Dharwad: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ 'ಮಿಶನ್ ವಿದ್ಯಾಕಾಶಿ'
ಕರ್ನಾಟಕ ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಮಾರ್ಚ್ 21ರಿಂದ ಏಪ್ರಿಲ್ 24ರವರೆಗೆ ಜರುಗಲಿವೆ. ಈ ಸಂಬಂಧ ಶಿಕ್ಷಣ ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿಗಳು 'ಮಿಶನ್ ವಿದ್ಯಾಕಾಶಿ' ಯೋಜನೆಯಡಿ ಹಲವಾರು ಕಾರ್ಯಕ್ರಮಗಳ ಹಮ್ಮಿಕೊಂಡಿದ್ದಾರೆ. ಅದರ ಮೂಲಕವಾಗಿ ಪರೀಕ್ಷೆ ಎದುರಿಸಲಿರುವ 10 ನೇ ತರಗತಿ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ತೆಗೆದು ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ವಿದ್ಯಾಕಾಶಿ ಧಾರವಾಡದ ಜಿಲ್ಲೆ ವ್ಯಾಪ್ತಿಯಲ್ಲಿ 'ಮಿಶನ್ ವಿದ್ಯಾಕಾಶಿ' ಯೋಜನೆ ಆರಂಭಿಸಲಾಗಿತ್ತು. ಶಿಕ್ಷಣ ಇಲಾಖೆ ಅಧಿಕಾರಿಗಳ ಪಾಲಕರ, ಶಿಕ್ಷಕರ ಪ್ರಯತ್ನದಿಂದಾಗಿ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟದಲ್ಲಿ ಸಾಕಷ್ಟು ಬದಲಾವಣೆ ಕಾಣುತ್ತಿದೆ. ವಿದ್ಯಾರ್ಥಿಗಳು ಆಸಕ್ತಿಯಿಂದ ಓದುತ್ತಿದ್ದಾರೆ. ಇದು ನಮಗೆಲ್ಲ ಹೆಮ್ಮೆ ಮೂಡಿಸಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.

10 ನೇ ತರಗತಿ ವಿದ್ಯಾರ್ಥಿಗಳೊಂದಿಗೆ ವಿವಿಧ ಕಾರ್ಯಕ್ರಮ
ಮಂಗಳವಾರ ಮಧ್ಯಾಹ್ನ ಕುಂದಗೋಳ ಪಟ್ಟಣದ ಸನ್ ಶೈನ್ ಪ್ರೌಢಶಾಲೆಯ ಆವರಣದಲ್ಲಿ ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ ಸಂಯುಕ್ತವಾಗಿ ಮಿಶನ್ ವಿದ್ಯಾಕಾಶಿ ಯೋಜನೆಯಡಿ, ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಸುಧಾರಣೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆ ಕುರಿತು ವಿವಿಧ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರ, ಎಸ್.ಡಿ.ಎಂ.ಸಿ. ಅಧ್ಯಕ್ಷರ, ಪಾಲಕರ ಸಭೆ ಮತ್ತು 10 ನೇ ತರಗತಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಜರುಗಿಸಿ, ಮಾತನಾಡಿದರು.
ಮಕ್ಕಳಲ್ಲಿ ಓದುವ ಅಭಿರುಚಿ ಮೂಡಿಸಬೇಕು. ಅವರಲ್ಲಿನ ಉತ್ತಮ ಆಸಕ್ತಿಗಳನ್ನು ಪ್ರೋತ್ಸಾಹಿಸಬೇಕು. ಪಾಲಕರಿಗೆ ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಅಭಿರುಚಿ ಬೆಳೆಸುವ ಜವಾಬ್ದಾರಿ ಇದೆ. ಮಕ್ಕಳ ಯಶಸ್ಸು ನಮ್ಮೆಲ್ಲರ ಪ್ರಯತ್ನದಲ್ಲಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಜಿಲ್ಲೆಯ ಎಲ್ಲ ಮಕ್ಕಳು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣವಾಗಬೇಕು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ರಾಜ್ಯಕ್ಕೆ ರ್ಯಾಂಕ್ ಬರಬೇಕು. ಈ ನಿಟ್ಟಿನಲ್ಲಿ ಮಿಶನ್ ವಿದ್ಯಾಕಾಶಿ ಕಳೆದ ಹತ್ತು ತಿಂಗಳಿಂದ ನಿರಂತರ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಭರವಸೆ ಕಂಡಿದೆ. ಈ ವರ್ಷ 10 ನೇ ತರಗತಿಯಲ್ಲಿ ಓದುತ್ತಿರುವ ಪ್ರತಿ ವಿದ್ಯಾರ್ಥಿಯಲ್ಲಿ ಮಿಶನ್ ವಿದ್ಯಾಕಾಶಿಯು ಆತ್ಮವಿಶ್ವಾಸ ಹೆಚ್ಚಿಸಿದೆ ಎಂದರು.
ಕಳೆದ ಒಂದು ತಿಂಗಳಿಂದ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಭೇಟಿ ನೀಡಿ, ಅಲ್ಲಿನ ಸಾವಿರಾರು ವಿದ್ಯಾರ್ಥಿಗಳೊಂದಿಗೆ ಮಿಶನ್ ವಿದ್ಯಾಕಾಶಿ ಯೋಜನೆಯಡಿ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಹಾಗೂ ವಿದ್ಯಾರ್ಥಿಗಳಲ್ಲಿನ ಓದುವ-ಬರೆಯುವಲ್ಲಿ ಆಗಿರುವ ಬದಲಾವಣೆ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡಲಾಗಿದೆ. ವಿದ್ಯಾರ್ಥಿಗಳಲ್ಲಿ, ಶಿಕ್ಷಕರಲ್ಲಿ ಆಗಿರುವ ಶೈಕ್ಷಣಿಕ ಬದಲಾವಣೆ, ಸಾಧಿಸುವ ಛಲ ನೋಡಿ ನಮ್ಮ ಕಾರ್ಯದಲ್ಲಿನ ವಿಶ್ವಾಸ ಹೆಚ್ಚಾಗಿದೆ. ವಿದ್ಯಾರ್ಥಿಗಳ ಮಾತು, ಅವರ ಆತ್ಮವಿಶ್ವಾಸ ಕೇಳಿ ಸಂತಸವಾಗಿದೆ ಎಂದು ವಿವರಿಸಿದರು.
ಸಭೆಯಲ್ಲಿ ಶಾಲಾ ಫಲಿತಾಂಶ ಸುಧಾರಣೆ ಮತ್ತು ಮಕ್ಕಳ ದಾಖಲಾತಿ ಪ್ರಗತಿ ಕುರಿತು ಯರಗುಪ್ಪಿ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎಫ.ವಿ.ಮಂಜಣ್ಣವರ, ಸಂಶಿ ಸರಕಾರಿ ಪ್ರೌಢಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಜಿ.ಎಚ್.ಪಾಳೇದ, ಮಳಲಿ ಸರ್ಕಾರಿ ಪ್ರೌಢಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷ ನೆಹರು ಪಾಟೀಲ, ಕಮಡೊಳ್ಳಿ ಪ್ರೌಢಶಾಲೆ ಪಾಲಕರ ಸಮಿತಿಯ ಮಲ್ಲಿಕಾರ್ಜುನ ಪಾಟೀಲ, ಶಿಕ್ಷಕಿ ಎಫ್.ಸಿ.ದಂಡಿನ ಮತ್ತು ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಸ್ನೇಹಾ ಮೇಟಿ ಮತ್ತು ಜರೀನಾ ದರೂಬಾಯಿ, ಸದ್ಗುರು ಶಿವಾನಂದ ಬಾಲಿಕಾ ಪ್ರೌಢಶಾಲೆಯ ಪ್ರತಿಭಾ ಕುಸುಗಲ್ಲ,
ಗುರುದೇವ ಶ್ರೀ ಮಲ್ಲಿಕಾರ್ಜುನ ಪ್ರೌಢಶಾಲೆಯ ಆದಿತ್ಯಾ, ಸನ್ ಶೈನ್ ಪ್ರೌಢಶಾಲೆ ಆರತಿ ಕಂಪ್ಲಿಕೊಪ್ಪ, ಸಂಶಿ ಸರಕಾರಿ ಪ್ರೌಢಶಾಲೆಯ ಅಂಜಲಿ ಕೊಬ್ಬಯ್ಯನವರ, ಆರ್.ಎಂ.ಎಸ್.ಎ ಪ್ರೌಢಶಾಲೆಯ ಅಪೂರ್ವಾ ಚಂದ್ರಶೇಖರ ದಿವಟಗಿ ಅವರು ಮಾತನಾಡಿ, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು, ಜಿಲ್ಲಾಧಿಕಾರಿಗಳೊಂದಿಗೆ ಸಂವಾದ ನಡೆಸಿದರು.
ಸಭೆಯಲ್ಲಿ ವಿವಿಧ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರೌಢ ಶಾಲೆಗಳ ವಿದ್ಯಾರ್ಥಿಗಳು, ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು, ಪಾಲಕರು, ತಾಯಂದಿರು ಭಾಗವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವಿ ಮಾಡಲಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಣ ಸಂಯೋಜಕ ಭೀಮಣ್ಣ ಸಾವಳಗಿ, ಸನ್ ಶೈನ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾದ್ಯಾಯನಿ ಎಸ್.ಎಂ.ಬಡಿಗೇರ ಕಾರ್ಯಕ್ರಮದಲ್ಲಿದ್ದರು.
ಪರೀಕ್ಷಾ ಕೇಂದ್ರ, ವಿದ್ಯಾರ್ಥಿಗಳ ಮಾಹಿತಿ
2025ರ ಪ್ರಸಕ್ತ ವರ್ಷದಲ್ಲಿ 28,666 ವಿದ್ಯಾರ್ಥಿಗಳು ಎಸ್ಎಸ್ಎಲ್‌ಸಿ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದರೊಂದಿಗೆ 511 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಒಟ್ಟು 1,437 ಪನರಾವರ್ತಿ ಅಭ್ಯರ್ಥಿಗಳು ಸೇರಿ ಒಟ್ಟು ಈ ವರ್ಷ 30,749 ವಿದ್ಯಾರ್ಥಿಗಳು SSLC ಪರೀಕ್ಷೆಗೆ ಬರೆಯಲಿದ್ದಾರೆ.
ವಿದ್ಯಾಕಾಶಿ ಹೆಸರಿನ ಧಾರವಾಡ ಜಿಲ್ಲೆಯು ಕಳೆದೊಂದು ದಶಕದಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸ್ಥಾನ (ರ‌್ಯಾಂಕ್) ಪಡೆಯಲು ನಿರಂತರವಾಗಿ ಶ್ರಮಿಸುತ್ತಿದೆ. 2019 ರಲ್ಲಿ 27ನೇ ಶ್ರೇಣಿ, 2023ರಲ್ಲಿ 24 ನೇ ಶ್ರೇಣಿ ಮತ್ತು 2024 ರಲ್ಲಿ 22ನೇ ಶ್ರೇಣಿ ಪಡೆದುಕೊಂಡಿದೆ. ಈ ವರ್ಷ ಉತ್ತಮ ಸಾಧನೆ ಮಾಡುವ ಪ್ರಯತ್ನ ಇದಾಗಿದೆ. ಮೊದಲ ಶ್ರೇಣಿ ಪಡೆಯುವ ಉದ್ದೇಶದಿಂದ ಇನ್ನಿಲ್ಲದಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಈ ಭಾರಿ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ವಿಶ್ವಾಸ ಇದೆ ಎಂದು ಜಿಲ್ಲಾಧಾಕಾರಿಗಳು ತಿಳಿಸಿದ್ದಾರೆ.
ಧಾರವಾಡ ಜಿಲ್ಲೆಯಾದ್ಯಂತ 447 ಪ್ರೌಢಶಾಲೆಳು ಇದ್ದು, ಶಿಕ್ಷಣ ಇಲಾಖೆ 106 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡುತ್ತಿದೆ. ಮಾರ್ಚ್ 21 ರಿಂದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈ ಎಲ್ಲ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ (144) ಜಾರಿಯಾಗಲಿದೆ. ಅಷ್ಟೇ ಅಲ್ಲದೇ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಜೆರಾಕ್ಸ್ ಅಂಗಡಿಗಳು ಬಂದ್ ಆಗಿರಲಿವೆ ಎಂದು ಶಿಕ್ಷಣ ಅಧಿಕಾರಿಗಳು ತಿಳಿಸಿದ್ದಾರೆ.
ಪರೀಕ್ಷೆ ಕೇಂದ್ರಗಳ ಸುತ್ತ ಮುತ್ತ ಹೈ ಅಲರ್ಟ್ ಇರಲಿದೆ
ಕೇವಲ ಧಾರವಾಡ ಮಾತ್ರವಲ್ಲದೇ ಇಡಿ ಕರ್ನಾಟಕ ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕೇಂದ್ರಗಳ ಸುತ್ತಮುತ್ತಲಿನ ಬಿಗಿ ಭದ್ರತೆ ಇರಲಿದೆ. ಯಾವುದೇ ಅಹಿಕರ ಘಟನೆಗಳು ಜರುಗದಂತೆ, ದೃಷ್ಕೃತ್ಯಗಳೂ ನಡೆಯದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಸಿಬ್ಬಂದಿಗೆ ಸೂಕ್ತ ಸೂಚನೆಗಳನ್ನು ಕೊಡಲಾಗಿದೆ. ಈಗಾಗಲೇ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪೂರ್ವಭಾವಿ ಪರೀಕ್ಷೆ ಯಶಸ್ವಿಯಾಗಿ ಮುಗಿದಿದೆ.












Click it and Unblock the Notifications