ಜೂನ್ 29ರಿಂದ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ಧಾರವಾಡ, ಜೂನ್ 27 : ಧಾರವಾಡದಲ್ಲಿ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಶುಕ್ರವಾರದಿಂದ ಎರಡು ದಿನಗಳ ಕಾಲ ನಡೆಯಲಿದೆ. ಮಾಲತಿ ಪಟ್ಟಣ ಶೆಟ್ಟಿ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್‌ನ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗರಾಜ್ ಅಂಗಡಿ ಈ ಕುರಿತು ಮಾಹಿತಿ ನೀಡಿದ್ದಾರೆ. ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಶುಕ್ರವಾರ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್, ಹಿರಿಯ ಪತ್ರಕರ್ತ ಪಾಟೀಲ್ ಪುಟ್ಟಪ್ಪ ಮುಂತಾದ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿರುವರು.

ಎರಡು ದಿನಗಳ ಸಮ್ಮೇಳನದಲ್ಲಿ ತಾಂತ್ರಿಕ ವಿಚಾರಗಳ ಬಗ್ಗೆ ಹಲವು ಗೋಷ್ಠಿಗಳು ನಡೆಯಲಿವೆ. ಸಾಹಿತ್ಯ, ಸಂಸ್ಕೃತಿ, ಕನ್ನಡ ಮತ್ತು ಕರ್ನಾಟಕದ ಪ್ರಸ್ತುತ ಸಮಸ್ಯೆಗಳ ಬಗ್ಗೆ ಹಲವು ಚರ್ಚೆಗಳು ನಡೆಯಲಿವೆ.
ಧಾರವಾಡ ಸಮಸ್ಯೆಗಳು, ಉತ್ತರ ಕರ್ನಾಟಕ ಭಾಗದ ಸಾಹಿತ್ಯ, ಉತ್ತರ ಕರ್ನಾಟಕ ಭಾಗದ ಮಹಿಳಾ ಲೇಖಕಿಯರ ಕೊಡುಗೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಗೋಷ್ಠಿಗಳನ್ನು ಆಯೋಜನೆ ಮಾಡಲಾಗಿದೆ.
ಎರಡು ದಿನದ ಸಮ್ಮೇಳನದಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ. ಶನಿವಾರ ಸಮಾರೋಪ ಸಮಾರಂಭ ನಡೆಯಲಿದೆ. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಲೇಖಕ ಪಂಚಾಕ್ಷರಿ ಹಿರೇಮಠ ವಹಿಸಿಕೊಳ್ಳಲಿದ್ದಾರೆ.












Click it and Unblock the Notifications