ಕರ್ನಾಟಕ ಸಿಎಂ ರೇಸ್‌ಗೆ ಇಳಿದ್ರಾ ಸಚಿವ ಜಮೀರ್ ಅಹ್ಮದ್ ಖಾನ್!, ಅವರೇ ಕೊಟ್ರು ಅಚ್ಚರಿ ಹೇಳಿಕೆ
ಧಾರವಾಡ, ಸೆಪ್ಟಂಬರ್ 02: ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಎರಡು ಬಣ ಇದೆ ಎಂಬ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಡಾ ಹಗರಣ ಆರೋಪ ಎದುರಿಸುತ್ತಿದ್ದಾರೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಪರ ಮಾತನಾಡುವ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಇದೀಗ ತಾವು ಸಿಎಂ ಆಗುವ ಆಸೆಯ ಬಗ್ಗೆ ಮಾತನಾಡಿದ್ದಾರೆ.
ಕಾಂಗ್ರೆಸ್‌ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಅನೇಕ ನಾಯಕರು ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲ ತಮ್ಮ ಆಸೆಯನ್ನು ವ್ಯಕ್ತಪಡಿಸುವುದು ಸಾಮಾನ್ಯವಾಗಿದೆ. ಇತ್ತೀಚೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅವರು ಸಹ ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರದ್ದು ತಪ್ಪಿಲ್ಲ. ಅವರು ಒಪ್ಪಿದರೆ ನಾನೇ ಸಿಎಂ ಆಗುತ್ತೇನೆ ಎಂದು ಅಚ್ಚರಿಕೆ ಹೇಳಿಕೆ ನೀಡಿದ್ದರು. ಅವರ ಬೆನ್ನಲ್ಲೆ ಜಮೀರ್ ಅಹ್ಮದ್ ಅವರು ಅಂತದ್ದೇ ಹೇಳಿಕೆ ಕೊಟ್ಟಿದ್ದಾರೆ.

ನನಗೂ ಸಹ ಸಿಎಂ ಆಗುವ ಆಸೆ ಇದೆ
ಧಾರವಾಡದಲ್ಲಿ ಸೋಮವಾರ ಮಾತನಾಡಿದ ಅವರು, ಈ ರಾಜ್ಯದ ಮುಖ್ಯಮಂತ್ರಿ ಆಗಲು ಯಾರಿಗೆ ಆಸೆ ಇರುವುದಿಲ್ಲ!, ಎಲ್ಲರಿಗೂ ಸಿಎಂ ಆಗುವ ಆಸೆ ಇದ್ದೇ ಇರುತ್ತದೆ. ನನಗೂ ಕೂಡ ಆ ಆಸೆ ಇದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಮಾಜಿ ಸಚಿವ ಆರ್.ವಿ.ದೇಶಪಾಂಡೆಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರು 8-9 ಬಾರಿ ಶಾಸಕರಾದವರು. ಅವರೂ ತಾವು ರಾಜ್ಯ ಮುಖ್ಯಮಂತ್ರಿ ಆಗಬೇಕೆಂದ ಆಸೆ ಹೊಂದಿದ್ದಾರೆ. ಅಂತಹ ಆಸೆ ಇಟ್ಟುಕೊಳ್ಳುವುದರಲ್ಲಿ ತಪ್ಪೇನಿದೆ? ನನಗೂ ಕೂಡ ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇದೆ. ಎಲ್ಲರಂತೆ ನನಗೂ ಆಸೆ ಇದೆ. ಅದರಲ್ಲಿ ತಪ್ಪಿಲ್ಲ. ದೇಶಪಾಂಡೆ ಅವರು ತಮ್ಮ ಅಭಿಪ್ರಾಯ ಹೇಳಿಕೊಂಡಿದ್ದಾರೆ. ಆದರೆ ಸದ್ಯಕ್ಕೆ ಮುಖ್ಯಮಂತ್ರಿಗಳ ಖುರ್ಚಿ ಖಾಲಿ ಇಲ್ಲ ಎಂದು ತಿಳಿಸಿದರು.

ಚಾಮರಾಜನಗರಕ್ಕೆ ಹೋಗಿ ಬಂದೆ ಏನಾಯ್ತು?
ನಾನೂ ಸಹ ಅನೇಕ ಬಾರಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗಿದ್ದೇನೆ. ಚಾಮರಾಜನಗರಕ್ಕೆ ಹೋದರೆ ಅಧಿಕಾರ ಕೆಳೆದುಕೊಳ್ಳುತ್ತಾರೆ ಎಂಬ ಮೂಡನಂಭಿಕೆ ಇದೆ. ನಾನು ಅಲ್ಲಿಗೆ ಹೋಗಿದ್ದರಿಂದ ಏನಾದರೂ ಆಗಿದೆಯಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಬೇಟಿ ಬಗ್ಗೆ ಅವರು ಪ್ರತಿಕ್ರಿಯಿಸಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನಿವೇಶನ ಹಂಚಿಕೆಯಲ್ಲಿ ಮುಖ್ಯಮಂತ್ರಿಗಳ ಪಾತ್ರ ಇಲ್ಲ ಎಂದು ಪುನರುಚ್ಚರಿಸಿರುವ ಸಚಿವ ಜಮೀರ್ ಅಹ್ಮದ್ ಅವರು, ಇದು ಎಚ್‌ಡಿಕೆಗೂ ಗೊತ್ತು. ಹೀಗಾಗಿ ಅವರು ಮೊದಲು ಬಿಜೆಪಿ ಪಾದಯಾತ್ರೆಗೆ ಹೋಗುವುದಿಲ್ಲ ಎಂದಿದ್ದರು.
ಪ್ರಕರಣದಲ್ಲಿ ಸಿಎಂ ಪಾತ್ರ ಇಲ್ಲ: ಜಮೀರ್
ಬಿಜೆಪಿ ಹೈಕಮಾಂಡ್ ಹೇಳಿದ್ದಕ್ಕೆ ಪಾದಯಾತ್ರೆಗೆ ಮಾಡಿದ್ದರು. ಪ್ರಾಸಿಕ್ಯೂಷನ್ ಅನುಮತಿ ನೀಡಿರುವ ಪ್ರಕರಣದಲ್ಲಿ ಏನೂ ಆಗುವುದಿಲ್ಲ. ರಾಜ್ಯಪಾಲರ ವಕೀಲರು ಸಿದ್ದರಾಮಯ್ಯ ಬೇನಾಮಿ ಆಸ್ತಿ ಮಾಡಿದ್ದಾರೆ ಎನ್ನುವಂತೆ ವಾದ ಮಾಡಿದ್ದಾರೆ. ಅದರಲ್ಲಿ ಸಿದ್ದರಾಮಯ್ಯನವರ ಪಾತ್ರವೇ ಇಲ್ಲವೇ ಇಲ್ಲ ಎಂದು ತಿಳಿಸಿದರು.
1935ರಲ್ಲೇ ಈ ಜಮೀನು ತೆಗೆದುಕೊಳ್ಳಲಾಗಿದೆ. ಲಿಂಗ ಎನ್ನುವವರು ಜಮೀನು ತೆಗೆದುಕೊಂಡಿದ್ದರು. ಆ ನಂತರ ದೇವರಾಜ್ ಎಂಬುವವರ ಪಾಲು ಬರುತ್ತದೆ. 2004 ರಲ್ಲಿ ಸಿದ್ದರಾಮಯ್ಯ ಅವರ ಬಾಮೈದುನನಿಗೆ ಕೊಡಲಾಗುತ್ತದೆ. ಆ ಬಳಿಕ ಅವರು ತಮ್ಮ ಅಕ್ಕನಿಗೆ ಗಿಫ್ಟ್ ಕೊಟ್ಟಿದ್ದಾರೆ. ಅದನ್ನು ಸೈಟ್ ಮಾಡಿದ್ದಾರೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಿಯು ನಿವೇಶನ ಕೊಡಿ ಎಂದು ಪತ್ರ ಬರೆದಿಲ್ಲ ಎಂದು ಅವರು ವಿವರಿಸಿದರು.
ಸಿಎಂ ಬದಲಾವಣೆ ಪ್ರಸ್ತಾವ ಇಲ್ಲ
ರಾಜ್ಯಪಾಲರು ಪ್ರಾಸಿಕ್ಯೂಷನ್ ಕೊಟ್ಟಿಲ್ಲ ಎಂದು ರಾಜ್ಯಪಾಲರು ಮೌಖಿಕವಾಗಿ ನಮಗೆ ಹೇಳಿದ್ದಾರೆ. ಇನ್ನೂ ಎರಡೂವರೆ ವರ್ಷದ ಬಳಿಕ ರಾಜ್ಯ ಸರ್ಕಾರದಲ್ಲಿ ಸಿಎಂ ಬದಲಾವಣೆ ಇಲ್ಲ. ಈಗ ಸಿಎಂ ಖುರ್ಚಿ ಖಾಲಿ ಇಲ್ಲ. ಸಿಎಂ ಬದಲಾವಣೆ ಬಗ್ಗೆ ಪಕ್ಷದಲ್ಲಿ ಪ್ರಸ್ತಾವವೇ ಇಲ್ಲ ಎಂದು ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದರು.
ಬಿಜೆಪಿ ಅವಧಿಯಲ್ಲಿನ ಕೋವಿಡ್ ಹಗರಣ ಒಂದೇ ಮಾತ್ರವಲ್ಲ ಅನೇಕ ಹಗರಣಗಳು ನಡೆದಿವೆ. ಅಂದು ನಾವು ಮೌನವಾಗಿದ್ದೇ ತಪ್ಪು. ಸದ್ಯ ಅವುಗಳನ್ನೆಲ್ಲ ತೆಗೆಯುತ್ತೇವೆ. ದ್ವೇಷದ ರಾಜಕಾರಣ ಮಾಡಿದವರು ಯಾರು? ಸಿದ್ದರಾಮಯ್ಯ ಎಂದೂ ಭಯ ಬೀಳುವುದಿಲ್ಲ. ಅವರದ್ದು ಹಗರಣದಲ್ಲಿ ಯಾವ ಪಾತ್ರ ಇಲ್ಲ ಎಂದು ತಿಳಿಸಿದರು.












Click it and Unblock the Notifications