ಧಾರವಾಡ: ಜೈಲಲ್ಲಿ ಮಾರಾಮಾರಿ: ಕೈದಿಗೆ ಟೈಲ್ಸ್‌ನಿಂದ ಇರಿತ: ಆಗಿದ್ದೇನು?
ಧಾರವಾಡ, ಫೆಬ್ರವರಿ 17: ವಿವಿಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿ ಶಿಕ್ಷೆಗೆ ಗುರಿಯಾಗಿ ಜೈಲು ಸೇರುವ ವ್ಯಕ್ತಿಗಳು ಜೈಲಲ್ಲೇ ಮತ್ತೆ ಖ್ಯಾತೆ ತೆಗೆದುಕೊಂಡರೆ ಏನಾಗಬಹುದು?. ಇಂತದ್ದೇ ಘಟನೆಯೊಂದು ವಿದ್ಯಾಕಾಶಿ ಧಾರವಾಡ ಜಿಲ್ಲೆಯ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.
ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ಇಬ್ಬರು ಕೈದಿಗಳ ಮಧ್ಯೆ ಭಾನುವಾರ ಜಗಳ ನಡೆದಿದೆ. ಈ ವೇಳೆ ಓರ್ವ ಕೈದಿಗೆ ಮತ್ತೊಬ್ಬ ಕೈದಿಯು ಇರಿದಿದ್ದಾನೆ. ಕೈದಿ ಸುಲೇಮಾನ್ ನನ್ನು ಇರಿತಕ್ಕೆ ಒಳಗಾದ ಕೈದಿ ಎಂದು ಗುರುತಿಸಲಾಗಿದೆ. ಪಚ್ಚಿ ಎಂಬ ಮತ್ತೊಬ್ಬ ಕೈದಿ ಸುಲೇಮಾನ್‌ಗೆ ಟೈಲ್ಸ್‌ನಿಂದ ಇರಿದಿದ್ದಾನೆ.

ಈ ಇಬ್ಬರು ಮಧ್ಯೆ ಮಾರಾಮಾರಿ ನಡೆದಿದೆ. ಘಟನೆ ವೇಳೆ ಪಚ್ಚಿ ಚಾಕು ರೀತಿಯ ಮೊಣಚು ಟೈಲ್ ನಿಂದ ಸುಲೇಮಾನ್‌ಗೆ ಇರಿದಿದ್ದು, ಸುಲೇಮಾನ್‌ಗೆ ಗಾಯಗಳಾಗಿವೆ. ಕರಾವಳಿಯ ಉಡುಪಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಚ್ಚಿ ಎಂಬಾತ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಧಾರವಾಡದ ಕೇಂದ್ರ ಕಾರಾಗೃಹ ಸೇರಿದ್ದ.
ಬಾಂಬ್ ಬ್ಲಾಸ್ಟ್ ಕೈದಿಗೆ ಇರಿತ
ಗಾಯಾಳು ಸುಲೇಮಾನ್ ಎಂಬಾತ ಬೆಂಗಳೂರು ಮಲ್ಲೇಶ್ವರಂನ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದಾನೆ. ಜೀವಾವದಿ ಶಿಕ್ಷೆಗೆ ಗುರಿಯಾಗಿರುವ ಈ ಪಚ್ಚಿ ಎಂಬಾತ ಈ ಹಿಂದೆ ಶಿವಮೊಗ್ಗ ಜೈಲಿನಲ್ಲಿದ್ದಾಗಲೂ ಸಹ ಇದೇ ರೀತಿ ತನ್ನೊಂದಿಗೆ ಇದ್ದವರ ಮೇಲೆ ಹಲ್ಲ ಮಾಡಿದ್ದರು. ಆ ಹಲ್ಲೆ ಘಟನೆ ಬಳಿಕ ಪಚ್ಚಿಯನ್ನು ಧಾರವಾಡ ಜೈಲಿಗೆ ಶಿಫ್ಟ್ ಮಾಡಲಾಗಿತ್ತು ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಜೈಲಲ್ಲಿ ಆಗಾಗ ಹಲ್ಲೆ ಮಾಡಿರುವ ಕೈದಿ ಪಚ್ಚಿ
ಧಾರವಾಡಕ್ಕೆ ಬಂದ ಮೇಲೆ ಈ ಪಚ್ಚಿ ಮಾಡಿರುವ ಈ ಹಲ್ಲೆ ಘಟನೆ ಮೂರನೇ ಬಾರಿಯದ್ದಾಗಿದೆ. ಕಳೆದ ನಾಲ್ಕು ತಿಂಗಳ ಹಿಂದೆ ಧಾರವಾಡ ಜೈಲು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಎಂದು ತಿಳಿದು ಬಂದಿದೆ. ಇಂದು ಕ್ಷುಲ್ಲಕ ಕಾರಣಕ್ಕಾಗಿ ಪಚ್ಚಿ ಸುಲೇಮಾನ್ ಎಂಬಾತನ ಮೇಲೆ ಮತ್ತೆ ಹಲ್ಲೆ ಮಾಡಿದ್ದಾನೆ.

ಇನ್ನು ಜೈಲಲ್ಲಿ ನಡೆದ ಈ ಘಟನೆಯಿಂದ ಅಕ್ಕಪಕ್ಕ ಕೈದಿಗಳು ಭಯಬೀತರಾಗಿದ್ದಾರೆ. ಘಟನೆ ಬಳಿಕ ಸ್ಥಳಕ್ಕೆ ಎಸಿಪಿ ಬಸವರಾಜ್ ಹಾಗೂ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಚ್ಚಿ ಎಂಬಾತನ ಮೇಲೆ ಉಪನಗರ ಠಾಣೆ ಪೊಲೀಸರು ದೂರು ದಾಖಲಿಸಲಾಗಿದೆ.












Click it and Unblock the Notifications