• search
  • Live TV
ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕನ್ನಡ ಉಳಿಸಲು ಪಾಶ್ಚಾತ್ಯ ಶಿಕ್ಷಣದ ಗುಂಗಿನಿಂದ ಹೊರಬನ್ನಿ: ಕಂಬಾರ

|

ಧಾರವಾಡ, ಜನವರಿ 04: ಧಾರವಾಡದಲ್ಲಿ ನಡೆಯುತ್ತಿರುವ 84 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರ ಭಾಷಣ ಮಾಡಿದ ಚಂದ್ರಶೇಖರ ಕಂಬಾರರು, ಪಾಶ್ಚಾತ್ಯ ಶಿಕ್ಷಣ ಪದ್ಧತಿಯು ನಮ್ಮತನವನ್ನು ಕಸಿದುಕೊಂಡ, ನಮ್ಮ ಮೂಲ ಶಾಸ್ತ್ರಗಳನ್ನು ಮೂಲೆಗುಂಪು ಮಾಡಿದ ರೀತಿಗೆ ಖೇದ ವ್ಯಕ್ತಪಡಿಸಿದರು. ಜೊತೆಗೆ ಪಾಶ್ಚಾತ್ಯದ ಪ್ರಭಾವದಿಂದ ತಪ್ಪಿಸಿಕೊಂಡ ನವ್ಯ ಕಾವ್ಯದ ಹೆಚ್ಚುಗಾರಿಕೆಯನ್ನು ಹೊಗಳಿದರು.

ಇಂಗ್ಲಿಷ್‌ ಪ್ರಭಾವಿತವಾದ ಭಾರತೀಯ ಶಿಕ್ಷಣ ನಮ್ಮತನವನ್ನು ಕಲಿಸುತ್ತಿಲ್ಲ. ನವ್ಯ ಸಾಹಿತ್ಯ ಇಂಗ್ಲಿಷ್‌ ಪ್ರಭಾವದಲ್ಲಿದ್ದರೂ ಸಹ ಆದಷ್ಟು ಬೇಗನೇ ಪ್ರಭಾವದಿಂದ ಹೊರಬಂದು ತನ್ನತನವನ್ನು ಕಂಡುಕೊಂಡು ಪಾಶ್ಚಿಮಾತ್ಯ ಸಾಹಿತ್ಯಕ್ಕೆ ಸೆಡ್ಡು ಹೊಡೆಯಿತು ಎಂದು ಧಾರವಾಡ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಚಂದ್ರಶೇಖರ ಕಂಬಾರರು ಅಭಿಪ್ರಾಯ ವ್ಯಕ್ತಪಡಿಸಿದರು.

ಚಿತ್ರಗಳು : ಧಾರವಾಡದಲ್ಲಿ ಕನ್ನಡ ಸಾಹಿತ್ಯ ಜಾತ್ರೆಗೆ ಚಾಲನೆ

ಕಾರಂತರು, ಕುವೆಂಪು ಅವರುಗಳು ಕನ್ನಡ ಭಾಷೆಯಲ್ಲಿ ವಿಜ್ಞಾನಗಳನ್ನು ಬೋಧಿಸಲು ಮಾಡಿದ ಪ್ರಯತ್ನಗಳ ಬಗ್ಗೆ ನೆನಪು ಮಾಡಿಕೊಂಡ ಕಂಬಾರರು. ತಾವು ಸಹ ಅಂತಹಾ ಪ್ರಯೋಗ ಮಾಡಿ ಯಶಸ್ವಿಯಾದ ಬಗ್ಗೆ ಉದಾಹರಿಸಿ, ವಿಜ್ಞಾನ, ಗಣಿತಗಳನ್ನು ಸ್ಥಳೀಯ ಭಾಷೆಯಲ್ಲಿ ಬೋಧಿಸದಿರುವುದು ಭಾಷಾ ಸಮಸ್ಯೆಯನ್ನು ಹುಟ್ಟುಹಾಕುತ್ತದೆಂಬ ಆತಂಕವನ್ನು ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರಕ್ಕೆ ಚಾಟಿ ಏಟು

ರಾಜ್ಯ ಸರ್ಕಾರಕ್ಕೆ ಚಾಟಿ ಏಟು

ರಾಜ್ಯದ ಜನರಿಗೆ ಯಾವ ರೀತಿಯ ಹಾಗೂ ಯಾವ ಭಾಷೆಯಲ್ಲಿ ಶಿಕ್ಷಣ ಕೊಡಬೇಕೆಂಬ ನಿರ್ದಿಷ್ಟ ಮಾಹಿತಿ ರಾಜ್ಯ ಸರ್ಕಾರಕ್ಕೆ ಇರಬೇಕು, ಅದು ತನ್ನ ಜವಾಬ್ದಾರಿ ಅರಿತು ಶಿಕ್ಷಣವನ್ನು ನೀಡಬೇಕು ಎಂದು ಸರ್ಕಾರಕ್ಕೆ ಕುಟಕಿದ ಕಾಡು ಕುದುರೆ ಕವಿ. ಮಾತೃ ಭಾಷೆ ಶಿಕ್ಷಣ ಹಾಗೂ ಪಾಶ್ಚಾತ್ಯ ಶಿಕ್ಷಣ ಪದ್ಧತಿಯಿಂದ ಹೊರಬರುವ ಬಗ್ಗೆ ಎಚ್ಚರಿಕೆಯ ಮಾತುಗಳನ್ನಾಡಿದರು ನಡು-ನಡುವೆ ಕುವೆಂಪು ಹಾಗೂ ಗಾಂಧೀಜಿ ಅವರ ಹೇಳಿಕೆಗಳನ್ನು ಉದಾಹರಣೆ ನೀಡಿದರು. ಪ್ರಾಥಮಿಕ ಶಿಕ್ಷಣದಲ್ಲೇ ಆಂಗ್ಲಮಾಧ್ಯಮ ಶಿಕ್ಷಣ ಪ್ರಾರಂಭ ಆಗಿರುವ ಬಗ್ಗೆ ಆತಂಕಗೊಂಡರು ಕಂಬಾರರು.

'ಸರ್ಕಾರಿ ಶಾಲೆ ಮಕ್ಕಳು ನಿರ್ಗತಿಕರಾಗಿದ್ದಾರೆ'

'ಸರ್ಕಾರಿ ಶಾಲೆ ಮಕ್ಕಳು ನಿರ್ಗತಿಕರಾಗಿದ್ದಾರೆ'

ಆಂಗ್ಲ ಮಾಧ್ಯಮ ಶಾಲೆಗಳು ಅಣಬೆಗಳಂತೆ ಹೆಚ್ಚುತ್ತಿರುವುದಕ್ಕೆ ಸರ್ಕಾರವನ್ನು ದೋಷಿ ಮಾಡಿದ ಕಂಬಾರರು. ಶಿಕ್ಷಣ ವ್ಯಾಪಾರ ಆಗುವುದು ರಾಜಕಾರಣಿಗಳಿಗೆ ಬೇಕಾಗಿದೆ. ಹಾಗಾಗಿ ಈ ವಿಷಯದಲ್ಲಿ ಸರ್ಕಾರಗಳು ಜಾಣ ಕುರುಡು ಪ್ರದರ್ಶಿಸುತ್ತಿವೆ ಎಂದು ಕುಟುಕಿದರು. ಕೂರಲು ಬೆಂಚು, ತಲೆಯ ಮೇಲೆ ಗಟ್ಟಿಯಾದ ಸೂರು, ಶೌಚಾಲಯ ವ್ಯವಸ್ಥೆ ಇಲ್ಲದ ಸರ್ಕಾರಿ ಶಾಲೆಯ ಮಕ್ಕಳು ನಿರ್ಗತಿಕರಂತೆ ಕಾಣುತ್ತಾರೆ ಎಂದು ಉಪಮೆ ಪ್ರಯೋಗಿಸಿದ ಅವರು, ಸರ್ಕಾರವೇ ಫೀಜು ಕೊಟ್ಟು ಸರ್ಕಾರಿ ಶಾಲೆ ಮಕ್ಕಳನ್ನು ಆರ್‌ಟಿಇ ಮೂಲಕ ಆಂಗ್ಲ ಶಾಲೆಗೆ ಕಳುಹಿಸುವುದನ್ನು ಟೀಕಿಸಿದರು.

ಪ್ರಾಥಮಿಕ ಶಿಕ್ಷಣ ಖಾಸಗಿ ಬೇಡ

ಪ್ರಾಥಮಿಕ ಶಿಕ್ಷಣ ಖಾಸಗಿ ಬೇಡ

ಭಾಷೆ ಉಳಿವಿಗೆ ಹಾಗೂ ಶಿಕ್ಷಣದಲ್ಲಿ ನಮ್ಮ ತನ ಉಳಿಸಿಕೊಳ್ಳಲು ಸಲಹೆಗಳನ್ನೂ ನೀಡಿದ ಕಂಬಾರರು, ಈ ಕೂಡಲೇ ಪ್ರಾಥಮಿಕ ತರಗತಿ ಅಂದರೆ 1 ರಿಂದ 7 ರವರೆಗೆ ಕಡ್ಡಾಯವಾಗಿ ಸರ್ಕಾರಿ ಶಾಲೆಗಳಲ್ಲೇ ಶಿಕ್ಷಣ ಪಡೆಯುವಂತಾಗಬೇಕು, 8 ನೇ ತರಗತಿಯಿಂದ ಖಾಸಗಿ ಅವರಿಗೆ ಕೊಟ್ಟರೆ ಅಡ್ಡಿಯಿಲ್ಲ. ಈ ಕೂಡಲೇ ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಿಸಬೇಕು ಎಂದರು.

ದೇಸೀ ಶಿಕ್ಷಣದಲ್ಲಿ ಸರ್ವ ಶಿಕ್ಷಣ

ದೇಸೀ ಶಿಕ್ಷಣದಲ್ಲಿ ಸರ್ವ ಶಿಕ್ಷಣ

ಬಾಯಿ ಪಾಠದ ಶಿಕ್ಷಣವನ್ನು ಶಿಕ್ಷಣವೇ ಅಲ್ಲವೆಂದು ಜರಿದ ಕಂಬಾರರು, ಪಾಶ್ಚಾತ್ಯ ಶಿಕ್ಷಣದ ಬಹುಮುಖ್ಯ ಕೊರತೆ ಇದೆ ಎಂದರು. ಶಿಕ್ಷಣವು ಶಾಸ್ತ್ರವಾಗದೆ ಕಲೆ ಆಗಬೇಕು ಆ ಗುರಿಯನ್ನು ದೇಸೀ ಶಿಕ್ಷಣದಿಂದ ತಲುಪಬಹುದು ಎಂದು ಅಭಿಪ್ರಾಯಿಸಿದ ಅವರು, ದೇಸೀ ಶಿಕ್ಷಣದಿಂದ ಆರಂಭದಲ್ಲಿ ಕೆಲವು ತೊಡಕುಗಳು ಎದುರಾಗಬಹುದೇ ವಿನಃ ಕಾಲ ಸರಿದಂತೆ ಭಾಷೆಯೇ ಎಲ್ಲವನ್ನೂ ಜೀರ್ಣಿಸಿಕೊಂಡು, ಪಾಶ್ಚಾತ್ಯ ವಿಷಯಗಳನ್ನು ಸಹ ದೇಸೀ ಭಾಷೆಯಲ್ಲಿಯೇ ಕಲಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

English summary
Literature fest president poet Chandrashekhar Kambar express his concern about Kannada language present situation. He also criticize government for RTE scheme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X