ಹುಬ್ಬಳ್ಳಿ- ಧಾರವಾಡದಲ್ಲಿ ನಿಲ್ಲದ ಪುಂಡರ ಹಾವಳಿ: ಅಂಜುಮನ್ ಅಧ್ಯಕ್ಷನ ಮೇಲೆ ಅಟ್ಯಾಕ್
ಧಾರವಾಡ, ಆಗಸ್ಟ್ 11: ಹುಬ್ಬಳ್ಳಿ, ಧಾರವಾಡ ವ್ಯಾಪ್ತಿಯಲ್ಲಿ ಕೆಲವು ತಿಂಗಳುಗಳಿಂದ ಅಪರಾಧ ಚಟುವಟಿಕೆಗಳದ್ದೆ ಹಾವಳಿಯಾಗಿದೆ. ಪ್ರೀತಿಗಾಗಿ ಯುವತಿಯ ಕೊಲೆ, ಒಂದಷ್ಟು ಬೆದರಿಕೆ ಸೇರಿಮತೆ ಕಾನೂನು ಬಾಹಿರ ಕೃತ್ಯಗಳು ನಡೆದಿದ್ದವು. ಇದೆಲ್ಲ ಆದರೂ ಸಹ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಹೀಗಾಗಿ ಕಾನೂನು ಸುವ್ಯವಸ್ಥೆ ಸರಿ ಇದೆಯೇ ಎಂಬ ಅನುಮಾನ ಮೂಡಿದೆ. ಏಕಂದರೆ ಪುಂಡರು ಮತ್ತೆ ಅಟ್ಟಹಾಸ ಮೆರೆದಿದ್ದು, ಧಾರವಾಡ ಅಂಜುಮನ್ ಸಂಸ್ಥೆ ಅಧ್ಯಕ್ಷರ ಮನೆಗೆ ನುಗ್ಗಿ ಹಲ್ಲೆಗೆ ಯತ್ನ ಮಾಡಿದ್ದಾರೆ.
10ಕ್ಕು ಹೆಚ್ಚು ಯುವಕರಿಂದ ಗುಂಪು ಧಾರವಾಡ ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಮನೆಗೆ ನುಗ್ಗಿ ಹಲ್ಲೆಗೆ ಕಳೆದ ರಾತ್ರಿ ಮುಂದಾಗಿತ್ತು. ಅಂಜುಮನ್ ಸಂಸ್ಥೆಯ ಕಚೇರಿಯಲ್ಲಿಯೂ ಹಲ್ಲೆಗೆ ಮುಂದಾಗಿದ್ದ ಗ್ಯಾಂಗ್, ಅಲ್ಲಿ ಇಸ್ಮಾಯಿಲ್ ಅವರು ಇಲ್ಲದ ಕಾರಣ ಮನೆಗೆ ನುಗ್ಗಿ ಗಲಾಟೆ, ಹಲ್ಲೆ ಮಾಡಿದ ಘಟನೆ ನಡೆದಿದೆ.

ಈ ಪುಂಡರ ಗ್ಯಾಂಗ್ ಚಾಕು ಹಿಡಿದುಕೊಂಡು ಏಕಾಎಕಿ ಇಸ್ಮಾಯಿಲ್ ಮನೆಗೆ ನುಗ್ಗಿದೆ. ಮನೆಯಲ್ಲಿ ಅವರು ಇಲ್ಲ ಕಾರಣ, ಉಳಿದ ಸದಸ್ಯರ ಮೇಲೆ ಮನ ಬಂದಂತೆ ನಿಂದಿಸಿ, ಅಸಭ್ಯವಾಗಿ ವರ್ತಿಸಿದ್ದಾರೆ. ಅಲ್ಲದೇ ಇಸ್ಮಾಯಿಲ್ ಕೊಲ್ಲಲು ಬಂದಿದ್ದೇವೆ ಎಂದು ಬಹಿರಂಗವಾಗಿ ಮನೆಯವರ ಮುಂದೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಇಸ್ಮಾಯಿಲ್ ಇಲ್ಲದ ಕಾರಣಕ್ಕೆ ಮನೆಯವರೊಂದಿಗೆ ಜಗಳ ತೆಗೆದಿದ್ದಾರೆ. ಇದರಿಂದ ಆತಂಕಗೊಂಡ ಕುಟುಂಬಸ್ಥರಿಂದ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಈ ಕುರಿತು ಇಂದು ರಾತ್ರಿ ಇಸ್ಮಾಯಿಲ್ ಅವರು ಸುದ್ದಿಗೋಷ್ಠಿ ಕರೆದಿದ್ದಾರೆ. ತಮಗೆ ರಕ್ಷಣೆ ಬೇಕು, ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ಪೊಲೀಸರ ಬಳಿ ಅವರು ಮನವಿ ಮಾಡಿದ್ದಾರೆ.
ಒಟ್ಟು ಸುಮಾರು 18-20 ವರ್ಷದ ಹುಡುಗರು ಮನೆಗೆ ನುಗ್ಗಿ ನನ್ನ ಹುಡುಕಾಡಿದ್ದಾರೆ. ಹಲ್ಲೆಗೆ ಪ್ಲಾನ್ ಮಾಡಿಕೊಂಡು ಬಂದಿದ್ದಾರೆ. ಕೊಲ್ಲುವುದಾಗಿ ಮನೆಯವರ ಮುಂದೇ ಹೇಳಿದ್ದಾರೆ. ಈ ಪುಂಡ ಗ್ಯಾಂಗ್ ಮೊದಲಿಗೆ ಅಂಜುಮನ್ ಸಂಸ್ಥೆಯ ಕಚೇರಿ ಬಳಿ ನನಗಾಗಿ ತಡಕಾಡಿದೆ. ನಂತರ ಮನೆಗೆ ನುಗ್ಗಿದ್ದು, ನಾನು ಇಲ್ಲದ್ದಕ್ಕೆ ನನ್ನ ಕುಟುಂಬಸ್ಥರೊಂದಿಗೆ ಗಲಾಟೆ ಮಾಡಿಕೊಂಡಿದ್ದಾರೆ. ನನ್ನ ಕುಟುಂಬ ಭಯದಲ್ಲಿದೆ.
ಮುಸ್ಲಿಂ ನಾಯಕನಿಗೆ ಮುಸ್ಲಿಂ ಪುಂಡರಿಂದಲೇ ಸ್ಕೆಚ್
ನನ್ನ ಹೊಡೆಯಲು ಬಂದವರು ಮುಸ್ಲಿಂ ಹುಡುಗರು ಎಂಬುದು ಗೊತ್ತಾಗಿದೆ. ದುಷ್ಕರ್ಮಿಗಳಿಂದ ನಮಗೆ ಜೀವ ಬೆದರಿಕೆ ಇದೆ. ಮಣಕಿಲ್ಲಾ, ರಸೂಲಪುರ ಗಲ್ಲಿಯಲ್ಲಿ ಚಾಕು ಹಿಡಿದುಕೊಂಡು ನಿನ್ನೆ ಓಡಾಡಿದ್ದಾರೆ. ಪೊಲೀಸರು ಮತ್ತು ಪೊಲೀಸ್ ಕಮಿಷನರ್ ಮೇಲೆ ನಂಬಿಕೆ ಇದ್ದು, ಈ ಕುರಿತು ಸೂಕ್ತ ತನಿಖೆ ನಡೆಸಿ ನಮಗೆ ನ್ಯಾಯ ಕೊಡಿಸುವ ಜೊತೆಗೆ ರಕ್ಷಣೆ ನೀಡಬೇಕು ಎಂದಿದ್ದಾರೆ.

ಧಾರವಾಡ ಜಿಲ್ಲೆ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಶಾಂತಿ ಸುವ್ಯವಸ್ಥೆ ಹದಗೆಟ್ಟಿದೆ. ನಾನು ಯಾರೊಂದಿಗೆ ವೈಯಕ್ತಿಕ ದ್ವೇಷ ಮಾಡಿಕೊಂಡಿಲ್ಲ. ಹೀಗಿದ್ದರು ಆ 18 ರಿಂದ 20 ವರ್ಷ ವಯೋಮಾನದ ಹುಡುಗರ ಗುಂಪು ಜೀವ ಬೆದರಿಕೆ ಹಾಕಿದೆ. ನಾಣು ಮನೆಯಲ್ಲೇ ಇದ್ದಿದ್ದರೆ ಏನೆಲ್ಲ ಅನಾಹುತಗಳು ಸಂಭವಿಸುತ್ತಿದ್ದವು ಎಂದು ನೆನೆಸಿಕೊಂಡರೆ ಭಯವಾಗುತ್ತದೆ.
ಒಂದಷ್ಟು ಬಡ ಕುಟುಂಬದ ಹುಡುಗರ ಕಷ್ಟಕ್ಕೆ ಸಹಾಯ ಮಾಡಿದ್ದೇನೆ. ಆ ಹುಡುಗರ ತಪ್ಪಿಲ್ಲದೇ ಇರಬಹುದು ಆದರೆ ಹಿಂದೆ ಇರೋರು ಯಾರು ಎಂದು ಪತ್ತೆ ಆಗಬೇಕು. ನನ್ನ ಬಳಿ ಇರುವ ಎಲ್ಲ ಮಾಹಿತಿ, ಕಾಲ್ ಡಿಟೇಲ್ಸ್ ಅನ್ನು ಪೊಲೀಸರಿಗೆ ನೀಡುತ್ತೇನೆ. ಸೂಕ್ತ ತನಿಖೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಮುಸ್ಲಿಂ ಹುಡುಗರಿಂದ ಹೊಡೆಸಲು ಪ್ಲಾನ್
ಈಗತಾನೇ ಹದಿ ಹರೆಯಕ್ಕೆ ಬಂದ ಮುಸ್ಲಿಂ ಹುಡುಗರಿಂದ ನನಗೆ ಸ್ಕೆಚ್ ಹಾಕಲಾಗಿದೆ. ನಶೆಯಲ್ಲಿರುವ ಹುಡುಗರಿಂದ ಹೊಡೆಸಬೇಕು ಪ್ಲಾನ್ ಮಾಡಿಕೊಳ್ಳಲಾಗಿದೆ. ನನ್ನ ಹೊಡೆಸಿದ ನಂತರ ಆ ಹುಡುಗರನ್ನು ಎನ್‌ಕೌಂಟರ್ ಮಾಡಿಸಬೇಕೆಂದು ಯೋಜಿಸಿದಂತಿದೆ. ಒಂದು ವೇಳೆ ನನ್ನ ಜೀವಕ್ಕೆ ಏನಾದರೂ ಆದರೆ ಇಂಥವರೆ ಕಾರಣ ಎಂದು ಮನೆಯಲ್ಲಿ ಹೇಳಿಟ್ಟಿದ್ದೇನೆ ಎಂದು ಇಸ್ಮಾಯಿಲ್ ತಿಳಿಸಿದ್ದಾರೆ.
ಅವಳಿನಗರ ಜನರಲ್ಲಿ ಆತಂಕ
ಹುಬ್ಬಳ್ಳಿ ಧಾರವಾಡ ಕಳೆದ ಮೂರು ನಾಲ್ಕು ತಿಂಗಳಲ್ಲಿ ಕೊಲೆ, ಕಳ್ಳತನ, ಅತ್ಯಾಚಾರದಂತ ಅಪರಾಧ ಕೃತ್ಯಗಳಿಂದಳೇ ಮುನ್ನೆಲೆಗೆ ಬರುತ್ತಿದೆ. ಈ ಕಾರಣದಿಂದ ಸರ್ಕಾರ ಅವಳಿನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹೆಣಗಾಡುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಇದಾಗಿ ಪೊಲೀಸರ ವರ್ಗಾವಣೆಯಂತಹ ಒಂದಷ್ಟು ಬದಲಾವಣೆಗಳಾದರೂ ಇಲ್ಲಿ ಯಾವುದು ಬದಲಾಗಿಲ್ಲ. ಇಲ್ಲಿನ ನಿವಾಸಿಗಳು ಆತಂಕದಲ್ಲಿಯೇ ಬದುಕಬೇಕಾದ ಅನಿವಾರ್ಯತೆ ಸೃಷ್ಟಿಯಾಗಿಬಿಟ್ಟಿದೆ.












Click it and Unblock the Notifications