ಬಿ.ಡಿ ಜತ್ತಿ ಪುತ್ರ ಸೇರಿ ಮೂವರಿಗೆ ಗೌರವ ಡಾಕ್ಟರೇಟ್ ನೀಡಿದ ಕರ್ನಾಟಕ ವಿಶ್ವವಿದ್ಯಾಲಯ
ಧಾರವಾಡ, ಅಕ್ಟೋಬರ್ 30: ಭಾರತದ ಮಾಜಿ ಉಪರಾಷ್ಟ್ರಪತಿ ದಿವಂಗತ ಬಿ.ಡಿ ಜತ್ತಿ ಅವರ ಪುತ್ರ ಅರವಿಂದ ಜತ್ತಿ ಸೇರಿದಂತೆ ಮೂವರಿಗೆ ಧಾರವಾಡದ ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಿದೆ.
ವಚನ ಸಾಹಿತ್ಯದಲ್ಲಿ ಸಾಕಷ್ಟು ಹೆಸರು ಮತ್ತು ಸಾಧನೆ ಮಾಡಿರುವ ಅರವಿಂದ ಜತ್ತಿ ಅವರಿಗೆ ಕವಿವಿಯು ಗೌರವ ಡಾಕ್ಟರೇಟ್ ನೀಡಿದೆ. ಇವರ ಜೊತೆಗೆ ಸಾಮಾಜಿಕ ಕ್ರಾಂತಿ ಮೂಲಕ ಹೆಸರು ಮಾಡಿರುವ ಹಾಗೂ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿರುವ ಅರ್ಚನಾ ಸುರಾನಾ ಹಾಗೂ ಶೈಕ್ಷಣಿಕ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡರುವ ಅನಿವಾಸಿ ಭಾರತೀಯರಾದ ರವಿಶಂಜರ್ ಬೋಪಳಾಪುರ ಅವರಿಗೂ ಕವಿವಿಯು ಗೌರವ ಡಾಕ್ಟರೇಟ್ ನೀಡಿದೆ.

ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಹಾಗೂ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ ಅವರು ಮೂವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.
ಕನ್ನಡ ಅಧ್ಯಯನದಲ್ಲಿ 9 ಚಿನ್ನದ ಪದಕ
ಸೋಮವಾರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆದ 73ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ವಿವಿಧ ವಿಷಯಗಳಲ್ಲಿ ಅತ್ಯುತ್ತಮ ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಿದರು.
ಪ್ರಮುಖವಾಗಿ ಕನ್ನಡ ಅಧ್ಯಯನದಲ್ಲಿ ವಿಶಿಷ್ಠ ಸಾಧನೆ ಮಾಡಿದ ನೇಹಾ ಸಜ್ಜಲಿ ಎಂಬ ವಿದ್ಯಾರ್ಥಿನಿ ಒಟ್ಟು 9 ಚಿನ್ನದ ಪದಕ ಪಡೆದರೆ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಸಾಧನೆ ಮಾಡಿದ ದಾದಾಗೌಡ ಪಾಟೀಲ 9 ಚಿನ್ನದ ಪದಕ ಪಡೆದಿದ್ದಾರೆ. ಜೊತೆಗೆ ಶುಭಾ ಹೆಗಡೆ ಜೀವ ರಸಾಯನಶಾಸ್ತ್ರ ವಿಭಾಗದಲ್ಲಿ 8 ಚಿನ್ನದ ಪದಕ ಪಡೆದು ಅತೀ ಹೆಚ್ಚು ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಾಗಿ ಹೊರಹೊಮ್ಮಿದ್ದಾರೆ.
ಇನ್ನೂ ಅನೇಕ ವಿದ್ಯಾರ್ಥಿಗಳು 1,2,3,4,5,6 ಚಿನ್ನದ ಪದಕ ಪಡೆದು ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಇನ್ನು ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು, ಈ ಸಾಧನೆ ಹಿಂದೆ ತಮ್ಮ ತಂದೆ, ತಾಯಿಯ ಪರಿಶ್ರಮ ಸಾಕಷ್ಟಿದೆ. ಅವರು ಬೆನ್ನೆಲುಬಾಗಿ ನಿಲ್ಲದೇ ಹೋಗಿದ್ದರೆ ಈ ಸಾಧನೆ ಅಸಾಧ್ಯವಾಗುತ್ತಿತ್ತು. ಶಿಕ್ಷಕರು ಕೂಡ ನಮಗೆ ಮಾರ್ಗದರ್ಶನ ಮಾಡಿ ಸಾಧನೆ ಮಾಡುವಂತೆ ಮಾಡಿದ್ದಾರೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಒಟ್ಟಾರೆ 73ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳು ಚಿನ್ನದ ನಗೆ ಬೀರಿ ತಮ್ಮ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿಕೊಂಡಿದ್ದಾರೆ. ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂತು.












Click it and Unblock the Notifications