ಕರ್ನಾಟಕ ಚುನಾವಣಾ ಫಲಿತಾಂಶ: ನಿಜವಾಯ್ತು ಹನುಮನಕೊಪ್ಪದ ಬೊಂಬೆ ಭವಿಷ್ಯ!
ಧಾರವಾಡ, ಮೇ 15: ವಿಧಾನಸಭಾ ಸಾರ್ವತ್ರಿಕ ಚುನಾವಣೆ ಕೊನೆಗೂ ಮುಗಿದಿದೆ. ಯಾರು ಮುಂದಿನ ಸಿಎಂ ಎನ್ನುವ ಪ್ರಶ್ನೆಗೆ ಇನ್ನೇನು ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ. ಆದರೆ ಈ ಬಾರಿ ಹೊಸ ನಾಯಕತ್ವ ಸಿಗುತ್ತದೆ ಎಂದು 2 ತಿಂಗಳ ಹಿಂದೆಯೇ ಧಾರವಾಡದ ಬೊಂಬೆ ಭವಿಷ್ಯ ನುಡಿದಿತ್ತು. ಆ ಭವಿಷ್ಯ ಇದೀಗ ನಿಜವಾಗಿದೆ.
ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಫಲಿತಾಂಶ ಹೊರಬಿದ್ದ ಮೇಲಂತೂ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಒಂದೇ ಪ್ರಶ್ನೆ ಇದೀಗ ಜನರ ಮುಂದಿದೆ. ಆದರೆ ಇದಕ್ಕೂ ಮೊದಲು ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗಲಿದೆ ಅಂತಾ ಧಾರವಾಡದ ಮಣ್ಣಿನ ಬೊಂಬೆ ಭವಿಷ್ಯ ನುಡಿದಿತ್ತು. ಅದರಂತೆ ಇದೀಗ ಹಳೆಯ ಬಿಜೆಪಿ ಸರ್ಕಾರ ಹೋಗಿ ಕಾಂಗ್ರೆಸ್ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಲು ಸಿದ್ಧವಾಗುತ್ತಿದೆ.

ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮಕ್ಕೆ ಹೊಂದಿಕೊಂಡಿರುವ ಹನುಮನಕೊಪ್ಪ ಗ್ರಾಮಸ್ಥರು ಪ್ರತಿವರ್ಷ ಯುಗಾದಿಯಂದು ಒಂದು ಸಂಪ್ರದಾಯ ನಡೆಸಿಕೊಂಡು ಬಂದಿದ್ದಾರೆ. ಅಮವಾಸ್ಯೆಯಂದು ತಮ್ಮ ಗ್ರಾಮದ ಹಳ್ಳದ ದಂಡೆಯ ಮೇಲೆ ಒಂದು ಸಮತಟ್ಟಾದ ಕಲಾಕೃತಿ ಮಾಡಿ ಅದರ ನಾಲ್ಕೂ ದಿಕ್ಕಿಗೆ ರಾಜಕಾರಣದ ಬೊಂಬೆಗಳನ್ನು ಮಾಡಿಡುತ್ತಾರೆ.
ಒಳಗಡೆ ರೈತರು, ಸೈನಿಕರು, ಕಾಳುಗಳನ್ನು ಇಡುತ್ತಾರೆ. ಅಮವಾಸ್ಯೆ ದಿನ ಈ ಆಕೃತಿ ಮಾಡಿಟ್ಟು, ಮಾರನೆ ದಿನ ಅದನ್ನು ನೋಡಲು ಹೋಗುತ್ತಾರೆ. ಈ ಆಕೃತಿಯ ಯಾವ್ಯಾವ ಭಾಗಕ್ಕೆ ಪೆಟ್ಟಾಗಿದೆ ಎಂಬುದನ್ನು ನೋಡಿ ಅದರ ಮೇಲೆ ಆ ಭಾಗದ ಭವಿಷ್ಯವನ್ನು ಇವರು ನಿರ್ಧರಿಸುತ್ತಾರೆ. ಮಳೆ ಹೇಗಿದೆ ಹಾಗೂ ಯಾವ ಬೆಳೆಗೆ ಬೆಲೆ ಸಿಗುತ್ತದೆ ಎಂಬುದನ್ನೂ ಇವರ ನಿರ್ಧರಿಸುತ್ತಾರೆ.
ಪ್ರಸಕ್ತ ವರ್ಷ ಕರ್ನಾಟಕ ದಿಕ್ಕಿನ ರಾಜಕೀಯ ಬೊಂಬೆಯ ಬಲಗಾಲಿಗೆ ಪೆಟ್ಟಾಗಿದ್ದು, ನಮ್ಮ ರಾಜ್ಯದ ನಾಯಕತ್ವ ಬದಲಾವಣೆಯಾಗಬಹುದು ಎಂದು ಊಹಿಸಲಾಗಿದೆ. ಊಹಿಸಲಾಗಿತ್ತು. ಅದರಂತೆ ಬೊಂಬೆ ಭವಿಷ್ಯ ಇದೀಗ ನಿಜವಾಗಿದೆ.

ಒಟ್ಟಾರೆ ಈ ಗ್ರಾಮದಲ್ಲಿ ನಡೆಯುವ ಆಚರಣೆಗೆ ತನ್ನದೇ ಆದ ಪ್ರತೀತಿ ಇದ್ದು, ರಾಜಕೀಯ ಭವಿಷ್ಯವನ್ನ ಸರಿಯಾಗಿ ನುಡಿಯುವ ಗ್ರಾಮ ಅಂತಲೇ ಗುರುತಿಸಿಕೊಂಡಿದೆ. ಈ ಹಿಂದೆ ಕೂಡ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ರಾಷ್ಟ್ರ ರಾಜಕಾರಣದ ಇಂದಿರಾ ಗಾಂಧಿ ಬಗ್ಗೆಯೂ ಈ ಬೊಂಬೆ ನುಡಿದ ಭವಿಷ್ಯ ನಿಜವಾಗಿದೆ ಎನ್ನುವುದು ಸ್ಥಳೀಯರ ಮಾತಾಗಿದೆ. ಈ ಬಾರಿಯ ಚುನಾವಣೆಯ ಫಲಿತಾಂಶ ನೋಡಿದಾಗ ಈ ಬೊಂಬೆ ಭವಿಷ್ಯ ಮತ್ತೊಮ್ಮೆ ನಿಜವಾಗಿದ್ದು, ಜನರಲ್ಲಿ ಈ ಭವಿಷ್ಯದ ಆಚರಣೆ ಮತ್ತಷ್ಟು ನಂಬಿಕೆಯನ್ನು ಹುಟ್ಟು ಹಾಕಿದಂತಾಗಿದೆ.












Click it and Unblock the Notifications