Jain Seer Murder Case: ಜೈನ ಮುನಿ ಹತ್ಯ ಖಂಡಿಸಿ ಧಾರವಾಡದಲ್ಲಿ ಸಮಾಜದವರಿಂದ ಬೃಹತ್ ಪ್ರತಿಭಟನೆ
ಧಾರವಾಡ, ಜುಲೈ, 10: ಬೆಳಗಾವಿ ಜಿಲ್ಲೆಯ ಜೈನಮುನಿ ಕಾಮಕುಮಾರನಂದಿ ಮಹಾರಾಜರ ಹತ್ಯೆ ಖಂಡಿಸಿ ಧಾರವಾಡದಲ್ಲಿ ಜೈನ ಸಮಾಜದವರಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಧಾರವಾಡದ ಕಡಪಾ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಕೆಲಹೊತ್ತು ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆಗೆ ಶಾಸಕ ವಿನಯ್ ಕುಲಕರ್ಣಿಯವರ ಪತ್ನಿ ಶಿವಲೀಲಾ ಕುಲಕರ್ಣಿ ಕೂಡ ಬೆಂಬಲ ಸೂಚಿಸಿದರು. ಇದೇ ವೇಳೆ ಅವರು ಜೈನಮುನಿ ಹತ್ಯೆಗೆ ಸಂಬಂಧಿಸಿದಂತೆ ನಿಸ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಈ ಹತ್ಯೆ ಹಿಂದಿರುವ ಎಲ್ಲ ಕಾಣದ ಕೈಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದರು.

ಅಷ್ಟೇ ಅಲ್ಲದೇ ಹತ್ಯೆ ಹಿಂದಿರುವ ಸತ್ಯಾಸತ್ಯತೆ ಬಯಲಾಗಬೇಕು. ಈ ರೀತಿ ದೇಹವನ್ನು ತುಂಡರಿಸಿ ಹತ್ಯೆ ಮಾಡುತ್ತಾರೆ ಎಂದರೆ ಜೈನಮುನಿಗಳಿಗೆ ರಕ್ಷಣೆ ಎಲ್ಲಿದೆ ಎಂಬ ಪ್ರಶ್ನೆ ಮೂಡುತ್ತಿದೆ. ಕೂಡಲೇ ಸರ್ಕಾರ ಈ ಬಗ್ಗೆ ನಿಸ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ನವಗ್ರಹ ತೀರ್ಥ ಕ್ಷೇತ್ರಕ್ಕೆ ಗೃಹ ಸಚಿವರ ಭೇಟಿ
ಚಿಕ್ಕೋಡಿ ತಾಲೂಕು ಹಿರೆಕೋಡಿಯ ಕಾಮಕುಮಾರ ನಂದಿ ಮಹಾರಾಜ ಸ್ವಾಮೀಜಿ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ತಾಲೂಕಿನ ವರೂರಿನ ಜೈನ್ ಆಶ್ರಮಕ್ಕೆ ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ ಭೇಟಿ ನೀಡಿದರು.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಹುಬ್ಬಳ್ಳಿ ತಾಲೂಕಿನ ವರೂರಿನ ನವಗ್ರಹ ತೀರ್ಥಂಕರ ಕ್ಷೇತ್ರಕ್ಕೆ ಭೇಟಿ ನೀಡಿ ಜೈನ್ ಮುನಿಗಳಿಗೆ ಧೈರ್ಯ ತುಂಬಿದ್ದಾರೆ. ಇನ್ನೂ ಜೈನ ಮುನಿಗಳ ಹತ್ಯೆ ಖಂಡಿಸಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಜೈನಮುನಿ ಗುಣಧರನಂದಿ ಮಾಹಾರಾಜ್ ಸ್ವಾಮೀಜಿಗಳನ್ನು ಭೇಟಿ ಮಾಡಿ ಭದ್ರತೆಯ ಭರವಸೆ ನೀಡಿದರು.
ಅಲ್ಲದೇ ಜೈನ ಮಂದಿರದಲ್ಲಿ ಸ್ವಾಮೀಜಿಗಳ ಜೊತೆ ಪ್ರಕರಣ ಕುರಿತು ಚರ್ಚೆ ಮಾಡಿದರು. ಈ ವೇಳೆ ಗೃಹ ಸಚಿವರಿಗೆ ಸಚಿವ ಸಂತೋಷ ಲಾಡ್, ಶಾಸಕ ಪ್ರಸಾದ್ ಅಬ್ಬಯ್ಯ ಸೇರಿದಂತೆ ಸ್ಥಳೀಯ ಮುಖಂಡರು ಸಾಥ್ ನೀಡಿದರು. ನಿನ್ನೆಯಷ್ಟೇ ದೂರವಾಣಿ ಮೂಲಕ ಜೈನ್ ಮುನಿಗಳ ಜೊತೆಗೆ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್ ಸಾಂತ್ವನ ಹೇಳಿದ್ದರು. ಇಂದು ಸ್ವತಃ ತಾವೇ ಭೇಟಿ ಮಾಡಿ ಧೈರ್ಯ ತುಂಬಿ ನ್ಯಾಯ ಕೊಡಿಸುವ ಭರವಸೆಯನ್ನು ನೀಡಿದ್ದಾರೆ.












Click it and Unblock the Notifications