ಧಾರವಾಡ: ಚುನಾವಣೆಗೆ ಸ್ಪರ್ಧಿಸಲು ಮನಗುಂಡಿಯ ಸ್ವಾಮೀಜಿ ಸಜ್ಜು
ಹುಬ್ಬಳ್ಳಿ, ಅಕ್ಟೋಬರ್ 18: ಧಾರವಾಡ ಜಿಲ್ಲೆಯ ಮನಗುಂಡಿಯ ಬಸವಾನಂದ ಸ್ವಾಮೀಜಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಲಘಟಗಿ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಕೇವಲ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸುವುದಷ್ಟೇ ಅಲ್ಲದೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಈ ಸಂಬಂಧ ಪತ್ರವನ್ನೂ ಸಹ ಬರೆದಿದ್ದಾರೆ.
ಧಾರವಾಡ ತಾಲೂಕಿನ ಮನಗುಂಡಿಯಲ್ಲಿ ಗುರು ಬಸವ ಮಹಾಮನೆ ಆಶ್ರಮ ಹೊಂದಿರುವ ಸ್ವಾಮೀಜಿ ಮನಗುಂಡಿ ಕಲಘಟಗಿ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಹೀಗಾಗಿ, ಈ ಕ್ಷೇತ್ರದಿಂದ ನಾನೂ ಸಹ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ಹೊಂದಿದ್ದೇನೆ ಎಂದು ಅಮಿತ್ ಶಾಗೆ ಪತ್ರದಲ್ಲಿ ತಿಳಿಸಿದ್ದಾರೆ.
ಮೂರು ಪುಟಗಳ ತಮ್ಮ ಸುದೀರ್ಘ ಪತ್ರದಲ್ಲಿ ಇತ್ತೀಚೆಗೆ ಉತ್ತರ ಪ್ರದೇಶದ ರಾಜಕೀಯದಲ್ಲಾಗಿರುವ ಬದಲಾವಣೆಗಳನ್ನು ಪ್ರಸ್ತಾಪಿಸಿರುವ ಸ್ವಾಮೀಜಿ ಕರ್ನಾಟಕದಲ್ಲಿ ಪಕ್ಷದ ಟಿಕೆಟ್ ನೀಡೋದಕ್ಕೆ ಯಾವ ರೀತಿಯ ಮಾನದಂಡಗಳನ್ನು ಹಾಕಬೇಕು ಅನ್ನೋದನ್ನು ತಿಳಿಸಿದ್ದಾರೆ.

ಟಿಕೆಟ್ ಕೊಡುವ ಮುಂಚೆ ಆಕಾಂಕ್ಷಿ ಅಭ್ಯರ್ಥಿಗಳಿಗೆ ಒಂದು ಪರೀಕ್ಷೆ ನಡೆಸಬೇಕು. ಆ ಪರೀಕ್ಷೆಗೆ ತಲಾ ಒಂದು ಲಕ್ಷ ರೂಪಾಯಿ ಶುಲ್ಕ ಇಡಬೇಕು. ಅದಕ್ಕಾಗಿಯೇ ಒಂದು ಪರೀಕ್ಷಾ ಸಮಿತಿ ರಚಿಸಬೇಕು.
ದೇಶಭಕ್ತಿ, ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ವಿದ್ಯಮಾನಗಳ ಅರಿವು, ಬಿಜೆಪಿ ನಡೆದು ಬಂದ ದಾರಿ ಹಾಗೂ ಪ್ರಾದೇಶಿಕ ವಿಷಯಗಳ ಕುರಿತು ಪ್ರಶ್ನೆಗಳಿರಬೇಕು. ಇದಕ್ಕಾಗಿಯೇ ಒಂದು ಪುಸ್ತಕ ಪ್ರಕಟಿಸಿದ್ರೂ ಸೂಕ್ತವೇ! ಈ ರೀತಿ ಮಾಡೋದಿಂದ್ರ 224 ಕ್ಷೇತ್ರಗಳಿಗೆ ಏನಿಲ್ಲವೆಂದ್ರು ಸಾವಿರದ ಐನೂರಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆಯಬಹುದು.
ಇದರಿಂದ ಪಕ್ಷದ ಖಜಾನೆಗೂ 15ರಿಂದ 20 ಕೋಟಿ ರೂಪಾಯಿ ಸಂಗ್ರಹವಾಗುತ್ತೆ. ಅಲ್ಲದೇ ಒಳ್ಳೆಯ ಅಭ್ಯರ್ಥಿಗಳು ಸಹ ಕಣದಲ್ಲಿರುತ್ತಾರೆ ಅನ್ನೋ ಸುದೀರ್ಘವಾದ ಸಲಹೆಗಳನ್ನು ಸ್ವಾಮೀಜಿ ಅಮಿತ್ ಶಾಗೆ ತಿಳಿಸಿದ್ದಾರೆ.












Click it and Unblock the Notifications