ಧಾರವಾಡ Lockdown; ಅಗತ್ಯ ವಸ್ತುಗಳಿಗೆ ಮಾತ್ರ ವಿನಾಯಿತಿ
ಧಾರವಾಡ, ಮಾರ್ಚ್ 23 : ಧಾರವಾಡ ಜಿಲ್ಲೆಯಲ್ಲಿ ಒಂದು ಕೋವಿಡ್-19 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಸೋಂಕು ಹರಡದಂತೆ ತಡೆಯಲು ಜಿಲ್ಲೆಯಲ್ಲಿ lockdown ಘೋಷಣೆ ಮಾಡಲಾಗಿದೆ. ಅಗತ್ಯ ವಸ್ತುಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ.
ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್ ಜಿಲ್ಲಾ ಆರೋಗ್ಯ ಕಾರ್ಯಪಡೆ ತುರ್ತು ಸಭೆ ನಡೆಸಿದರು. ಬಳಿಕ ಮಾತನಾಡಿದ ಅವರು, "ಜಿಲ್ಲೆಯಾದ್ಯಂತ ಸ್ಥಾಪಿಸಲಾಗಿರುವ ಎಲ್ಲಾ ಚೆಕ್‍ಪೋಸ್ಟ್‌ಗಳು ದಿನದ 24 ಗಂಟೆಗಳ ಕಾಲವೂ ನಿರಂತರವಾಗಿ ಕಾರ್ಯನಿರ್ವಹಿಸಬೇಕು" ಎಂದರು.
"ಅಗತ್ಯ ವಸ್ತುಗಳ ಪೂರೈಕೆ ಹೊರತುಪಡಿಸಿ ಉಳಿದ ಎಲ್ಲ ಅಂಗಡಿ ಮುಂಗಟ್ಟುಗಳು, ವ್ಯಾಪಾರ ವಹಿವಾಟುಗಳನ್ನು ಜಿಲ್ಲೆಯಾದ್ಯಂತ ಸಂಪೂರ್ಣ ನಿಷೇಧಿಸಲು ಸರ್ಕಾರ ನಿರ್ದೇಶನ ನೀಡಿದೆ" ಎಂದು ಹೇಳಿದರು.

"ನಿಯಮಾನುಸಾರ ಪರಿಣಾಮಕಾರಿ ಲಾಕ್‍ಡೌನ್ ಮಾಡಲು ಕಂದಾಯ, ಪೊಲೀಸ್, ಆರೋಗ್ಯ ಹಾಗೂ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ತಕ್ಷಣದಿಂದಲೇ ಚುರುಕಿನಿಂದ ಕರ್ತವ್ಯ ನಿರ್ವಹಿಸಬೇಕು" ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
"ಚೆಕ್‍ಪೋಸ್ಟ್‌ಗಳು ದಿನದ 24 ಗಂಟೆಗಳ ಕಾಲವೂ ನಿರಂತರವಾಗಿ ಕಾರ್ಯ ನಿರ್ವಹಿಸಬೇಕು. ಆರೋಗ್ಯ ಇಲಾಖೆ ಸಿಬ್ಬಂದಿ ಥರ್ಮಲ್ ಸ್ಕ್ರೀನಿಂಗ್ ನಡೆಸಬೇಕು. ಪೊಲೀಸರು ವಾಹನ ತಪಾಸಣೆ ಮತ್ತು ಪ್ರಯಾಣಿಕರ ಪ್ರವಾಸ ಹಿನ್ನೆಲೆ ವಿವರ ಸಂಗ್ರಹಿಸಬೇಕು. ತಲಾ 12 ತಾಸುಗಳ ಸರದಿಯಲ್ಲಿ ಸಿಬ್ಬಂದಿಯನ್ನು ನಿಯೋಜಿಸಬೇಕು" ಎಂದರು.
"ವಿದೇಶಗಳಿಂದ ಬಂದಿರುವ ವ್ಯಕ್ತಿಗಳು ಹೊರಗೆ ತಿರುಗಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ಮಾಹಿತಿಗಳು ಬರುತ್ತಿವೆ. ಆದರೆ, ಅವುಗಳಲ್ಲಿ ಬಹುತೇಕ ಖಚಿತತೆ ಇರುವುದಿಲ್ಲ. ಇವುಗಳನ್ನು ಪರಿಶೀಲಿಸಲು ಹಿರಿಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗುವುದು" ಎಂದು ವಿವರಣೆ ನೀಡಿದರು.
"ಪೊಲೀಸ್ ಇಲಾಖೆ ಸಹಕಾರದೊಂದಿಗೆ ಸರ್ಕಾರದ ಶಿಷ್ಟಾಚಾರವನ್ನು ಪಾಲಿಸಲು ಹೋಮ್ ಕ್ವಾರಂಟೈನ್ ಅವಧಿಯಲ್ಲಿ ಇರುವವರಿಗೆ ಕಟ್ಟುನಿಟ್ಟಾಗಿ ಸೂಚನೆಗಳನ್ನು ನೀಡಲು ತಂಡಗಳನ್ನು ರಚಿಸಬೇಕು. ವದಂತಿಗಳನ್ನು ಹರಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು" ಎಂದು ನಿರ್ದೇಶನ ನೀಡಿದರು.
"ಸೋಂಕು ದೃಢಪಟ್ಟಿರುವ ಪ್ರದೇಶದಲ್ಲಿ ನಿಯೋಜಿಸಲಾಗಿರುವ ಬೀಟ್ ಪೊಲೀಸರು ಹೆಚ್ಚು ಜಾಗೃತರಾಗಿ ಕಾರ್ಯನಿರ್ವಹಿಸಬೇಕು. ಅಪಾಯಕ್ಕೊಳಗಾಗಬಹುದಾದ ಸಾಧ್ಯತೆಗಳಿರುವ ಪ್ರದೇಶದಲ್ಲಿನ ವಿಚಕ್ಷಣೆಗೆ ನೋಡೆಲ್ ಅಧಿಕಾರಿಗಳನ್ನು ನೇಮಿಸಬೇಕು" ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
"ಅಗತ್ಯ ಸೇವೆಗಳನ್ನು ಹೊರತು ಪಡಿಸಿ ವ್ಯಾಪಾರ ವಹಿವಾಟುಗಳನ್ನು ನಿರ್ದಾಕ್ಷಿಣ್ಯವಾಗಿ ಸ್ಥಗಿತಗೊಳಿಸಬೇಕು. ಹವಾ ನಿಯಂತ್ರಿತ ಸೌಕರ್ಯಗಳಿರುವ ಬಟ್ಟೆ, ಚಿನ್ನಾಭರಣ ಮತ್ತಿತರ ವಾಣಿಜ್ಯ ಮಳಿಗೆಗಳ ವಹಿವಾಟು ಯಾವುದೇ ಕಾರಣಕ್ಕೂ ನಡೆಯಬಾರದು" ಎಂದರು.
"ಸರ್ಕಾರಿ ಕಚೇರಿಗಳಲ್ಲಿ 60 ವರ್ಷ ಮೀರಿದ ನಿವೃತ್ತರು ಗುತ್ತಿಗೆ ಆಧಾರದಲ್ಲಿ ಸೇವೆಸಲ್ಲಿಸುತ್ತಿದ್ದರೆ ಅವರು ಕರ್ತವ್ಯಕ್ಕೆ ಹಾಜರಾಗದಿರಲು ತಿಳಿಸಬೇಕು. ಸಾಮಾಜಿಕ ಅಂತರ, ಸ್ವಚ್ಚತೆ ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು" ಎಂದು ಜಿಲ್ಲಾಧಿಕಾರಿಗಳು ಹೇಳಿದರು.












Click it and Unblock the Notifications