Vinay Kulkarni: ಧಾರವಾಡ ಜಿಲ್ಲೆಗೆ ಪ್ರವೇಶ ಕೋರಿ ಶಾಸಕ ವಿನಯ್ ಕುಲಕರ್ಣಿ ಅರ್ಜಿ: ವಿಚಾರಣೆ ಮುಂದೂಡಿಕೆ
ಹುಬ್ಬಳ್ಳಿ, ಡಿಸೆಂಬರ್, 11: ಧಾರವಾಡ ಜಿಲ್ಲೆ ಪ್ರವೇಶ ಕೋರಿದ್ದ ಧಾರವಾಡ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಬಳಿಕ ಸಿಬಿಐಗೆ ನೋಟಿಸ್ ಜಾರಿಗೊಳಿಸಿದೆ. ಜನವರಿ 17ಕ್ಕೆ ವಿಚಾರಣೆ ಮುಂದೂಡಲಾಗಿದೆ.
ಜನಪ್ರತಿನಿಧಿಯಾಗಿರುವ ಹಿನ್ನೆಲೆ ಧಾರವಾಡ ಪ್ರವೇಶಕ್ಕೆ ಅನುಮತಿ ಕೋರಿದ್ದರು. ಇದಕ್ಕೂ ಮೊದಲು ಚುನಾವಣೆಗೆ ಸ್ಪರ್ಧಿಸಿದ್ದಾಗ ಧಾರವಾಡ ಪ್ರವೇಶಕ್ಕೆ ಅನುಮತಿ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿತ್ತು. ಭಾರತೀಯ ಜನತಾ ಪಕ್ಷದ ಮುಖಂಡ ಹಾಗೂ ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯತ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣ ಸಂಬಂಧ ಸಾಕ್ಷಿ ನಾಶಗೊಳಿಸುವ ಸಾಧ್ಯತೆ ಹಿನ್ನೆಲೆ ವಿನಯ್ ಕುಲಕರ್ಣಿ ಅವರಿಗೆ ಧಾರವಾಡ ಪ್ರವೇಶ ನಿರ್ಬಂಧಿಸಲಾಗಿದೆ.

ಹಲವು ಬಾರಿ ಪ್ರವೇಶ ಕೋರಿ ಕೋರ್ಟ್ಗೆ ಮನವಿ ಸಲ್ಲಿಸಿದರೂ ಕುಲಕರ್ಣಿಗೆ ಅನುಮತಿ ಸಿಗುತ್ತಿಲ್ಲ. ಇತ್ತೀಚೆಗೆ ನಡೆದ ವಿಚಾರಣೆಯಲ್ಲಿ ಷರತ್ತು ಸಡಿಲಿಕೆ ಕೋರಿದ್ದ ಅರ್ಜಿಯನ್ನು ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿತ್ತು. ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದಾಗಲೂ ಷರತ್ತು ಸಡಿಲಿಸಿಲ್ಲ. ಚುನಾವಣೆ ವೇಳೆಯೂ ಕ್ಷೇತ್ರ ಭೇಟಿಗೆ ಅನುಮತಿ ನಿರಾಕರಿಸಲಾಗಿತ್ತು. ಈಗಾಗಲೇ ಸಾಕ್ಷಿಗಳ ಮೇಲೆ ಪ್ರಭಾವ ಬೀರಿದ ಗುರುತರ ಆರೋಪ ಶಾಸಕ ವಿನಯ್ ಕುಲಕರ್ಣಿ ಮೇಲಿದೆ.
ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶಗೌಡ ಗೌಡರ್ ಅವರನ್ನು ಜೂನ್ 2016ರಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 2020ರಲ್ಲಿ ವಿನಯ್ ಕಲಕರ್ಣಿ ಅವರನ್ನು ಬಂಧಿಸಲಾಗಿತ್ತು. ಅಲ್ಲದೆ, ಧಾರವಾಡ ಜಿಲ್ಲೆಗೆ ಪ್ರವೇಶಿಸದಂತೆ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು. ಒಂದು ವೇಳೆ ಧಾರವಾಡಕ್ಕೆ ತೆರಳಿದರೆ ಜಾಮೀನು ರದ್ಧುಪಡಿಸುವುದಾಗಿ ಕೋರ್ಟ್ ಎಚ್ಚರಿಕೆ ಕೂಡ ನೀಡಿತ್ತು. ಇದರಿಂದಾಗಿ ಮತ್ತೇ ವಿನಯ್ ಕುಲಕರ್ಣಿ ಅವರಿಗೆ ಹಿನ್ನಡೆ ಆಗಿದೆ.
ಯಡಿಯೂರಪ್ಪ ಭೇಟಿ ಮಾಡಿದ ಬಿಜೆಪಿ ನಿಯೋಗ
ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯುಡಿಯೂರಪ್ಪ ಅವರ ಆಹ್ವಾನದ ಮೇರೆಗೆ ದಾವಣಗೆರೆ ಬಿಜೆಪಿಯ ಪ್ರಮುಖ ನಾಯಕರ ನಿಯೋಗವು ಸೋಮವಾರ ಬೆಂಗಳೂರಿನಲ್ಲಿ ಭೇಟಿ ಮಾಡಿದೆ.
ಜಗಳೂರಿನ ಮಾಜಿ ಶಾಸಕ, ದಾವಣಗೆರೆ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಟಿ. ಗುರುಸಿದ್ದನಗೌಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕ ಮಾಡಾಳು ವಿರುಪಾಕ್ಷಪ್ಪ, ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಆಕಾಂಕ್ಷಿ, ಆರೈಕೆ ಆಸ್ಪತ್ರೆ ಮುಖ್ಯಸ್ಥ ಡಾ.ರವಿಕುಮಾರ್ ಟಿ.ಜಿ, ಮತ್ತು ಮಾಡಾಳು ಮಲ್ಲಿಕಾರ್ಜುನ್ ಸೇರಿದಂತೆ ದಾವಣಗೆರೆ ಜಿಲ್ಲೆಯ ಪ್ರಮುಖರು ಬಿಎಸ್‌ವೈ ಅವರನ್ನು ಭೇಟಿ ಮಾಡಿ ಹಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕರಾಗಿ ಬಿ.ವೈ.ವಿಜಯೇಂದ್ರ ಇತ್ತೀಚೆಗೆ ಜವಾಬ್ದಾರಿ ವಹಿಸಿಕೊಂಡಿದ್ದು, ಶೀಘ್ರವೇ ದಾವಣಗೆರೆ ಜಿಲ್ಲೆಯ ಎಲ್ಲ ನಾಯಕರಿಗೂ ಪಕ್ಷದ ಶಿಸ್ತಿನ ಪಾಠ ಮಾಡಲಿದ್ದಾರೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಮಾಜಿ ಶಾಸಕ ಗುರುಸಿದ್ದನಗೌಡ ಮಾತನಾಡಿ, ಕೆಲ ದಿನಗಳ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೇ ನೇರವಾಗಿ ನನ್ನ ಮೊಬೈಲ್‌ಗೆ ಕರೆ ಮಾಡಿ ಮಾತನಾಡಿಸಿದರು. ಪಕ್ಷವನ್ನು ಇಷ್ಟು ವರ್ಷ ಕಟ್ಟಿ ಬೆಳಸಿದ ಎಲ್ಲ ಹಿರಿಯರಿಗೂ ಧನ್ಯವಾದ ಹೇಳಲು ಕರೆ ಮಾಡಿರುವುದಾಗಿ ತಿಳಿಸಿದರು. ಜಿಲ್ಲಾ ಮಟ್ಟದಲ್ಲಿ ಕೆಲವರ ನಡವಳಿಕೆ ಸಣ್ಣ ಬೇಸರ ಮೂಡಿಸಿದರೂ, ಪಕ್ಷಕ್ಕಾಗಿ ಶ್ರಮಿಸಿದ ನನ್ನನ್ನು ರಾಷ್ಟ್ರೀಯ ಮಟ್ಟದ ನಾಯಕರೇ ಸ್ಮರಿಸಿ, ಅಭಿಮಾನ ವ್ಯಕ್ತಪಡಿಸಿದ್ದು ಖುಷಿ ನೀಡಿತು ಎಂದು ಹೇಳಿದರು.
ಬಿಜೆಪಿಯನ್ನು ನಾಲ್ಕೈದು ದಶಕಗಳ ಕಾಲ ಕಟ್ಟಿ ಬೆಳೆಸಿದ ಗುರುಸಿದ್ದನಗೌಡರಿಗೆ ಇತ್ತೀಚಿಗೆ ಅಪಮಾನ ಆಗುವಂತೆ ನಡೆಸಿಕೊಳ್ಳಲಾಗಿದೆ. ಗುರುಸಿದ್ಧನಗೌಡರು ಮತ್ತು ಡಾ.ರವಿಕುಮಾರ್ ಅವರೊಂದಿಗೆ ಎಂದೆಂದಿಗೂ ನಾವು ಇದ್ದೇವೆ. ಜೊತೆಗೆ, ಇತ್ತೀಚಿನ ದಿನಗಳಲ್ಲಿ ದಾವಣಗೆರೆ ಜಿಲ್ಲಾ ಬಿಜೆಪಿಯಲ್ಲಿ ಗುಂಪುಗಾರಿಕೆ, ಸ್ವಜನ ಪಕ್ಷಪಾತ ಮತ್ತು ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಯಡಿಯೂರಪ್ಪ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ತಿಳಿಸಿದರು.












Click it and Unblock the Notifications