ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ ಎಚ್. ಎಚ್. ಕೋನರಡ್ಡಿ
ಧಾರವಾಡ, ಡಿಸೆಂಬರ್ 15; ಜೆಡಿಎಸ್ ನಾಯಕ, ಮಾಜಿ ಶಾಸಕ ಎನ್. ಎಚ್. ಕೋನರಡ್ಡಿ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರಿದರು. ಹಲವು ದಿನಗಳಿಂದ ಕಾಂಗ್ರೆಸ್ ಪರವಾಗಿ ಕೆಲಸಗಳನ್ನು ಮಾಡುತ್ತಿದ್ದ ಅವರು ಮಂಗಳವಾರ ಅಧಿಕೃತವಾಗಿ ಪಕ್ಷ ಸೇರಿದರು.
ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಎನ್. ಎಚ್. ಕೋನರಡ್ಡಿ ತಮ್ಮ ಹಲವು ಬೆಂಬಲಿಗರ ಜೊತೆ ಕಾಂಗ್ರೆಸ್ ಪಕ್ಷ ಸೇರಿದರು. ಅಧಿವೇಶನದ ಪ್ರಯಕ್ತ ಎಲ್ಲಾ ಕಾಂಗ್ರೆಸ್ ನಾಯಕರು ಅಲ್ಲಿಯೇ ಇರುವುದರಿಂದ ಪಕ್ಷ ಸೇರ್ಪಡೆ ಕಾರ್ಯಕ್ರಮ ಅಲ್ಲಿಯೇ ಆಯೋಜಿಸಲಾಗಿತ್ತು.
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಮುಂತಾದ ನಾಯಕರು ಪಕ್ಷದ ಬಾವುಟ ನೀಡಿ ಎನ್. ಎಚ್. ಕೋನರಡ್ಡಿಯನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಕೋನರಡ್ಡಿ ಬರಮಾಡಿಕೊಂಡ ಬಳಿಕ ಮಾತನಾಡಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, "ಕೋನರಡ್ಡಿ ಕಾಂಗ್ರೆಸ್ ಸೇರ್ಪಡೆಯಾಗಿರುವುದು ಅವರ ರಾಜಕೀಯ ಜೀನವನಕ್ಕೆ ದೊಡ್ಡ ತಿರುವು ನೀಡಲಿದೆ. ಜೆಡಿಎಸ್ ರಾಜ್ಯವ್ಯಾಪಿ ನೆಲೆ ಹೊಂದಿಲ್ಲ. ಅದು ಕೆಲವೇ ಜಿಲ್ಲೆಗೆ ಮಾತ್ರ ಸೀಮಿತ ಪಕ್ಷವಾಗಿದೆ" ಎಂದರು.
ಹಲವಾರು ಜೆಡಿಎಸ್ ನಾಯಕರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಮಾಜಿ ಪರಿಷತ್ ಸದಸ್ಯ ಸಿ. ಆರ್. ಮನೋಹರ್ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದರು. ಚಾಮುಂಡೇಶ್ವರಿ ಕ್ಷೇತ್ರ ಶಾಸಕ ಜಿ. ಟಿ. ದೇವೇಗೌಡ, ಕೋಲಾರ ಶಾಸಕ ಕೆ. ಶ್ರೀನಿವಾಸ ಗೌಡ ಕಾಂಗ್ರೆಸ್ ಸೇರುವ ತಯಾರಿಯಲ್ಲಿದ್ದಾರೆ.

ಹೈಕಮಾಂಡ್ ಗಮನಕ್ಕೆ ತರಲಾಗಿದೆ
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮಾತನಾಡಿ, "ಯಾವುದೇ ಷರತ್ತುಗಳು ಇಲ್ಲದೇ ಕೋನರಡ್ಡಿ ಅವರು ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಎಐಸಿಸಿಯ ಗಮನಕ್ಕೆ ತಂದು ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ" ಎಂದು ಹೇಳಿದರು.
"ನಾನು ಯಾರನ್ನೂ ಬಲವಂತವಾಗಿ ಕರೆಯುತ್ತಿಲ್ಲ. ನಮ್ಮ ಪಕ್ಷದ ಸಿದ್ಧಾಂತ, ನಾಯಕತ್ವ ಮೆಚ್ಚಿ ಬೇಷರತ್ತಿನಿಂದ ಪಕ್ಷಕ್ಕೆ ಬರಲು ಇಚ್ಛಿಸಿದರೆ ಅವರನ್ನು ಸೇರಿಸಿಕೊಳ್ಳುತ್ತೇವೆ. ಕೋನರಡ್ಡಿ ಹಿರಿಯ ನಾಯಕರಾಗಿದ್ದು, ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಅವರ ಸೇರ್ಪಡೆ ಬಗ್ಗೆ ಹೈಕಮಾಂಡ್ ನಾಯಕರಿಗೆ ಮಾಹಿತಿ ನೀಡಲಾಗಿದೆ" ಎಂದು ಡಿ. ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.

ಜೆಡಿಎಸ್ ಬಿಡದಿದ್ದರೆ ಸಮಸ್ಯೆ ಆಗುತ್ತದೆ
ಕಾಂಗ್ರೆಸ್ ಸೇರಿದ ಬಳಿಕ ಮಾತನಾಡಿದ ಎನ್. ಎಚ್. ಕೋನರಡ್ಡಿ, "ನನ್ನ ಹಿತೈಷಿಗಳು ಜೆಡಿಎಸ್ ಬಿಡದಿದ್ದರೆ ಸಮಸ್ಯೆ ಆಗುತ್ತದೆ ಎಂದು ಹೇಳಿದ್ದರಿಂದ ಆ ಪಕ್ಷ ಬಿಟ್ಟು ಹೊರಗೆ ಬಂದಿದ್ದೇನೆ. ಕೃಷಿ ಕಾಯ್ದೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸುವಾಗ ಕಾಂಗ್ರೆಸ್ ಪಕ್ಷ ಬೆಂಬಲ ನೀಡಿದೆ. ಕಾಂಗ್ರೆಸ್ ನಾಯಕರ ರೈತಪರ ನಿಲುವು ಮೆಚ್ಚಿ ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದೇನೆ, ಪಕ್ಷ ನೀಡುವ ಜವಾಬ್ದಾರಿ ನಿರ್ವಹಣೆ ಮಾಡುತ್ತೇನೆ" ಎಂದು ಹೇಳಿದರು.

2018ರ ವಿಧಾನಸಭೆ ಚುನಾವಣೆ ಸೋಲು
ಎನ್. ಎಚ್. ಕೋನರಡ್ಡಿ 2013ರ ಚುನಾವಣೆಯಲ್ಲಿ ಧಾರವಾಡದ ನವಲಗುಂದ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. 2018ರ ಚುನಾವಣೆಯಲ್ಲಿ 45,197 ಮತಗಳನ್ನು ಪಡೆದು ಬಿಜೆಪಿಯ ಶಂಕರ ಪಾಟೀಲ ಮುನೇನಕೊಪ್ಪ ವಿರುದ್ಧ ಸೋಲು ಕಂಡಿದ್ದರು.
ಚುನಾವಣೆಯಲ್ಲಿ ಸೋತರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಆಗ ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ಅವರನ್ನು ನೇಮಕ ಮಾಡಲಾಗಿತ್ತು.

ರಾಜೀನಾಮೆ ಕೊಟ್ಟ ಕೋನರಡ್ಡಿ
ಎನ್. ಎಚ್. ಕೋನರಡ್ಡಿಯನ್ನು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು. ಆದರೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಬಳಿಕ ಎನ್. ಎಚ್. ಕೋನರಡ್ಡಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆಗಲೇ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು. ವಿಧಾನ ಪರಿಷತ್ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದರು.












Click it and Unblock the Notifications