ಮಹದಾಯಿ ಹೋರಾಟ : ಧಾರವಾಡ ಐಐಟಿ ಉದ್ಘಾಟನೆ ಮುಂದಕ್ಕೆ

Posted By:
Subscribe to Oneindia Kannada

ಧಾರವಾಡ, ಜುಲೈ 29 : ಮಹದಾಯಿ ಹೋರಾಟದ ಹಿನ್ನಲೆಯಲ್ಲಿ ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಉದ್ಘಾಟನೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಆದರೆ, ತರಗತಿಗಳು ಆಗಸ್ಟ್ 1ರಿಂದ ಆರಂಭವಾಗಲಿವೆ.

ಜುಲೈ 31ರಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವೆಡೇಕರ್ ಅವರು ಐಐಟಿಯನ್ನು ಉದ್ಘಾಟನೆ ಮಾಡಬೇಕಿತ್ತು ಮತ್ತು ಆಗಸ್ಟ್ 1ರ ಸೋಮವಾರದಿಂದ ತರಗತಿಗಳು ಆರಂಭವಾಗಬೇಕಿತ್ತು. ಈಗ ಉದ್ಘಾಟನಾ ಕಾರ್ಯಕ್ರಮ ಮುಂದೂಡಲಾಗಿದ್ದು, ತರಗತಿಗಳು ನಿಗದಿಯಂತೆ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.

ಕಳೆದ ವಾರ ಪತ್ರಿಕಾಗೋಷ್ಠಿ ನಡೆಸಿದ್ದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು, 'ಧಾರವಾಡದ ಜಲಸಂಪನ್ಮೂಲ ಇಲಾಖೆಯ ವಾಲ್ಮಿ ಕಟ್ಟಡದಲ್ಲಿ ಐಐಟಿಗೆ ಜುಲೈ 31ರಂದು ಪ್ರಕಾಶ್ ಜಾವೆಡೇಕರ್ ಅವರು ಚಾಲನೆ ನೀಡಲಿದ್ದು, ಆಗಸ್ಟ್‌ 1ರಿಂದ ತರಗತಿಗಳು ಆರಂಭವಾಗಲಿವೆ' ಎಂದು ಹೇಳಿದ್ದರು.[ಮಹದಾಯಿ ಹೋರಾಟದ ಚಿತ್ರಗಳು]

ಮಹದಾಯಿ ಸಮನ್ವಯ ಸಮಿತಿಯ ಸದಸ್ಯರು ಕೇಂದ್ರ ಸಚಿವ ಪ್ರಕಾಶ್ ಜಾವೆಡೇಕರ್ ಧಾರವಾಡಕ್ಕೆ ಆಗಮಿಸಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಕಾರ್ಯಕ್ರಮಕ್ಕೆ ಆಗಮಿಸುವ ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಆದ್ದರಿಂದ, ಉದ್ಘಾಟನಾ ಕಾರ್ಯಕ್ರಮವನ್ನು ಮುಂದೂಡಲಾಗಿದೆ.[ಧಾರವಾಡ ಐಐಟಿಯ ಸ್ಥಳ ಬದಲಾವಣೆ]

ಜಿಲ್ಲಾಧಿಕಾರಿಗಳಿಗೆ ಪತ್ರ

ಜಿಲ್ಲಾಧಿಕಾರಿಗಳಿಗೆ ಪತ್ರ

ಐಐಟಿ ಉದ್ಘಾಟನೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯಿಂದ ಧಾರವಾಡ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಅವರಿಗೆ ಪತ್ರ ಬಂದಿದೆ. ಆದರೆ, ಕಾರ್ಯಕ್ರಮವನ್ನು ಮುಂದೂಡಲು ಯಾವುದೇ ನಿಖರವಾದ ಕಾರಣಗಳನ್ನು ನೀಡಿಲ್ಲ.

ಜುಲೈ 31ರಂದು ಉದ್ಘಾಟನೆ ನಿಗದಿಯಾಗಿತ್ತು

ಜುಲೈ 31ರಂದು ಉದ್ಘಾಟನೆ ನಿಗದಿಯಾಗಿತ್ತು

ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು, 'ಧಾರವಾಡದ ಜಲಸಂಪನ್ಮೂಲ ಇಲಾಖೆಯ ವಾಲ್ಮಿ ಕಟ್ಟಡದಲ್ಲಿ ಐಐಟಿಗೆ ಜುಲೈ 31ರಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವೆಡೇಕರ್ ಅವರು ಚಾಲನೆ ನೀಡಲಿದ್ದಾರೆ. ಆಗಸ್ಟ್‌ 1ರಿಂದ ತರಗತಿಗಳು ಆರಂಭವಾಗಲಿವೆ' ಎಂದು ಹೇಳಿದ್ದರು.

ಗುಪ್ತಚರ ಇಲಾಖೆ ವರದಿ

ಗುಪ್ತಚರ ಇಲಾಖೆ ವರದಿ

ಉತ್ತರ ಕರ್ನಾಟಕದಲ್ಲಿ ಮಹದಾಯಿ ನ್ಯಾಯಮಂಡಳಿ ತೀರ್ಪು ವಿರೋಧಿಸಿ ಹೋರಾಟ ನಡೆಯುತ್ತಿದೆ. ರೈತರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಉದ್ಘಾಟನೆಗೆ ಕೇಂದ್ರ ಸಚಿವ ಪ್ರಕಾಶ್ ಜಾವೆಡೇಕರ್ ಸೇರಿದಂತೆ ಹಲವು ಗಣ್ಯರು ಆಗಮಿಸುತ್ತಾರೆ. ಆಗ ರೈತರು ಹೋರಾಟ ತೀವ್ರಗೊಳಿಸಬಹುದು. ರಕ್ಷಣೆ ನೀಡುವುದು ಪೊಲೀಸರಿಗೂ ಸವಾಲಾಗುತ್ತದೆ. ಆದ್ದರಿಂದ ಕಾರ್ಯಕ್ರಮ ಮುಂದೂಡುವಂತೆ ಗುಪ್ತಚರ ಇಲಾಖೆ ವರದಿ ನೀಡಿದೆ ಎಂದು ತಿಳಿದುಬಂದಿದೆ.

ತಾತ್ಕಾಲಿಕ ಕ್ಯಾಂಪಸ್

ತಾತ್ಕಾಲಿಕ ಕ್ಯಾಂಪಸ್

ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ಕಟ್ಟಡದಲ್ಲಿ ಐಐಟಿ ತಾತ್ಕಾಲಿಕ ಕ್ಯಾಂಪಸ್ ನಿರ್ಮಾಣವಾಗಿದೆ. ಈ ವರ್ಷ 120 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ. ಉದ್ಘಾಟನೆ ಕಾರ್ಯಕ್ರಮ ಮುಂದೂಡಿದರೂ ತರಗತಿಗಳು ಆಗಸ್ಟ್ 1 ರಿಂದ ಆರಂಭವಾಗಲಿವೆ. ಕಂಪ್ಯೂಟರ್ ಸೈನ್ಸ್, ಮೆಕಾನಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಕೋರ್ಸ್‌ ತರಗತಿಗಳು ಆರಂಭವಾಗಲಿದ್ದು, ಐವರು ವಿದ್ಯಾರ್ಥಿನಿಯರು ಸೇರಿ 120 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಇವರಲ್ಲಿ ಧಾರವಾಡದ ಐವರು ವಿದ್ಯಾರ್ಥಿಗಳಿದ್ದಾರೆ.

470 ಎಕರೆ ಜಮೀನು ಮಂಜೂರು

470 ಎಕರೆ ಜಮೀನು ಮಂಜೂರು

ಧಾರವಾಡ ಐಐಟಿಯ ಶಾಶ್ವತ ಕ್ಯಾಂಪಸ್‌ಗೆ 470 ಎಕರೆ ಜಮೀನು ನೀಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಕೆಲಗೇರಿ ಗ್ರಾಮದಲ್ಲಿ 470 ಎಕರೆ ಜಮೀನು ನೀಡಲಾಗುತ್ತದೆ. ಈ ಭೂಮಿಯ ಮೌಲ್ಯ ಸುಮಾರು 120 ರಿಂದ 150 ಕೋಟಿಗಳಾಗಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Dharwad Indian Institute of Technology (IIT) inauguration program postponed due to Mahadayi protest. Inauguration program shuduled on July 31, 2016. Class will commence on August 1.
Please Wait while comments are loading...