ಫೆಬ್ರವರಿ 14ರಿಂದ ಧಾರವಾಡ ರಂಗಾಯಣದಲ್ಲಿ ಬಹುಭಾಷಾ ನಾಟಕೋತ್ಸವ: ಇಲ್ಲಿದೆ ವಿವರ
ಧಾರವಾಡ, ಫೆಬ್ರವರಿ 10: ಫೆಬ್ರವರಿ 14ರಿಂದ ಫೆಬ್ರವರಿ 19ರವರೆಗೆ ಆರು ದಿನ ಧಾರವಾಡದ ಪಂ. ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಬಹುಭಾಷಾ ನಾಟಕೋತ್ಸವ ಆಯೋಜಿಸಿದೆ ಎಂದು ರಂಗಾಯಣದ ನಿರ್ದೇಶಕ ರಾಜು ತಾಳಿಕೋಟಿ ಹೇಳಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕನ್ನಡದ ಜೊತೆಗೆ ಹಿಂದಿ, ಮರಾಠಿ, ಮಲೆಯಾಳಂ ಭಾಷೆಯ ನಾಟಕಗಳ ಮೂಲಕ ಹೆಣ್ಣಿನ ಅಸ್ಮಿತೆಯ ಹೋರಾಟ, ಕಲಾವಿದನ ಅಸ್ಮಿತೆಯ ಬಿಕ್ಕಟ್ಟು, ಮನುಷ್ಯ ನಾಗುವುದೆಂದರೆ ಸಹಜ-ಸರಳ ವಾಗಿರುವುದು ಎಂಬ ಸಂದೇಶ ನೀಡುವ ನಾಟಕಗಳನ್ನು ಆಯ್ದುಗೊಳ್ಳಲಾಗಿದೆ. ನಾಟಕೋತ್ಸವಕ್ಕೆ ಖ್ಯಾತ ನಾಟಕಕಾರ, ಸಾಹಿತಿ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಫೆಬ್ರವರಿ 14ರಂದು ಸಂಜೆ 6ಕ್ಕೆ ಉದ್ಘಾಟಿಸಲಿದ್ದಾರೆ ಎಂದರು.

ಜಡಭರತ ಎಂದ ಖ್ಯಾತನಾಮ ಜಿ.ಬಿ. ಜೋಶಿ ಅವರು ಕನ್ನಡ ಪ್ರಮುಖ ನಾಟಕಕಾರರಲ್ಲಿ ಒಬ್ಬರು. ಅವರ ಸತ್ತವರ ನೆರಳು ನಾಟಕವನ್ನು ಬಿ.ವಿ. ಕಾರಂತರು ಹೊರತುಪಡಿಸಿ ಮತ್ತಾರು ನಿರ್ದೇಶಿಸಲು ಸಾಧ್ಯವಾಗಿಲ್ಲ. ಈ ನಾಟಕವನ್ನು ಇದೀಗ ಕಾರಂತರ ಶಿಷ್ಯರಲ್ಲಿ ಒಬ್ಬರು ಪ್ರಯತ್ನಿಸಿದ್ದಾರೆ. ರಂಗಾಯಣದ ಬಹುಭಾಷಾ ನಾಟಕೋತ್ಸವದಲ್ಲಿ ಫೆಬ್ರವರಿ 17ರಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಒಟ್ಟು 20 ಪ್ರದರ್ಶನ ಹಮ್ಮಿಕೊಳ್ಳಲು ಯೋಜಿಸಲಾಗಿದೆ.
ಶ್ವೇತಾ ಶ್ರೀನಿವಾಸ ನಿರ್ದೇಶನದ 'ಇದ್ದಾಗ ನಿಮ್ದು ಕದ್ದಾಗ ನಮ್ಮು' ಕನ್ನಡ ನಾಟಕವನ್ನು ಬೆಂಗಳೂರಿನ ಶ್ರೀನಿವಾಸ ತಂಡವು ಪ್ರದರ್ಶಿಸಲಿದೆ. ಫೆ. 19ರಂದು ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಆಶೀಫ್ ಕ್ಷತ್ರೀಯ ಮತ್ತು ಶ್ವೇತಾ ಶ್ರೀನಿವಾಸ ನಿರ್ದೇಶ ನದ ಧರ್ಮ ನಟಿ ಕನ್ನಡ ನಾಟಕವನ್ನು ಬೆಂಗಳೂರಿನ ರಂಗರಥ ಟ್ರಸ್ಟ್ ಪ್ರಸ್ತುತಪಡಿಸಲಿದೆ ಎಂದು ತಾಳಿಕೋಟಿ ತಿಳಿಸಿದರು.
ರಂಗಾಯಣದ ಆಡಳಿತಾಧಿಕಾರಿ ಶಶಿಕಲಾ ಹುಡೇದ ಮಾತನಾಡಿ, ನಾಟಕ ಕಟ್ಟುವಲ್ಲಿ ಬಹುದೊಡ್ಡ ಶ್ರಮವಿದೆ. ಆದ್ದರಿಂದ ಪ್ರತಿ ನಾಟಕಕ್ಕೂ 100 ಪ್ರವೇಶ ದರ ಹಾಗೂ ಆರು ನಾಟಕಗಳಿಗಾಗಿ 500 ರೂಪಾಯಿ ದರ ನಿಗದಿ ಪಡಿಸಲಾಗಿದೆ. ಎಲ್ಲ ನಾಟಕಗಳು ಪ್ರತಿದಿನ ಸಂಜೆ 6.30ಕ್ಕೆ ಪ್ರದರ್ಶನಗೊಳ್ಳಲಿವೆ. ನಾಟಕದ ಪೂರ್ವದಲ್ಲಿ ಪ್ರತಿದಿನ ಮಧುರವೇಣಿ ನೃತ್ಯಾಲಯ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ನೃತ್ಯ ಪ್ರದರ್ಶನವಿರುತ್ತದೆ ಎನ್ನುವ ಮಾಹಿತಿ ನೀಡಿದರು.












Click it and Unblock the Notifications