ಪಂಡಿತ್ ಸವಾಯಿ ಗಂಧರ್ವ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ
ಹುಬ್ಬಳ್ಳಿ, ಅಕ್ಟೋಬರ್ 11 : ಸವಾಯಿ ಗಂಧರ್ವ ಎಂದೇ ಖ್ಯಾತರಾಗಿದ್ದ ಪಂಡಿತ್ ರಾಮಭಾವು ಕುಂದಗೋಳಕರ ಅವರ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಲಾಯಿತು. ಹುಬ್ಬಳ್ಳಿಯಲ್ಲಿ ಇಂದು ಪಂಡಿತ್ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದರು.
ಈ ಹಿಂದೆ ಪಂಡಿತ್ ಸವಾಯಿ ಗಂಧರ್ವ ಅವರ ಸ್ಮರಣಾರ್ಥ ಅಂಚೆ ಚೀಟಿ ಹೊರಗೆ ತರಲು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಸವಾಯಿ ಗಂಧರ್ವ ಅವರ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಲಾಗಿದೆ.
ಸಂಗೀತ ಕ್ಷೇತ್ರಕ್ಕೆ ವಿಶೇಷವಾಗಿ ಹಿಂದೂಸ್ತಾನಿ ಗಾಯನಕ್ಕೆ ಸವಾಯಿ ಗಂಧರ್ವ ಅವರ ಕೊಡುಗೆ ಅನನ್ಯ. ಪಂಡಿತ್ ಭೀಮಸೇನ್ ಜೋಶಿ, ಗಂಗೂಬಾಯಿ ಹಾನಗಲ್, ಬಸವರಾಜ ರಾಜಗುರು ನಾನಾಸಾಹೇಬ್ ದೇಶಪಾಂಡೆಯವರಂತ ಖ್ಯಾತ ಹಿಂದೂಸ್ತಾನಿ ಗಾಯಕರಿಗೆ ಸವಾಯಿ ಗಂಧರ್ವ ಅವರು ಗುರುವಾಗಿದ್ದರು.

ಭೀಮ್ ಸೇನ್ ಜೋಶಿ, ಗಂಗೂಬಾಯಿ ಹಾನಗಲ್ ಅವರು ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಲು ಸವಾಯಿ ಗಂಧರ್ವ ಅವರ ಪಾತ್ರವೂ ಮುಖ್ಯವಾಗಿದೆ. ಸಂಗೀತ ಕ್ಷೇತ್ರದ ಅನೇಕ ದಿಗ್ಗಜರಿಗೆ ಸವಾಯಿ ಗಂಧರ್ವ ಸಂಗೀತ ಅಭ್ಯಾಸ ಮಾಡಿಸಿದ್ದರು. ಸವಾಯಿ ಗಂಧರ್ವ ಅವರು ಅನೇಕ ಸಂಗೀತಗಾರರಿಗೆ ಧಾರವಾಡದಲ್ಲಿ ಕಿರಾಣಾ ಘರಾಣಾ ಪರಂಪರೆಯ ಮೂಲಕ ಒಂದು ವೇದಿಕೆಯನ್ನು ಹಾಕಿಕೊಟ್ಟವರು ಹೀಗಾಗಿ ಅವರ ಸ್ಮರಣಾರ್ಥ ಅಂಚೆ ಚೀಟಿ ತಂದಿರುವುದು ಜಿಲ್ಲೆಯ ಜನತೆಗೆ ಖುಷಿಯ ವಿಚಾರವಾಗಿದೆ.

ಅಂಚೆ ಚೀಟಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸವಾಯಿ ಗಂಧರ್ವ ಅವರ ಸಂಗೀತ ಕ್ಷೇತ್ರಕ್ಕೆ ನೀಡಿದ ವಿಶಿಷ್ಠ ಕೊಡುಗೆಯನ್ನ ಸ್ಮರಿಸಿದರು. ಹಲವು ಪ್ರಖ್ಯಾತ ಶಿಷ್ಯರನ್ನು ಹೊಂದಿದ್ದ ಸವಾಯಿ ಗಂಧರ್ವರು ಧಾರವಾಡ ಜಿಲ್ಲೆ ಹಾಗೂ ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದವರು. ಅಸಂಖ್ಯಾತ ಅಭಿಮಾನಿಗಳ ಮನಸಿನಲ್ಲಿ ಇಂದಿಗೂ ಹಸಿರಾಗಿರುವ ಪಂಡಿತ್ ಜೀ ನಮ್ಮ ಹೆಮ್ಮೆಯಾಗಿದ್ದಾರೆ . ಇನ್ನು ಈ ಕಾರ್ಯಕ್ರಮದ ಭಾಗವಾಗಿದ್ದು ನನಗೆ ಗೌರವದ ಸಂಗತಿಯಾಗಿದೆ ಎಂದು ಪ್ರಲ್ಹಾದ್ ಜೋಶಿ ಸಂತಸ ವ್ಯಕ್ತಪಡಿಸಿದ್ದಾರೆ.

ದೇಶಪಾಂಡೆ ನಗರದ ಪಂಡಿತ್ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಖ್ಯಾತ ವೈದ್ಯ ಪದ್ಮಶ್ರೀ ಶ್ರೀ ಎಂ.ಎಂ ಜೋಶಿ, ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಶ್ರೀ.ಎಸ್ ರಾಜೇಂದ್ರ ಕುಮಾರ್, ಡಾ. ಗಂಗೂಬಾಯಿ ಹಾನಗಲ್ ಅವರ ಸುಪುತ್ರ ಶ್ರೀ ನಾರಾಯಣ ಹಾನಗಲ್ ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು.











Click it and Unblock the Notifications