ಪ್ರಜಾಧ್ವನಿ ರದ್ದು, ಸಿಎಂ ಭೇಟಿಗೆ ತೆರಳಿದ ಕಾಂಗ್ರೆಸ್ ಶಾಸಕಿ!
ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಬುಧವಾರ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಸಮಾವೇಶ ಆಯೋಜನೆ ಮಾಡಲಾಗಿತ್ತು. ಆದರೆ ಸಮಾವೇಶ ರದ್ದುಗೊಳಿಸಲಾಗಿದೆ.
ಧಾರವಾಡ, ಮಾರ್ಚ್ 15; ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಯಾವ ಪಕ್ಷದ ನಾಯಕರು ಯಾರನ್ನು ಭೇಟಿ ಮಾಡಿದರೂ ಕುತೂಹಲ ಆರಂಭವಾಗುತ್ತದೆ. ಕಾಂಗ್ರೆಸ್ ಶಾಸಕಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿರುವುದು ಸಹ ಈಗ ಚರ್ಚೆ ವಿಚಾರ. ಅದರಲ್ಲೂ ಪ್ರಜಾಧ್ವನಿ ಸಮಾವೇಶ ರದ್ದಾದ ಬಳಿಕ ಹುಬ್ಬಳ್ಳಿಯಲ್ಲಿ ಭೇಟಿಗೆ ಆಗಮಿಸಿದ್ದು ಕುತೂಹಲ ಮೂಡಿಸಿದೆ.
ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಬುಧವಾರ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಸಮಾವೇಶ ಆಯೋಜನೆ ಮಾಡಲಾಗಿತ್ತು. ಆದರೆ ಸಮಾವೇಶ ರದ್ದುಗೊಳಿಸಲಾಗಿದೆ. ಇದೇ ಸಂದರ್ಭದಲ್ಲಿ ಸ್ಥಳೀಯ ಶಾಸಕಿ ಕುಸುಮಾ ಶಿವಳ್ಳಿ ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಗಾಗಿ ಆಗಮಿಸಿದ್ದು, ಚರ್ಚೆಗೆ ಕಾರಣವಾಗಿದೆ.

ಹುಬ್ಬಳ್ಳಿಯ ನಿವಾಸದಿಂದ ಕಲಘಟಗಿಗೆ ಹೊರಟಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಯಾಗಲು ಕಾಂಗ್ರೆಸ್ ಶಾಸಕಿ ಕುಸುಮಾ ಶಿವಳ್ಳಿಗೆ ಸಾಧ್ಯವಾಗಲಿಲ್ಲ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಕಲಘಟಗಿಗೆ ಹೊರಟಿದ್ದ ಮುಖ್ಯಮಂತ್ರಿಗಳು ಸಿಗಲಿಲ್ಲ. ಕ್ಷೇತ್ರದ ಅನುದಾನದ ವಿಚಾರವಾಗಿ ಚರ್ಚೆ ಮಾಡಬೇಕಿತ್ತು. ಅದಕ್ಕೆ ಆಗಮಿಸಿದ್ದೆ" ಎಂದು ಹೇಳಿದರು.
ಪ್ರಜಾಧ್ವನಿ ಯಾತ್ರೆ ರದ್ದುಗೊಂಡಿರುವ ಬಗ್ಗೆ ಮಾತನಾಡಿದ ಶಾಸಕಿ, "ಇಂದು ಎರಡು ಕಡೆ ಸಮಾವೇಶ ನಿಗದಿಯಾಗಿತ್ತು. ಆದ್ದರಿಂದ ಕುಂದಗೋಳದ ಸಮಾವೇಶ ರದ್ದು ಮಾಡಲಾಗಿದೆ. ಕಲಘಟಗಿಯಲ್ಲಿ ನಿಗದಿಯಾಗಿರುವ ಸಮಾವೇಶ ನಡೆಯಲಿದೆ" ಎಂದು ಕುಸುಮಾ ಶಿವಳ್ಳಿ ಸ್ಪಷ್ಟನೆ ನೀಡಿದರು.

ಕುಂದಗೋಳದಲ್ಲಿ ಭಿನ್ನಮತ; ಕುಂದಗೋಳ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸುದ್ದಿ ಇದೆ. ಪಕ್ಷದಲ್ಲಿಯೇ ಶಾಸಕಿ ಕುಸುಮಾ ಶಿವಳ್ಳಿ ವಿರುದ್ಧ ಅಸಮಾಧಾನವಿದೆ. ಈ ಬಾರಿಯ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡಬಾರದು ಎಂದು ಒಂದು ಬಣ ಪಟ್ಟು ಹಿಡಿದಿದೆ. ಈ ಭಿನ್ನಮತದ ಹಿನ್ನಲೆಯಲ್ಲಿ ಬುಧವಾರ ನಡೆಯಬೇಕಿದ್ದ ಪ್ರಜಾಧ್ವನಿ ಯಾತ್ರೆಯನ್ನು ರದ್ದುಗೊಳಿಸಲಾಗಿದೆ ಎಂಬ ಸುದ್ದಿಯೂ ಇದೆ.
11ಕ್ಕೂ ಅಧಿಕ ಪಕ್ಷದ ನಾಯಕರು ಶಾಸಕಿ ಕುಸುಮಾ ಶಿವಳ್ಳಿಗೆ ಟಿಕೆಟ್ ನೀಡುವುದು ಬೇಡ. ನಮಗೆ ಟಿಕೆಟ್ ನೀಡಿ, ಗೆಲ್ಲಿಸುವ ಜವಾಬ್ದಾರಿ ನಮ್ಮದು ಎಂದು ಹೇಳಿದ್ದರು. ಧಾರವಾಡದಿಂದ ಕುಂದಗೋಳದ ಭಿನ್ನಮತ ಬೆಂಗಳೂರಿಗೆ ತಲುಪಿತ್ತು. ಮಾಜಿ ಸಚಿವ ಬಸವರಾಜರಾಯ ರೆಡ್ಡಿ ಬಂಡಾಯದ ಬಾವುಟ ಹಾರಿಸಿದ ನಾಯಕರ ಜೊತೆ ಸುಮಾರು 5 ಗಂಟೆಗಳ ಕಾಲ ಸಭೆ ನಡೆಸಿದ್ದರು. ಆದರೆ ಸಭೆ ವಿಫಲವಾಗಿತ್ತು. ಬೆಂಗಳೂರಿನಲ್ಲಿ ನಡೆದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿಯೂ ಟಿಕೆಟ್ ಆಕಾಂಕ್ಷಿಗಳು ಹಾಲಿ ಶಾಸಕಿಗೆ ಟಿಕೆಟ್ ಬೇಡ ಎಂದು ಪಟ್ಟು ಹಿಡಿದಿದ್ದರು.
ಸಿ. ಎಸ್. ಶಿವಳ್ಳಿ ಅವರ ಅಕಾಲಿಕ ನಿಧನದಿಂದ 2019ರಲ್ಲಿ ಕುಂದಗೋಳಕ್ಕೆ ಉಪ ಚುನಾವಣೆ ಎದುರಾಯಿತು. ಆಗ ಕಾಂಗ್ರೆಸ್ ಕುಸುಮಾ ಶಿವಳ್ಳಿಗೆ ಟಿಕೆಟ್ ನೀಡಿತು, ಉಪ ಚುನಾವಣೆಯಲ್ಲಿ ಅವರು ಜಯಗಳಿಸಿದರು. ಆದರೆ ಈಗ ಬಂಡಾಯ ನಾಯಕರು ಈ ಬಾರಿ ಕುಸುಮಾ ಶಿವಳ್ಳಿಗೆ ಟಿಕೆಟ್ ನೀಡಬಾರದು, ಶಿವಳ್ಳಿ ಕುಟುಂಬದ ಯಾರಿಗೂ ಟಿಕೆಟ್ ಕೊಡುವುದು ಬೇಡ, ಹೊಸಬರಿಗೆ ಟಿಕೆಟ್ ನೀಡಿ ಎಂದು ಪಟ್ಟು ಹಿಡಿದಿದ್ದಾರೆ. ಈ ಬಾರಿ ಕುಂದಗೋಳ ಕ್ಷೇತ್ರದಿಂದ ಟಿಕೆಟ್ ಬಯಸಿ 16 ಜನರು ಅರ್ಜಿ ಹಾಕಿದ್ದಾರೆ. 11 ಟಿಕೆಟ್ ಆಕಾಂಕ್ಷಿಗಳು ಒಂದಾಗಿದ್ದು, ಯಾರಿಗೆ ಬೇಕಾದರೂ ಟಿಕೆಟ್ ನೀಡಿ ಎಂದು ಹೇಳುತ್ತಿದ್ದಾರೆ.
ಮುಂದೆ ನಿಗದಿಯಾದ ದಿನಾಂಕಕ್ಕೆ ಪ್ರಜಾಧ್ವನಿ ಸಮಾವೇಶ ನಡೆಯಲಿದೆ. ಆದರೆ ಕಾಂಗ್ರೆಸ್ ಟಿಕೆಟ್ ಯಾರಿಗೆ? ಎಂಬುದು ಪ್ರಶ್ನೆಯಾಗಿದೆ. ಕುಂದಗೋಳ ಕ್ಷೇತ್ರವನ್ನು ದಿ. ಸಿ. ಎಸ್. ಶಿವಳ್ಳಿ ಕಾಂಗ್ರೆಸ್ ಭದ್ರಕೋಟೆ ಮಾಡಿದ್ದರು. ಸತತ ಎರಡು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಪೌರಾಡಳಿತ ಸಚಿವರೂ ಆಗಿದ್ದರು. ಆದರೆ ಅವರ ಹಠಾತ್ ನಿಧನ ಭಾರೀ ನಷ್ಟ ಉಂಟು ಮಾಡಿತು. ಉಪ ಚುನಾವಣೆಯಲ್ಲಿ ಕುಸುಮಾ ಶಿವಳ್ಳಿ ಗೆಲ್ಲುವ ಮೂಲಕ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್‌ಗೆ ತಂದು ಕೊಟ್ಟರು.












Click it and Unblock the Notifications