ಧಾರವಾಡ ಬಳಿ ಭೀಕರ ಅಪಘಾತ, 5 ವಿದ್ಯಾರ್ಥಿಗಳ ಸಾವು
ಧಾರವಾಡ, ಫೆ.7 : ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಜುಂಜಿನ ಬೈಲ್ ಕ್ರಾಸ್ ಬಳಿ ಲಾರಿಯೊಂದು ಮಗುಚಿಬಿದ್ದಿದ್ದರಿಂದ ಐವರು ಮಕ್ಕಳು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ 80ಕ್ಕೂ ಅಧಿಕ ಮಕ್ಕಳು ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಲಘಟಗಿ ತಾಲೂಕಿನ ಸಾತೋಶಹೀದ್ ದರ್ಗಾಕ್ಕೆ ಪ್ರವಾಸ ಹೋಗಿದ್ದ ಮಕ್ಕಳು ಅಲ್ಲಿಂದ ವಾಪಸ್ ಆಗುವಾಗ ಜುಂಜಿನ ಬೈಲ್ ಕ್ರಾಸ್ ಬಳಿ ಗುರುವಾರ ರಾತ್ರಿ ಲಾರಿ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಇದರಿಂದ ಲಾರಿಯಲ್ಲಿದ್ದ ಐವರು ಮಕ್ಕಳು ಸಾವನ್ನಪ್ಪಿದ್ದಾರೆ. ಮೃತಪಟ್ಟ ಮಕ್ಕಳ ಪೈಕಿ ಸೈಯದ್ (15) ಗುರುತು ಬಿಟ್ಟರೆ ಉಳಿದವರ ಗುರುತು ಪತ್ತೆಯಾಗಿಲ್ಲ.
ಅಪಘಾತದಲ್ಲಿ 80 ಕ್ಕೂ ಅಧಿಕ ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಶಾಲೆಯ ಪ್ರಮಾದ : ಹುಬ್ಬಳ್ಳಿ ಸಮೀಪದ ಅಂಚಟಗೇರಿಯ ಸುನ್ನಿದಾವತೆ ಇಸ್ಲಾಮಿಯಾ ಮದರಸಾದಲ್ಲಿ ಓದುತ್ತಿದ್ದ 146 ವಿದ್ಯಾರ್ಥಿಗಳನ್ನು ಗುರುವಾರ ಬೆಳಗ್ಗೆ ಪ್ರವಾಸಕ್ಕೆಂದು ಲಾರಿಯೊಂದರಲ್ಲಿ ಕಲಘಟಗಿ ತಾಲೂಕಿನ ಸಾತೋಶಹೀದ್ ದರ್ಗಾಕ್ಕೆ ಕರೆದುಕೊಂಡು ಹೋಗಲಾಗಿತ್ತು.
ಇದು ಸಾತೋಶಹೀದ್ ಮುಸ್ಲಿಂ ಧರ್ಮಗುರುಗಳ ಸಮಾಧಿ ಇರುವ ಸ್ಥಳ. ಬಸ್ ಅಥವಾ ಇತರ ವಾಹನಗಳಲ್ಲಿ ಕರೆದುಕೊಂಡು ಹೋದರೆ, ಹೆಚ್ಚು ಹಣ ನೀಡಬೇಕಾಗುತ್ತದೆ ಎಂದು ಇಟ್ಟಿಗೆ ಸಾಗಿಸುವ ಲಾರಿಯಲ್ಲಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲಾಗಿತ್ತು. ಪ್ರವಾಸ ಮುಗಿಸಿಕೊಂಡು ವಾಪಸ್ ಬರುವಾಗ ಈ ಅಪಘಾತ ಸಂಭವಿವಿದೆ.
ಶಾಲೆಯ ಆಡಳಿತ ಮಂಡಳಿ ಹಣ ಉಳಿಸಲು ಹೋಗಿ ಮಕ್ಕಳ ಪ್ರಾಣದೊಂದಿಗೆ ಚೆಲ್ಲಾಟ ವಾಡಿದೆ. ಜುಂಜಿನ ಬೈಲ್ ಕ್ರಾಸ್ ಬಳಿ ಲಾರಿ ಉರುಳಿ ಬಿದ್ದಾಗ, ಒಬ್ಬ ವಿದ್ಯಾರ್ಥಿ ಸ್ಥಳದಲ್ಲಿ ಸಾವನ್ನಪ್ಪಿದರೆ, ಉಳಿದ ನಾಲ್ವರು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಗಾಯಗೊಂಡವರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.