ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿ ಧನರಾಜ್ ಧಾರವಾಡ ಜೈಲಿಗೆ ಶಿಫ್ಟ್: ಬದಲಾದ ಖೈದಿ ನಂಬರ್
ಧಾರವಾಡ, ಆಗಸ್ಟ್ 29 : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ-9 ಆರೋಪಿ ಧನರಾಜ್‌ನನ್ನು ಬೆಂಗಳೂರು ಪರಪ್ಪನ ಅಗ್ರಹಾರದಿಂದ ಧಾರವಾಡದ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನಟ ದರ್ಶನ್‌ಗೆ ರಾಜಾತಿಥ್ಯ ನೀಡಿದ ಪ್ರಕರಣ ಬೆಳಕಿಗೆ ಬಂದ ನಂತರ ದರ್ಶನ್ ಸೇರಿ ಆ ತಂಡದ ಮೂವರನ್ನು ಹೊರತುಪಡಿಸಿ ಉಳಿದೆಲ್ಲಾ ಆರೋಪಿಗಳನ್ನು ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.

ಎ-9 ಆರೋಪಿಯಾಗಿರುವ ಧನರಾಜ್ ನನ್ನು ಬೆಂಗಳೂರು ಪೊಲೀಸರು ಭದ್ರತೆ ಮಧ್ಯೆ ಧಾರವಾಡದ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಿದರು. ಈತನ ಜೊತೆಗೆ ಜೊತೆಗೆ ಎ-14 ಆರೋಪಿಯಾಗಿರುವ ಪ್ರದೂಷ್ ನನ್ನು ಬೆಳಗಾವಿ ಹಿಂಡಲಗಾ ಜೈಲಿಗೆ ಸ್ಥಳಾಂತರ ಮಾಡಲಾಗಿದೆ.
ಮೊದಲಿಗೆ ಧನರಾಜ್ ನನ್ನು ಧಾರವಾಡದ ಕಾರಾಗೃಹಕ್ಕೆ ಶಿಫ್ಟ್ ಮಾಡಿದ ಪೊಲೀಸರು ಅದೇ ವಾಹನದಲ್ಲಿ ಪ್ರದೂಷ್ ನನ್ನು ಬೆಳಗಾವಿ ಕಾರಾಗೃಹಕ್ಕೆ ಕರೆದೊಯ್ದರು. ಧನರಾಜ್‌ನನ್ನು ಧಾರವಾಡದ ಕಾರಾಗೃಹಕ್ಕೆ ಕರೆದುಕೊಂಡು ಬಂದ ನಂತರ ಆತನ ಬ್ಯಾಗ್‌ಗಳನ್ನು ಪರಿಶೀಲನೆ ಮಾಡಿ ನಂತರ ಒಳಗಡೆ ಕರೆದುಕೊಂಡು ಹೋಗಲಾಯಿತು.
ಬದಲಾದ ಖೈದಿ ನಂಬರ್
ಧಾರವಾಡ ಕೇಂದ್ರ ಕಾರಾಗೃಹದಲ್ಲಿ ರೇಣುಕಾಸ್ವಾಮಿ ಕೊಲೆ ಆರೋಪಿಗೆ ಕೈದಿ ನಂಬರ್ 8629 ನೀಡಲಾಗಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಕೈದಿ ನಂಬರ್ ಬೇರೆ ನೀಡಲಾಗಿತ್ತು ಆದರೆ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಅಧಿಕಾರಿಗಳು 8629 ನಂಬರ್ ನೀಡಿದ್ದಾರೆ. ಇನ್ನು ವೈದ್ಯಕೀಯ ತಪಾಸಣೆ ವೇಳೆ ಧನರಾಜ್ ಜೈಲು ಸಿಬ್ಬಂದಿ ಜೊತೆ ಕಿರಿಕ್ ಮಾಡಿದ್ದಾನೆ ಎನ್ನಲಾಗಿದೆ. ತಪಾಸಣೆ ಬಳಿಕ ಸಿಬ್ಬಂದಿ ನೇರವಾಗಿ ಊಟಕ್ಕೆ ಕರೆದುಕೊಂಡು ಹೋಗಿದ್ದು, ಚಪಾತಿ, ಅನ್ನ ಸಾಂಬರ್ ಹಾಗೂ ಒಂದು ತರಹದ ಪಲ್ಯ ನೀಡಿದ್ದಾರೆ. ಊಟದ ಬಳಿಕ ಧನರಾಜ್‌ನನ್ನು ಬ್ಯಾರಕ್ ನಂಬರ್ 7ಕ್ಕೆ ಹಾಕಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications