ಲಾಕ್ ಡೌನ್ ಸಂಕಷ್ಟದಲ್ಲಿ ಹಳ್ಳಿ ಜನರಿಗೆ ನೆರವಾದ ನರೇಗಾ
ಧಾರವಾಡ, ಏಪ್ರಿಲ್ 22 : ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸಮಸ್ಯೆ ಉಂಟಾಗದಂತೆ ತಡೆಯಲು ಮಹಾತ್ಮ ಗಾಂಧೀ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನು ಆರಂಭಿಸಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶನದಂತೆ ಧಾರವಾಡ ಜಿಲ್ಲೆಯಾದ್ಯಂತ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ನರೇಗಾ ಅಡಿ ಕಾಮಗಾರಿಗಳನ್ನು ಮುಂದುವರೆಸಲು ಕ್ರಮ ಕೈಗೊಳ್ಳಲಾಗಿದೆ. ಕಲಘಟಗಿ ತಾಲೂಕಿನಲ್ಲಿ ಚಟುವಟಿಕೆಗಳು ಈಗಾಗಲೇ ಆರಂಭಗೊಂಡಿವೆ.
ಪ್ರತಿ ದಿನ ಕೆಲಸ ಆರಂಭಿಸುವ ಮುನ್ನ ಕೂಲಿ ಕಾರ್ಮಿಕರು ಶಪಥ ಸ್ವೀಕರಿಸಿಸುತ್ತಾರೆ. ಸಾಮಾಜಿಕ ಅಂತರ ಹಾಗೂ ಶುಚಿತ್ವ ಕಾಪಾಡಿಕೊಳ್ಳಿ ಎಂದು ಅವರಿಗೆ ಜಾಗೃತಿ ಮೂಡಿಸಲಾಗುತ್ತದೆ. ಕೂಲಿ ಕೆಲಸಗಾರರು ನೆಗಡಿ, ಕೆಮ್ಮು, ಜ್ವರದಿಂದ ಬಳಲುತ್ತಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲಾಗುತ್ತದೆ.

ದೇವಲಿಂಗಿಕೊಪ್ಪದ ಕೆರೆಗೆ ನೀರು ಕಾಲುವೆ ನಿರ್ಮಾಣ ಕಾರ್ಯ, ಬೀರುವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಂಡಲಗಟ್ಟಿ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿ ಸೇರಿದಂತೆ ರಸ್ತೆ, ದನದ ಕೊಟ್ಟಿಗೆ, ಬದು, ಜಂಗಲ್ ಕಟಾವು ಸೇರಿದಂತೆ ವಿವಿಧ ಕಾಮಗಾರಿ ಆರಂಭಗೊಂಡಿವೆ.
ಕೊರೊನಾ ಲಾಕ್‍ಡೌನ್ ಅವಧಿಯಲ್ಲಿ ಕೈಗೊಳ್ಳಬಹುದಾದ ನರೇಗಾ ಕಾಮಗಾರಿಗಳಿಗೆ ಸರ್ಕಾರ ನಿಯಮಾವಳಿಗಳನ್ನು ನೀಡಿದೆ. ಕೃಷಿಹೊಂಡ, ಬದು ನಿರ್ಮಾಣ, ಎರೇಹುಳು ಗೊಬ್ಬರ ಘಟಕದಂತಹ ಚಟುವಟಿಕೆಗಳಿಗೆ ಹೆಚ್ಚು ಅವಕಾಶವಿದೆ. ಉದ್ಯೋಗ ಬಯಸುವವರು ಕೂಲಿಗಾರರಿಗೆ ಕೆಲಸ ನೀಡಲಾಗುವುದು. ಕೂಲಿ ದರವನ್ನು ಏ.1 ರಿಂದ ರೂ.249/- ಗಳಿಂದ ರೂ.275/- ಕ್ಕೆ ಹೆಚ್ಚಿಸಲಾಗಿದೆ. ಕೆಲಸ ಮಾಡುವಾಗ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿದೆ.

"ಕಲಘಟಗಿ ತಾಲೂಕಿನಲ್ಲಿ ಈ ಕಾರ್ಯ ಸಮರ್ಪಕವಾಗಿ ನಡೆದಿದೆ" ಎಂದು ತಾಲೂಕು ಪಂಚಾಯಿತಿಯ ಮಹಾತ್ಮ ಗಾಂಧೀ ನರೇಗಾ ಸಹಾಯಕ ನಿರ್ದೇಶಕ ಚಂದ್ರಶೇಖರ್ ಪೂಜಾರ್ ಹೇಳಿದ್ದಾರೆ.












Click it and Unblock the Notifications