ರೈತರೊಂದಿಗೆ ನಾವಿದ್ದೇವೆ ಎಂದ ಧಾರವಾಡ ಜಿಲ್ಲಾಡಳಿತ: ವಿನೂತನ ಅಭಿಯಾನ
ಧಾರವಾಡ, ಏಪ್ರಿಲ್.02: ಕಳೆದ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ರಾಜ್ಯ ಸರ್ಕಾರವು ಧಾರವಾಡ ಜಿಲ್ಲೆ ಪೂರ್ಣ ಬರಪಡಿತ ಜಿಲ್ಲೆಯೆಂದು ಘೋಷಿಸಲಾಗಿದೆ. ಅಂದಿನಿಂದ ಧಾರವಾಡ ಜಿಲ್ಲಾಡಳಿತವು ಜನ, ಜಾನುವಾರುಗಳಿಗೆ ಅಗತ್ಯವಾದ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಮತ್ತು ಜನರಿಗೆ ನರೇಗಾ ಯೋಜನಯಡಿ ಉದ್ಯೋಗ ನೀಡಲು ಕಾರ್ಯಾರಂಭ ಮಾಡಿದೆ.
ಕುಡಿಯುವ ನೀರಿನ ಸಮಸ್ಯೆ ಕಂಡುಬಂದ ಗ್ರಾಮಗಳಿಗೆ ಈಗಾಗಲೇ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಜಾನುವಾರುಗಳಿಗೆ ಅಗತ್ಯವಿರುವ ಮೇವು ಸರಬರಾಜು ಮಾಡಲು ಜಿಲ್ಲೆಯ ವಿವಿಧ ಸ್ಥಳಗಳಲ್ಲಿ 7 ಮೇವು ಬ್ಯಾಂಕಗಳನ್ನು ತರೆಯಲಾಗಿದೆ. ಈಗಾಗಲೇ ರೈತರು ಮೇವು ಖರೀದಿ ಮಾಡುತ್ತಿದ್ದಾರೆ. ಆದರೂ ರೈತರಿಗೆ ಮೇವು ಬ್ಯಾಂಕ್, ಮೇವು ಮಾರಾಟದ ಬಗ್ಗೆ ಮಾಹಿತಿ ನೀಡಲು ಮತ್ತು ಬರ ಪರಿಸ್ಥಿತಿಯಲ್ಲಿ ರೈತರಿಗೆ ಧೈರ್ಯ ತುಂಬಲು ಧಾರವಾಡ ಜಿಲ್ಲಾಡಳಿತವು "ರೈತರೊಂದಿಗೆ ನಾವಿದ್ದೇವೆ" ಎಂಬ ವಿನೂತನ ಅಭಿಯಾನ ಆರಂಭಿಸಿದೆ.

ಜಿಲ್ಲೆಯ ರೈತರಿಗೆ ಕುಡಿಯುವ ನೀರು, ಜಾನುವಾರು ಮೇವು ಲಭ್ಯತೆಯ ಬಗ್ಗೆ ಮಾಹಿತಿ ನೀಡಲು ಮತ್ತು ಬರಪರಿಹಾರ ಪೂರಕ ಸೌಲಭ್ಯ ದೊರಕಿಸಲು ರೈತರೊಂದಿಗೆ ನಾವಿದ್ದೇವೆ... ಎಂಬ ವಿನೂತ ಅಭಿಯಾನ ಆರಂಭಿಸಲಾಗಿದೆ. ಕಂದಾಯ ಇಲಾಖೆ, ಪಶುಪಾಲನೆ ಇಲಾಖೆ ಹಾಗೂ ಪಂಚಾಯತ್ ರಾಜ್ಯ ಇಲಾಖೆಗಳ ಸಹಯೋಗದಲ್ಲಿ ರೈತರಿಗೆ ಸರ್ಕಾರ, ಜಿಲ್ಲಾಡಳಿತ ನಿಮ್ಮ ನೆರವಿಗೆ ಇದೆ ಎಂಬುದನ್ನು ತಿಳಿಸಲು ಈ ರೈತರೊಂದಿಗೆ ನಾವಿದ್ದೇವೆ ಎಂಬ ಅಭಿಯಾನ ಆರಂಭಿಸಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.
ಯಾವುದೇ ಒತ್ತಡಗಳಿಗೆ ಒಳಗಾಗದೇ ರೈತರು ತಮ್ಮ ಜಾನುವಾರುಗಳನ್ನು ಜೋಪಾನ ಮಾಡಬೇಕು. ಜಿಲ್ಲೆಯಲ್ಲಿ ಮುಂದಿನ 8 ವಾರಗಳಿಗೆ ಆಗುವಷ್ಟು ಮೇವು ಲಭ್ಯವಿದೆ. ರೈತರು ಸಹ ಮೇವಿನ ಬಣವೆ ಹೊಂದಿದ್ದಾರೆ. ಜಿಲ್ಲಾಡಳಿತದಿಂದ ಜಿಲ್ಲೆಯ ಎ.ಪಿ.ಎಂ.ಸಿಗಳು ಸೇರಿದಂತೆ ವಿವಿಧ 7 ಸ್ಥಳಗಳಲ್ಲಿ ಮೇವು ಬ್ಯಾಂಕ್ ಸ್ಥಾಪಿಸಲಾಗಿದೆ. ಈ ಮಾಹಿತಿಯನ್ನು ಪ್ರತಿ ರೈತರಿಗೆ ತಲುಪಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾಹಿತಿ ನೀಡಿದ್ದಾರೆ.

ಧಾರವಾಡ ತಾಲೂಕು ಆಡಳಿತದಿಂದ ಧಾರವಾಡ ಹಳೆ ಎಪಿಎಂಸಿಯ ದನಗಳ (ಮಾರಾಟ) ಸಂತೆ ಜಾಗದಲ್ಲಿ ರೈತರಿಗೆ ಧ್ವನಿವರ್ಧಕ ಬಳಸಿ ಜಾಗೃತಿ ಮೂಡಿಸುವ ಮೂಲಕ ಅಭಿಯಾನ ಆರಂಭಿಸಲಾಗಿದೆ. ಮೇವು ಲಭ್ಯತೆ, ದಾಸ್ತಾನು ಹಾಗೂ ಕುಡಿಯುವ ನೀರಿನ ಕೊರತೆ ಇಲ್ಲ ಎಂಬುವುದರ ಬಗ್ಗೆ ಸಾಕಷ್ಟು ಸಲ ಮಾಧ್ಯಮ, ಗ್ರಾಮ ಪಂಚಾಯಿತಗಳ ಮೂಲಕ ರೈತರಿಗೆ ಮಾಹಿತಿ ನೀಡಲಾಗಿದೆ. ಈಗಲೂ ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯತ ಮೂಲಕ ಗ್ರಾಮಗಳಲ್ಲಿ ಡಂಗುರ ಸಾರಿ ಸಾರ್ವಜನಿಕರಿಗೆ ಮಾಹಿತಿ ನೀಡಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.
ಜಿಲ್ಲೆಯ ಧಾರವಾಡ ತಾಲೂಕಿನ ಮಾಧನಬಾವಿಯಲ್ಲಿ ಫೆಬ್ರವರಿ 28 ರಂದು ಮೊದಲು ಮೇವು ಬ್ಯಾಂಕ್ ತೆರೆಯಲಾಗಿತ್ತು. ಧಾರವಾಡ ತಾಲೂಕಿನ ಮಾಧನಬಾವಿ, ಧಾರವಾಡ ಎಪಿಎಂಸಿ., ಹುಬ್ಬಳ್ಳಿ ತಾಲೂಕಿನ ಶರೇವಾಡ ಮತ್ತು ಶಿರಗುಪ್ಪಿ, ಕಲಘಟಗಿ ಎಪಿಎಂಸಿ, ಕುಂದಗೋಳ ಎಪಿಎಂಸಿ., ನವಲಗುಂದ ಎಪಿಎಂಸಿ ಸೇರಿ ಒಟ್ಟು 7 ಸ್ಥಳಗಳಲ್ಲಿ ರೈತರ ಬೇಡಿಕೆಯಂತೆ ಈಗಾಗಲೇ ಜಿಲ್ಲಾಡಳಿತದಿಂದ ಮೇವು ಬ್ಯಾಂಕಕ್ ತೆರೆಯಲಾಗಿದೆ.
ಧಾರವಾಡ, ಹುಬ್ಬಳ್ಳಿ ಮತ್ತು ಕಲಘಟಗಿ ಮೇವು ಬ್ಯಾಂಕ್‌ಗಳಿಂದ ಈಗಾಗಲೇ ಸುಮಾರು 38 ಜನ ರೈತರು 24.02 ಟನ್ ಮೇವು ಖರೀದಿಸಿದ್ದಾರೆ. ಮೇವು ಬ್ಯಾಂಕ್‌ಗಳಲ್ಲಿ ಒಟ್ಟು ಸಂಗ್ರಹಿತ 47.16 ಟನ್ ಮೇವಿನಲ್ಲಿ ಇನ್ನೂ 23.14 ಟನ್ ಮೇವು ಮಾರಾಟಕ್ಕೆ ಲಭ್ಯವಿದೆ. ರೈತರ ಬೇಡಿಕೆಗೆ ಅನುಗುಣವಾಗಿ ಮೇವು ಪೂರೈಸಲು ಜಿಲ್ಲಾಡಳಿತ ಸಿದ್ಧವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಪ್ರತಿ ಕೆ.ಜಿ. ಮೇವಿಗೆ ರೂ. 2 ರ ದರದಲ್ಲಿ ಗರಿಷ್ಠ 50 ಕೆಜಿ ಮೇವನ್ನು ಒಬ್ಬ ರೈತನಿಗೆ ನೀಡಲಾಗುತ್ತದೆ. ಇದನ್ನು ರೈತ ಹೊಂದಿರುವ ಜಾನುವಾರುಗಳಿಗೆ ಅನುಗುಣವಾಗಿ ನೀಡಲಾಗುತ್ತದೆ. ರೈತರು ತಮ್ಮ ಜಾನುವಾರುಗಳನ್ನು ಸಾಕಿ, ಸಲುಹಬೇಕು. ರೈತರ ಕಷ್ಟಗಳಿಗೆ ಜಿಲ್ಲಾಡಳಿತ, ತಾಲೂಕು ಆಡಳಿತ ಸದಾ ಸ್ಪಂದಿಸಿ, ಬೆನ್ನಿಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications