ಕಳಸಾ ಬಂಡೂರಿ: ಧಾರವಾಡ ಬಿಎಸ್ಸೆನ್ನೆಲ್ ಕಚೇರಿಗೆ ಬೀಗ
ಹುಬ್ಬಳ್ಳಿ, ಜನವರಿ,11: ಕಳಸಾ ಬಂಡೂರಿ ಯೋಜನೆ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ ಚುನಾಯಿತ ಪ್ರತಿನಿಧಿಗಳ ಧೋರಣೆ ಖಂಡಿಸಿ ಮಹಾದಾಯಿ ಕಳಸಾ ಬಂಡೂರಿ ಹೋರಾಟ ಕೇಂದ್ರ ಸಮನ್ವಯ ಸಮಿತಿಯ ಸದಸ್ಯರು ಸೋಮವಾರ ಧಾರವಾಡದಲ್ಲಿ ಭಾರತ ಸಂಚಾರಿ ನಿಗಮ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಮಹಾದಾಯಿ ಕಳಸಾ ಬಂಡೂರಿ ಹೋರಾಟ ಕೇಂದ್ರ ಸಮನ್ವಯ ಸಮಿತಿ ಸಂಚಾಲಕ ಬಸವರಾಜ ದೇವರು ಮಾತನಾಡಿ, 'ಕುಡಿಯುವ ನೀರಿಗಾಗಿ ನಿರಂತರ ನಾಲ್ಕುವರೆ ತಿಂಗಳಿಂದ ಹುಬ್ಬಳ್ಳಿ ಧಾರವಾಡದ ಜನರು ಹೋರಾಟ ನಡೆಸುತ್ತಿದ್ದಾರೆ. ಆದರೆ ಚುನಾಯಿತ ಪ್ರತಿನಿಧಿಗಳು ತಮ್ಮ ಬೇಜವಾಬ್ದಾರಿ ಪ್ರದರ್ಶಿಸಿ ಪ್ರಜಾಪ್ರಭುತ್ವಕ್ಕೆ ಅವಮಾನಿಸಿದ್ದಾರೆ' ಎಂದು ಕಿಡಿ ಕಾರಿದರು.[ಏನಿದು ಕಳಸಾ-ಬಂಡೂರಿ ಯೋಜನೆ?]

ಸಮಿತಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಬಕ್ಕಾಯಿ ಮಾತನಾಡಿ,' ಮಹಾದಾಯಿ ಕುಡಿಯುವ ನೀರಿಗಾಗಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಬೆಳಗಾವಿ, ಧಾರವಾಡ, ಬಾಗಲಕೋಟ, ಗದಗ ರೈತರು ಹೋರಾಟ ಮಾಡುತ್ತಿದ್ದರೂ ಸಹ ಜನ ಪ್ರತಿನಿಧಿಗಳು ಕಣ್ಣಿದ್ದು ಕುರುಡರಂತೆ, ಕಿವಿ ಇದ್ದು ಕಿವುಡರಂತೆ ವರ್ತಿಸುತ್ತಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಿ ಈ ಸಮಸ್ಯೆ ಬಗೆಹರಿಸಿ ಉತ್ತರ ಕರ್ನಾಟಕಕ್ಕೆ ಮಹಾದಾಯಿ ಯೋಜನೆ ಜಾರಿಗೊಳಿಸಿ ಕುಡಿಯಲು ನೀರು ದೊರೆಯುವಂತೆ ಮಾಡಿಕೊಡಬೇಕು ಎಂದು ಹೇಳಿದರು.[ಉತ್ತರ ಕರ್ನಾಟಕದ ಸಮಸ್ಯೆ ತಿಳಿಸಲಿದೆ 'ಮಹಾಮರಣ' ಸಾಕ್ಷ್ಯಚಿತ್ರ]
ಕರ್ನಾಟಕ ರಾಜ್ಯಸೇನೆ ಪ್ರಧಾನ ಕಾರ್ಯದರ್ಶಿ ಶಂಕರ ಅಂಬಳೆ ಅವರು ಮಾತನಾಡುತ್ತ ರಕ್ಷಣಾ ಮಂತ್ರಿ ಮನೋಹರ ಪರಿಕರ ಅವರು ಇಡೀ ದೇಶದ ಮಂತ್ರಿಯಾಗಿ ವರ್ತಿಸಬೇಕೇ ವಿನಃ ಕೇವಲ ಗೋವಾ ರಕ್ಷಣಾ ಮಂತ್ರಿಗಳಾಗಬಾರದು. 210 ಟಿಎಮ್ ಸಿ ಮಹಾದಾಯಿ ನೀರು ಅನಾವಶ್ಯಕವಾಗಿ ಹರಿದು ಸಮುದ್ರ ಸೇರುತ್ತಿದೆ. ಸದರಿ ನೀರಿನಲ್ಲಿ 50 ಟಿ.ಎಮ್.ಸಿ ನೀರು ಮಲಪ್ರಭೆಗೆ ಜೋಡಿಸಿದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿದಂತಾಗುತ್ತದೆ ಎಂದರು.
ಪ್ರತಿಭಟನೆಯಲ್ಲಿ ಸಮಿತಿ ಅಧ್ಯಕ್ಷ ಸಲೀಂ ಸಂಗನಮಲ್ಲ, ಹೋರಾಟಗಾರ ಮಾರುತಿ ನಾಯಕ, ಶರೀಪ್ ಅಮ್ಮಿನಭಾವಿ, ಶರಣಪ್ಪ ಹೊಸಮನಿ, ಬಾಲಚಂದ್ರ ಸುರಪುರ, ಸಂತೋಷ ಹೊನ್ನತ್ತಿ, ಶ್ರೀರಕ್ಷಾ ಜಾಗೀರದಾರ, ಸಿ.ಎನ್. ಆಲೂರ, ಯಲ್ಲಪ್ಪ ಹೆಬ್ಬಳ್ಳಿ, ಶಂಕರ ನೀರಾವರಿ, ಕೆ.ಪಿ. ಹೆಗ್ಗಪ್ಪನವರ ಮುಂತಾದವರು ಭಾಗವಹಿಸಿದರು.












Click it and Unblock the Notifications