ಧಾರವಾಡದಲ್ಲಿ ಅಧಿಕಾರ ಸ್ವೀಕರಿಸಿದ ರವೀಂದ್ರನಾಥ್
ಧಾರವಾಡ, ಜೂ. 11 : ಕಾಫಿಶಾಪ್ ನಲ್ಲಿ ಯುವತಿ ಫೋಟೋ ತೆಗೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಎಸ್ಆರ್ ಪಿಯಿಂದ ವರ್ಗಾವಣೆಗೊಂಡಿದ್ದ ಎಡಿಜಿಪಿ ಡಾ.ರವೀಂದ್ರನಾಥ್ ಮಂಗಳವಾರ ಧಾರವಾಡದ ರಾಜ್ಯ ಪೊಲೀಸ್ ಸಂಶೋಧನೆ ಮತ್ತು ಪುನರ್ ರಚನಾ ವಿಭಾಗದಲ್ಲಿ ಅಧಿಕಾರವಹಿಸಿಕೊಂಡಿದ್ದಾರೆ.
ಕಾಫಿಶಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮೀಸಲು ಪೊಲೀಸ್ ಪಡೆಯ ಎಡಿಜಿಪಿ ಸ್ಥಾನದಿಂದ ಧಾರವಾಡದ ರಾಜ್ಯ ಪೊಲೀಸ್ ಸಂಶೋಧನೆ ಮತ್ತು ಪುನರ್ ರಚನಾ ವಿಭಾಗಕ್ಕೆ ರವೀಂದ್ರನಾಥ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. [ಎಡಿಜಿಪಿ ರವೀಂದ್ರನಾಥ್ ಮೊಬೈಲ್‌ನಲ್ಲಿ ಫೋಟೋ ಪತ್ತೆ]

ಮಂಗಳವಾರ ಧಾರವಾಡಕ್ಕೆ ಆಗಮಿಸಿದ ಅವರು ಅಧಿಕಾರ ಸ್ವೀಕರಿಸಿದರು. ನಂತರ ಮಾತನಾಡಿದ ಅವರು, ಸಂಶೋಧನೆ ಮತ್ತು ಪುನರ್ ರಚನೆ ಇಲಾಖೆಗೆ ಇಲ್ಲಿ ನಿರ್ದಿಷ್ಟ ಕಚೇರಿ ಇಲ್ಲ. ಈ ಬಗ್ಗೆ ಡಿಜಿಪಿ ಅವರನ್ನು ಭೇಟಿಯಾಗಿ ಅವರ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇನೆ ಎಂದರು. [ಎಡಿಜಿಪಿ ಪ್ರಕರಣ : ಜಾರ್ಜ್ ರಾಜೀನಾಮೆಗೆ ಬಿಜೆಪಿ ಆಗ್ರಹ]
ವರ್ಗಾವಣೆ ಆದ ಬಳಿಕ ಅಧಿಕಾರ ಸ್ವೀಕರಿಸಲು ಜೂ.14ರವರೆಗೆ ಸಮಯಾವಕಾಶ ಇತ್ತು. ಆದ್ದರಿಂದ ಮಂಗಳವಾರ ಅಧಿಕಾರ ವಹಿಸಿಕೊಂಡಿದ್ದೇನೆ. ಸರ್ಕಾರದ ಆದೇಶದಂತೆ ನಡೆದುಕೊಂಡಿದ್ದೇನೆ ಎಂದು ಅವರು ಹೇಳಿದರು.
ಕಾಫಿಶಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ ಅವರು, ಸರ್ಕಾರದ ಆದೇಶದಂತೆ ಅಧಿಕಾರ ಸ್ವೀಕರಿಸಿದ್ದು, ಅಧಿಕಾರ ಸ್ವೀಕರಿಸಿದ ನಂತರ ಪೊಲೀಸ್ ಮಹಾನಿರ್ದೇಶಕರನ್ನು ಭೇಟಿ ಮಾಡುವುದು ವಾಡಿಕೆ. ಶೀಘ್ರವೇ ಅವರನ್ನು ಭೇಟಿ ಮಾಡುತ್ತೇನೆ ಎಂದರು.
ಪೊಲೀಸ್ ಆಯುಕ್ತರಿಗೆ ನನ್ನ ಹುದ್ದೆಯ ಬಗ್ಗೆ ಮಾಹಿತಿ ನೀಡಲಿದ್ದೇನೆ. ಅಲ್ಲದೇ ವಿಭಾಗದ ಕಚೇರಿ ಹಾಗೂ ಸಿಬ್ಬಂದಿ ನೇಮಕ ಬಗ್ಗೆ ಪೊಲೀಸ್ ಮಹಾನಿರ್ದೇಶಕರೊಂದಿಗೆ ಚರ್ಚೆ ನಡೆಸಲಿದ್ದೇನೆ ಎಂದು ರವೀಂದ್ರನಾಥ್ ತಿಳಿಸಿದರು.












Click it and Unblock the Notifications