ಹಿಬಾಜ್; ವಿದ್ಯಾರ್ಥಿಗಳನ್ನು ಗೇಟಿನ ಹೊರಗೆ ನಿಲ್ಲಿಸಬೇಡಿ
ಧಾರವಾಡ, ಫೆಬ್ರವರಿ 18; ಹಿಜಾಬ್ ವಿವಾದ ಇನ್ನೂ ಬಗರಹರಿದಿಲ್ಲ. ಕರ್ನಾಟಕ ಹೈಕೋರ್ಟ್‌ನಲ್ಲಿ ಶುಕ್ರವಾರ ಕರ್ನಾಟ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ವಾದ ಮಂಡನೆ ಮಾಡಲಿದ್ದಾರೆ. ಮತ್ತೊಂದು ಕಡೆ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ, ತರಗತಿಗಳನ್ನು ಬಹಷ್ಕಾರ ಮಾಡಿದ್ದಾರೆ.
ಶಾಲಾ, ಕಾಲೇಜುಗಳ ಗೇಟ್ ಬಳಿ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ. ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿಗಳನ್ನು ಶಾಲಾ/ ಕಾಲೇಜು ಗೇಟು ಬಳಿ ನಿಲ್ಲಿಸಲಾಗುತ್ತಿದೆ. ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಗೇಟಗ ಬಳಿ ಪ್ರತಿಭಟನೆ ಸಹ ಮಾಡಲಾಗುತ್ತಿದೆ.
ವಿದ್ಯಾರ್ಥಿಗಳನ್ನು ಶಾಲಾ/ ಕಾಲೇಜು ಗೇಟು ಬಳಿ ನಿಲ್ಲಿಸಬೇಡಿ ಎಂದು ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ ಸೂಚನೆ ನೀಡಿದ್ದಾರೆ. ಸಮವಸ್ತ್ರ ಸಂಹಿತೆಯನ್ನು ಕಡ್ಡಾಯಗೊಳಿಸಿರುವ ಶಾಲೆ, ಕಾಲೇಜುಗಳಲ್ಲಿ ಗೇಟಿನ ಹೊರಗೆ ವಿದ್ಯಾರ್ಥಿನಿಯರನ್ನು ತಡೆದು ಹಿಜಾಬ್ ತೆಗೆಸಬಾರದು ಎಂದು ಹೇಳಿದ್ದಾರೆ.

Recommended Video
ವಿದ್ಯಾರ್ಥಿಗಳು ಆವರಣ ಪ್ರವೇಶಿಸಿದ ಬಳಿಕ ತರಗತಿಗಳಿಗೆ ತೆರಳುವ ಮುನ್ನ ಹಿಜಾಬ್ ತೆಗೆದು ವರ್ಗಕೋಣೆಗಳನ್ನು ಪ್ರವೇಶಿಸಲು ಅವಕಾಶವಿದೆ. ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳ ಮುಖ್ಯೋಪಾಧ್ಯಾಯರು, ಪ್ರಾಚಾರ್ಯರು ಈ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಿ, ವಿದ್ಯಾರ್ಥಿಗಳ ಪಾಠ, ಪ್ರವಚನಗಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಲಾಗಿದೆ.
ಶಾಲೆ/ ಕಾಲೇಜುಗಳ ಆವರಣಕ್ಕೆ ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು ಹಾಗೂ ಸಿಬ್ಬಂದಿ ಹೊರತುಪಡಿಸಿ ಇತರೆ ವ್ಯಕ್ತಿಗಳಿಗೆ ಪ್ರವೇಶ ನೀಡಬಾರದು. ಪಾಲಕರು ಊಟ, ಉಪಹಾರ ತಂದು ಕೊಡಲು ಬಂದರೆ ಗೇಟಿನ ಬಳಿಯೇ ಸ್ವೀಕರಿಸುವ ವ್ಯವಸ್ಥೆ ಮಾಡಬೇಕು ಎಂದು ತಿಳಿಸಲಾಗಿದೆ.
ಯಾವುದೇ ಕಾರಣಕ್ಕೂ ಅನ್ಯವ್ಯಕ್ತಿಗಳಿಗೆ ಶಾಲೆ/ ಕಾಲೇಜು ಆವರಣಕ್ಕೆ ಪ್ರವೇಶಿಸಲು ಅವಕಾಶ ನೀಡಬಾರದು. ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆ-ಕಾಲೇಜುಗಳ ಮುಖ್ಯೋಪಾಧ್ಯಾಯರು, ಪ್ರಾಚಾರ್ಯರು ಈ ನಿರ್ದೇಶನವನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಶಾಲಾ/ ಕಾಲೇಜುಗಳಿಗೆ ಹಿಜಾಬ್ ಧರಿಸಿ ಬರುತ್ತಿರುವ ವಿದ್ಯಾರ್ಥಿಗಳನ್ನು ಗೇಟ್ ಹೊರಗೆ ತಡೆಯಲಾಗುತ್ತಿದೆ. ಕ್ಯಾಂಪಸ್ ಪ್ರವೇಶ ಮಾಡುವಾಗ ಹಿಜಾಬ್ ತೆಗೆಯಿರಿ ಎಂದು ಸೂಚನೆ ನೀಡಲಾಗುತ್ತಿದೆ. ಇದಕ್ಕೆ ಒಪ್ಪದ ವಿದ್ಯಾರ್ಥಿಗಳನ್ನು ಗೇಟ್ ಬಳಿಯೇ ನಿಲ್ಲಿಸಲಾಗುತ್ತಿದೆ. ಹಿಜಾಬ್ ಧರಿಸಿ ತರಗತಿ ಪ್ರವೇಶ ಮಾಡಲು ಯಾರಿಗೂ ಅವಕಾಶ ನೀಡಿಲ್ಲ.
ಪ್ರವೇಶಕ್ಕೆ ನಿರ್ಬಂಧ; ಹಲವು ಜಿಲ್ಲೆಗಳಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ಹಿತದೃಷ್ಟಿಯಿಂದ ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳ ಭದ್ರತಾ ಹಿತದೃಷ್ಟಿಯಿಂದ ಹಾಗೂ ಶಾಲಾ-ಕಾಲೇಜುಗಳಲ್ಲಿ ಯಾವುದ ಅಹಿತಕರ ಘಟನೆಗಳು ನಡೆಯದಂತೆ ಕಾಲೇಜುಗಳ 200 ಮೀಟರ್ ಸುತ್ತ ಅನ್ಯರ ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ. ಕಾಲೇಜು ಗೇಟ್ ಬಳಿ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ.
ಸರ್ಕಾರಿ/ ಅನುದಾನಿತ/ ಅನುದಾನ ರಹಿತ ಕಾಲೇಜುಗಳ ಆವರಣದಲ್ಲಿ ಹಾಗೂ ಶಾಲೆಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳು ಮತ್ತು ಶಾಲಾ-ಕಾಲೇಜಿಗೆ ಸಂಬಂಧಪಟ್ಟವರನ್ನು ಹೊರತುಪಡಿಸಿ ಬೇರೆ ಯಾರೂ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ.
ಹಿಜಾಬ್ ಮತ್ತು ಕೇಸರಿ ಶಾಲನ್ನು ಧರಿಸುವ ಕುರಿತು ಯಾವುದೇ ಧರಣಿ, ಮುಷ್ಕರ, ಪ್ರತಿಭಟನೆಗಳು ಹಾಗೂ ವಿಜಯೋತ್ಸವ ನಡೆಸುವುದನ್ನು ಸಹ ನಿರ್ಬಂಧಿಸಲಾಗಿದೆ. ಶಾಲೆ/ ಕಾಲೇಜುಗಳ ಬಳಿ ಬರುವ ಪೋಷಕರನ್ನು ಪೊಲೀಸರು ವಾಪಸ್ ಕಳಿಸುತ್ತಿದ್ದಾರೆ.
ಸರ್ಕಾರದ ವಾದ ಮಂಡನೆ; ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ವಿದ್ಯಾರ್ಥಿನಿಯರು ಸಲ್ಲಿಕೆ ಮಾಡಿರುವ ಅರ್ಜಿಗಳ ವಿಚಾರಣೆ ಶುಕ್ರವಾರ ಮಧ್ಯಾಹ್ನ 2.30ಕ್ಕೆ ಮತ್ತೆ ನಡೆಯಲಿದೆ. ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದ ಮಂಡನೆ ಮಾಡಲಿದ್ದಾರೆ.
ಗುರುವಾರದ ವಿಚಾರಣೆ ವೇಳೆ ತಾಂತ್ರಿಕ ಕಾರಣಗಳನ್ನು ನೀಡಿ ಎರಡು ಮಧ್ಯಂತರ ಅರ್ಜಿಗಳನ್ನು ಕೋರ್ಟ್ ವಜಾಗೊಳಿಸಿದೆ. ವಿದ್ಯಾರ್ಥಿನಿಯರ ಪರವಾದ ವಾದ ಮಂಡನೆ ಈಗಾಗಲೇ ಮುಕ್ತಾಯಗೊಂಡಿದೆ. ಅರ್ಜಿ ವಿಚಾರಣೆ ಪೂರ್ಣಗೊಳ್ಳುವ ತನಕ ವಿದ್ಯಾರ್ಥಿಗಳು ಕೇಸರಿ ಶಾಲು, ಹಿಜಾಬ್ ಹೀಗೆ ಯಾವುದೇ ಧಾರ್ಮಿಕ ಭಾವನೆ ತಿಳಿಸುವ ಉಡುಪು ಧರಿಸಬಾರದು ಎಂದು ಕೋರ್ಟ್ ಹೇಳಿದೆ.












Click it and Unblock the Notifications