ಧಾರವಾಡ ಜಿಲ್ಲೆಯಲ್ಲಿ "ಕೈ" ತೆಕ್ಕೆಗೆ ಬೀಳುತ್ತಿವೆ ಕಮಲದ ದಳಗಳು: ಬಂಡಾಯ ನಾಯಕರ ಮನವೊಲಿಸುವಲ್ಲಿ ವಿಫಲರಾದ್ರಾ ಜೋಶಿ?
ಧಾರವಾಡ, ಏಪ್ರಿಲ್, 23: ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಘೋಷಣೆ ಆಗಿದ್ದೇ ಆಗಿದ್ದು, ಬಂಡಾಯದ ಬಾವುಟಗಳು ಎಲ್ಲೆಡೆ ಹಾರಾಡುತ್ತಿವೆ. ಅಷ್ಟೇ ಅಲ್ಲ ಒಂದೊಂದೇ ಕಮಲದ ದಳಗಳು ಕಾಂಗ್ರೆಸ್ ಕಡೆ ತಿಗುಗುತ್ತಿವೆ. ಇಷ್ಟೆಲ್ಲ ಬಂಡಾಯ ಎದ್ದಿದ್ದರೂ ಹಾಗೂ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಸೇರುತ್ತಿರುವವರಿಗೆ ಬ್ರೇಕ್ ಹಾಕುವಲ್ಲಿ ಕೇಂದ್ರ ಸಚಿವ ಹಾಗೂ ಬಿಜೆಪಿ ಹೈಕಮಾಂಡ್ ಅಕ್ಷರಶಃ ವಿಫಲವಾಗಿದೆ ಎನ್ನುವ ಮಾತುಗಳು ಬಿಜೆಪಿ ವಲಯದಲ್ಲೇ ಜೋರಾಗಿ ಕೇಳಿಬರುತ್ತಿವೆ.
ಈ ಮೋದಲು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಮನವೊಲಿಸುವಲ್ಲಿ ಬಿಜೆಪಿ ನಾಯಕರು ಸಂಪೂರ್ಣ ವಿಫಲರಾದರು. ಅಷ್ಟೇ ಅಲ್ಲದೆ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿದ್ದು, ಇತ್ತ ಧಾರವಾಡ ಗ್ರಾಮೀಣ ಕ್ಷೇತ್ರದ ಪ್ರಭಾವಿ ನಾಯಕರಾಗಿದ್ದ ತವನಪ್ಪ ಅಷ್ಟಗಿ ಕೂಡ ಬಂಡಾಯದ ಬಾವುಟ ಹಾರಿಸಿ ಇದೀಗ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಆಪ್ತರಾಗಿದ್ದ ತವನಪ್ಪ ಅವರ ಮನವೊಲಿಸುವಲ್ಲಿ ಯಾರೂ ಯಶಸ್ವಿಯಾಗಲೇ ಇಲ್ಲ. ವಿನಯ್ ಕುಲಕರ್ಣಿ ಅವರನ್ನು ಕಳೆದ ಬಾರಿ ಸೋಲಿಸಲು ಸಾಕಷ್ಟು ಶ್ರಮವಹಿಸಿದ್ದ ತವನಪ್ಪ ಅಷ್ಟಗಿ ಈ ಬಾರಿ ಬಿಜೆಪಿಗೆ ಮೊಗ್ಗಲ ಮುಳ್ಳಾಗುತ್ತಾರೆ ಎಂಬ ಮಾತುಗಳೂ ದಟ್ಟವಾಗಿ ಕೇಳಿಬರುತ್ತಿವೆ. ಈ ಬಾರಿ ತಮ್ಮ ಬೆಂಬಲ ವಿನಯ್ ಕುಲಕರ್ಣಿ ಅವರಿಗೆ ಎಂದು ತವನಪ್ಪ ಸ್ಪಷ್ಟವಾಗಿ ಹೇಳಿರುವುದರಿಂದ ಇದೀಗ ಬಿಜೆಪಿಯಲ್ಲಿ ಆತಂಕ ಮತ್ತಷ್ಟು ದಟ್ಟವಾಗಿದೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಆಪ್ತರಲ್ಲೊಬ್ಬರಾದ ಹಾಗೂ ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಮೇಯರ್ ಕೂಡ ಆಗಿರುವ ಈರೇಶ ಅಂಚಟಗೇರಿ ಅವರಿಗೆ ಹುಬ್ಬಳ್ಳಿ- ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಸಿಗದೇ ಇದ್ದಿದ್ದರಿಂದ ಅವರು ಕೂಡ ಮುನಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲ ಕಳೆದ ಬಾರಿ ಅಮೃತ ದೇಸಾಯಿ ಅವರನ್ನು ಗೆಲ್ಲಿಸಲು ಟೊಂಕ ಕಟ್ಟಿ ನಿಂತಿದ್ದ ಅಂಚಟಗೇರಿ ಈ ಬಾರಿಯ ಚುನಾವಣೆಯಲ್ಲಿ ಯಾವುದೇ ಜವಾಬ್ದಾರಿ ನಿಭಾಯಿಸದೇ ತಟಸ್ಥವಾಗಿ ಉಳಿದಿದ್ದಾರೆ. ಇದನ್ನೆಲ್ಲ ಗಮನಿಸಿದರೆ ಜೋಶಿ ಅವರು ತಮ್ಮ ಆಪ್ತರನ್ನೇ ಮನವೊಲಿಸುವಲ್ಲಿ ವಿಫಲರಾಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡುಬರುತ್ತಿದೆ.
ಒಟ್ಟಾರೆಯಾಗಿ ಧಾರವಾಡ ಜಿಲ್ಲೆಯ ಬಿಜೆಪಿಯಲ್ಲಿ ಘಟಾನುಘಟಿ ನಾಯಕರೇ ಕಮಲ ಬಿಟ್ಟು ಕೈ ಹಿಡಿಯುತ್ತಿರುವುದು ಬಿಜೆಪಿಗೆ ಆತಂಕಕಾರಿ ವಿಷಯವಾಗಿದೆ. ಆದರೂ ಬಿಜೆಪಿ ಹೈಕಮಾಂಡ್ ಹಾಗೂ ಜೋಶಿ ಅವರು ಇದರತ್ತ ಮನಸ್ಪೂರ್ವಕವಾಗಿ ಗಮನಹರಿಸದೇ ಇರುವುದು ಅಪ್ಪಟ ಬಿಜೆಪಿ ಕಾರ್ಯಕರ್ತರಲ್ಲಿಯೂ ಆತಂಕ ಮನೆ ಮಾಡುವಂತೆ ಮಾಡಿದೆ.
ಮಹತ್ವದ ಸಭೆ ನಡೆಸಿದ ಪ್ರಲ್ಹಾದ್ ಜೋಶಿ
ಮತ್ತೊಂದೆಡೆ ಧಾರವಾಡ ಜಿಲ್ಲೆಯಲ್ಲಿ ಬಿಜೆಪಿ ಬಲ ಪಡಿಸುವುದರ ಜೊತೆಗೆ ಅಭ್ಯರ್ಥಿಗಳ ಗೆಲುವಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಶತಾಯುಗತಾಯ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ಈ ನಿಟ್ಟಿನಲ್ಲಿ ಇಂದು ಕಾರ್ಯಕರ್ತರು ಹಾಗೂ ಬಿಜೆಪಿ ನಾಯಕರ ಜೊತೆಗೆ ಸಭೆ ನಡೆಸುವ ಮೂಲಕ ಹೊಸ ಕಾರ್ಯಕ್ಕೆ ಮುನ್ನುಡಿ ಬರೆದಿದ್ದಾರೆ.
ಹುಬ್ಬಳ್ಳಿಯ ದೇಶಪಾಂಡೆ ನಗರದ ಬಿಜೆಪಿ ಕಾರ್ಯಾಲಯ, ಜೆ.ಸಿ.ನಗರದಲ್ಲಿರುವ ಮಾಧ್ಯಮದ ಕೇಂದ್ರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಸಭೆ ನಡೆಸುತ್ತಿದ್ದು, ಈ ಮೂಲಕ ಒಂದಿಲ್ಲೊಂದು ರೀತಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಪ್ಲಾನ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಹುಬ್ಬಳ್ಳಿಗೆ ಆಗಮಿಸಿದ ಅವರು, ಬಿಜೆಪಿ ನಾಯಕರ ಹಾಗೂ ಕಾರ್ಯಕರ್ತರ ಸಭೆ ನಡೆಸಿ ಕಾಂಗ್ರೆಸ್ ಸೋಲಿಸುವ ತಂತ್ರವನ್ನು ರೂಪಿಸಿದ್ದಾರೆ ಎನ್ನಲಾಗಿದೆ.
ಇನ್ನು ಜವಾಬ್ದಾರಿ ವಹಿಸುವ ಮೂಲಕ ಮತದಾರರನ್ನು ಜಾಗೃತರನ್ನಾಗಿ ಮಾಡುವಂತೆ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ. ಸಭೆಯಲ್ಲಿ ಮಹೇಶ್ ಟೆಂಗಿನಕಾಯಿ, ಸಚಿವ ಶಂಕರ್ ಪಾಟೀಲ ಮುನೇನಕೊಪ್ಪ ಸೇರಿದಂತೆ ಬಹುತೇಕ ನಾಯಕರು ಉಪಸ್ಥಿತರಿದ್ದರು.












Click it and Unblock the Notifications