ಸಚಿವ ಸ್ಥಾನಕ್ಕಾಗಿ ಇನ್ನಿಲ್ಲದ ಕಸರತ್ತು: ಧಾರವಾಡದಲ್ಲಿ ಯಾರ ಪಾಲಿಗೆ ಮಂತ್ರಿ ಪಟ್ಟ?
ಧಾರವಾಡ, ಮೇ 23: 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿದೆ. ಈಗಾಗಲೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಹಲವು ಸಚಿವರು ಕೂಡ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಇನ್ನೇನಿದ್ದರೂ ಸಚಿವ ಸ್ಥಾನಕ್ಕಾಗಿ ಇನ್ನಿಲ್ಲದ ಕಸರತ್ತು ನಡೆದಿದೆ.
ಧಾರವಾಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳನ್ನು ಕಾಂಗ್ರೆಸ್ ತನ್ನ ವಶಕ್ಕೆ ಪಡೆದುಕೊಂಡಿದೆ. ಕಲಘಟಗಿಯಲ್ಲಿ ಸಂತೋಷ ಲಾಡ್, ಧಾರವಾಡ ಗ್ರಾಮೀಣದಲ್ಲಿ ವಿನಯ್ ಕುಲಕರ್ಣಿ, ಹುಬ್ಬಳ್ಳಿ, ಧಾರವಾಡ ಪೂರ್ವ ಕ್ಷೇತ್ರದಲ್ಲಿ ಪ್ರಸಾದ ಅಬ್ಬಯ್ಯ ಹಾಗೂ ನವಲಗುಂದದಲ್ಲಿ ಎನ್.ಎಚ್.ಕೋನರಡ್ಡಿ ಭರ್ಜರಿ ಗೆಲುವು ದಾಖಲಿಸಿದ್ದಾರೆ.

ಈ ಹಿಂದೆ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಸಂತೋಷ ಲಾಡ್ ಹಾಗೂ ವಿನಯ್ ಕುಲಕರ್ಣಿ ಸಚಿವರಾಗಿ ಕೆಲಸ ಮಾಡಿದ್ದರು.
ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಸಂತೋಷ ಲಾಡ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರಿಂದ ಆ ಸಚಿವ ಸ್ಥಾನ ವಿನಯ್ ಕುಲಕರ್ಣಿಗೆ ಒದಗಿ ಬಂದಿತ್ತು.
ಇದೀಗ ಈ ಇಬ್ಬರೂ ಕೂಡ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಸತತ ಮೂರು ಬಾರಿಗೆ ಸೋಲಿಲ್ಲದೇ ಗೆಲುವು ಸಾಧಿಸಿರುವ ಹುಬ್ಬಳ್ಳಿ, ಧಾರವಾಡ ಪೂರ್ವ ಕ್ಷೇತ್ರದ ಪ್ರಸಾದ ಅಬ್ಬಯ್ಯ ಕೂಡ ಈ ಬಾರಿ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿದ್ದಾರೆ. ಬಿಜೆಪಿ ತೊರೆದು ಕೈ ಹಿಡಿದಿರುವ ಮಾಜಿ ಸಿಎಂ ಜಗದೀಶ ಶೆಟ್ಟರ್ ಕೂಡ ಈ ಬಾರಿ ಸೋಲಿನ ರುಚಿ ಅನುಭವಿಸಿದ್ದು, ಅವರಿಗೆ ಕಾಂಗ್ರೆಸ್ ಪಕ್ಷ ಮಣೆ ಹಾಕುತ್ತದೆಯಾ ಎಂಬ ಲೆಕ್ಕಾಚಾರ ನಡೆದಿದೆ.

ಧಾರವಾಡ ಜಿಲ್ಲೆ ಏಳು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವುದರಿಂದ ಸಹಜವಾಗಿಯೇ ಜಿಲ್ಲೆಗೆ ಕೇವಲ ಒಂದೇ ಮಂತ್ರಿ ಸ್ಥಾನ ನೀಡಲಾಗುತ್ತದೆ. ಹೀಗಾಗಿ ಈ ಒಂದೇ ಸಚಿವ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಯಾರಿಗೆ ಮಂತ್ರಿಗಿರಿ ಒಲಿಯುತ್ತದೆ ಎಂಬುದೇ ಕುತೂಹಲದ ವಿಚಾರವಾಗಿದೆ.
ಬೆಂಗಳೂರಿನಲ್ಲೇ ಬೀಡು ಬಿಟ್ಟಿರುವ ವಿನಯ್ ಕುಲಕರ್ಣಿ ಹಾಗೂ ಸಂತೋಷ ಲಾಡ್ ಸಚಿವ ಸ್ಥಾನಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಇದರ ಮಧ್ಯೆ 15 ವರ್ಷಗಳಿಂದ ಸೋಲನ್ನೇ ಕಾಣದ ಪ್ರಸಾದ್ ಅಬ್ಬಯ್ಯ ಕೂಡ ತಮ್ಮದೇ ರೀತಿಯಲ್ಲಿ ಸಚಿವ ಸ್ಥಾನಕ್ಕೆ ಕಸರತ್ತು ನಡೆಸಿದ್ದಾರೆ. ಒಟ್ಟಾರೆ ಧಾರವಾಡ ಜಿಲ್ಲೆಯ ಮಂತ್ರಿಗಿರಿ ಯಾರಿಗೆ ಸಿಗುತ್ತದೆ ಎಂಬ ಲೆಕ್ಕಾಚಾರಗಳು ನಡೆದಿದ್ದು, ಇದಕ್ಕೆ ಕಾಂಗ್ರೆಸ್ ಪಕ್ಷದ ವರಿಷ್ಠರೇ ಇತಿಶ್ರೀ ಹಾಡಬೇಕಿದೆ.












Click it and Unblock the Notifications