಶೆಟ್ಟಿ ವಸತಿ ಮತ್ತು ಮುಜರಾಯಿ ಖಾತೆ ನಿರ್ವಹಿಸಿದ್ದರು. ಆನಂತರ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರೂ ಜೈಲಿಗೂ ಹೋಗಿ ಬಂದಿದ್ದರು.
ಇನ್ನು, ರಾಮದಾಸ್ ಅವರು ಹಿಂದಿನ ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಮತ್ತು ಉನ್ನತ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೃಷ್ಣರಾಜ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರೂ ಗೆಲುವು ಸಾಧಿಸಲಿಲ್ಲ.












Click it and Unblock the Notifications