ಪೆನ್‌ಡ್ರೈವ್ ಪ್ರಕರಣದಲ್ಲಿ ಕೇಂದ್ರದ ಸಹಾಯ ಕೇಳಿಲ್ಲ: ಜೂನ್ 5ರಂದು ಏನಾಗಲಿದೆ? ಪ್ರಹ್ಲಾದ್ ಜೋಶಿ ಹೇಳಿದ್ರು ಭವಿಷ್ಯ
ಹುಬ್ಬಳ್ಳಿ, ಮೇ 07: ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ವಿದೇಶದಿಂದ ಕರೆತರಲು ರಾಜ್ಯ ಸರ್ಕಾರ ಕೇಂದ್ರದ ಸಹಾಯ ಕೇಳಿದ್ದು ಸುಳ್ಳು ಎಂದು ಕೇಂದ್ರ ಸಚಿವ ಹಾಗೂ ಧಾರವಾಡ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿಯವರು ಹೇಳಿದರು.
ಹುಬ್ಬಳ್ಳಿಯಲ್ಲಿ ಮತದಾನ ಬಳಿಕ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಪೆನ್‌ಡ್ರೈವ್ ವಿಚಾರವಾಗಿ ಮಾತನಾಡಿದ ಅವರು, ಪ್ರಕರಣದ ಹಿಂದೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೈವಾಡವಿದೆ ಎಂದು ಕೆಲವರು ಆರೋಪಿಸಿದ್ದಾರೆ. ಈ ವಿಚಾರವಾಗಿಯೂ SIT ತನೆಖೆ ನಡೆಸಬೇಕು. ಕರ್ನಾಟಕ ರಾಜ್ಯ ಸರ್ಕಾರ ಪ್ರಕರಣವನ್ನು CBI ಗೆ ವಹಿಸಲು ಹಿಂದೇಟು ಹಾಕುತ್ತಿದೆ ಎಂದು ಅವರು ಆರೋಪಿಸಿದರು.

ಪ್ರಕರಣ CBIಗೆ ನೀಡುತ್ತಿಲ್ಲ ಏಕೆ?
ಇವರೂ ಏನೋ ತಪ್ಪು ಮಾಡಿರಬಹುದು. ಹೀಗಾಗಿ ಪ್ರಕರಣವನ್ನು ಸಿಬಿಐಗೆ ನೀಡುತ್ತಿಲ್ಲ. ಪ್ರಕರಣದ ಸಮಗ್ರ ತನಿಖೆ ಹಾಗೂ ಸತ್ಯಾಸತ್ಯತೆಯ ನಿಖತರೆಯ ದೃಷ್ಟಿಯಿಂದ ಪ್ರಕಣವನ್ನು ಸಿಬಿಐಗೆ ವಹಿಸಬೇಕು ಎಂದು ಅವರು ಆಗ್ರಹಿಸಿದರು.
ಸಿಬಿಐಗೆ ಪ್ರಕರಣ ವಹಿಸಿ ಇಲ್ಲವೇ ಸಂಬಂಧಿಸಿದವರು ನೇರವಾಗಿ ನ್ಯಾಯಾಲಯದ ಮೊರೆ ಹೋಗಬೇಕು. ಇದರ ವಿನಃ ಕೇಂದ್ರ ಸರ್ಕಾರ ನೇರವಾಗಿ ಭಾಗಿ ಆಗಲು ಸಾಧ್ಯವಿಲ್ಲ. ಪ್ರಜ್ವಲ್ ವಿಚಾರದಲ್ಲಿ ಪಕ್ಷಪಾತ ಮಾಡುವ ಪ್ರಶ್ನೆಯೇ ಇಲ್ಲ. ಪ್ರಜ್ವಲ್ ರೇವಣ್ಣ ಅವರನ್ನು ವಿದೇಶದಿಂದ ಕರೆತರಲು ರಾಜ್ಯ ಸರ್ಕಾರ ಕೇಂದ್ರದ ಸಹಾಯ ಕೇಳಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಈ ಎಲ್ಲ ಕರ್ಮ ಕಾಂಡಗಳು ನಡೆದಿದೆ. ಅಲ್ಲದೆ, ನೀವು ಅಧಿಕಾರಕ್ಕೆ ಬಂದು ವರ್ಷ ಕಳೆದಿದೆ. ಇಷ್ಟು ದಿನ ಕತ್ತೆ ಕಾಯುತ್ತಿದ್ದೀರಾ? ಎಂದು ಜೋಶಿಯವರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಜೂನ್ 5ರಂದು ಮತ್ತೆ ಪ್ರಧಾನಿ ಮೋದಿ ಸರ್ಕಾರ
ಇಂದು ಧಾರವಾಡದಲ್ಲಿ ಮತದಾನ ನಡೆಯುತ್ತಿದ್ದು, ಬೆಳಗ್ಗೆಯಿಂದಲೇ ಜನ ಮತಗಟ್ಟೆಗಳತ್ತ ಆಗಮಿಸಿ ಉತ್ಸಾಹದಿಂದ ಮತದಾನ ಮಾಡುತ್ತಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜೂನ್ 5ರಂದು ಮೂರನೇ ಬಾರಿಗೆ ಅಧಿಕಾರ ವಹಿಸಿಕೊಳ್ಳಲಿದೆ ಎಂದು ಅವರು ಭವಿಷ್ಯ ನುಡಿದರು.
ದೇಶದ ಭವಿಷ್ಯ ನಿರ್ಮಾಣ ಮಾಡುವಂತಹ ಕಾಲಘಟ್ಟವನ್ನು ಎಲ್ಲರೂ ಬಳಸಿಕೊಳ್ಳಬೇಕು. ಬಹುದೊಡ್ಡ ಸಂಖ್ಯೆಯಲ್ಲಿತದಾನ ಮಾಡುವ ಮೂಲಕ ಪ್ರಜಾ ಪ್ರಭುತ್ವ ಹಬ್ಬವನ್ನು ಯಶಸ್ವಿಗೊಳಿಸುವಂತೆ ಮತದಾರರಲ್ಲಿ ಅವರು ಮನವಿ ಮಾಡಿದರು.
ಧಾರವಾಡದಲ್ಲಿ ಕಪ್ಪು ಚುಕ್ಕೆ ಇಲ್ಲದ ಕೆಲಸ
ಉತ್ತರ ಕರ್ನಾಟಕದ 14ಕ್ಕೆ 14ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ. ಕಳೆದ ನಾಲ್ಕು ಬಾರಿಗಿಂತ ಅತೀ ಹೆಚ್ಚು ಮತಗಳ ಅಂತರದಿಂದ ಮತದಾರರು ನನ್ನನ್ನು ಅಭೂತ ಪೂರ್ವಕವಾಗಿ ಆಯ್ಕೆ ಮಾಡಿದ್ದಾರೆ. ವೈಯಕ್ತಿಕವಾಗಿ ನಾನು ಯಾವುದೇ ಕಪ್ಪು ಚುಕ್ಕೆ ಇಲ್ಲದ ರೀತಿಯಲ್ಲಿ ರಾಜಕೀಯ ಮಾಡಿದ್ದೇನೆ.
ಚುನಾವಣೆಗಳು ಬಂದಾಗ ಆರೋಪ ಪ್ರತ್ಯಾರೋಪಗಳು ಸಹಜ. ಆದರೆ, ವೈಯಕ್ತಿಕ ತೇಜೋವಧೆ ಮಾಡುತ್ತಿದ್ದಾರೆ. ಇವೆಲ್ಲವುಗಳನ್ನೂ ಮೀರಿ ನಾನು 4ಚುನಾವಣೆಗಳನ್ನು ಗೆದ್ದಿದ್ದೇನೆ. ಈ ಬಾರಿಯೂ ಧಾರವಾಡದಲ್ಲಿ ಜನರು ಬಿಜೆಪಿ ಗೆಲ್ಲಿಸಲಿದ್ದಾರೆ ಎಂದು ಅವರು ಹೇಳಿದರು.












Click it and Unblock the Notifications