ಕೇಂದ್ರ ಸರ್ಕಾರದಿಂದ ₹1 ಲಕ್ಷ ಕೋಟಿ ವೆಚ್ಚದಲ್ಲಿ ಬಡವರಿಗೆ ಚಿಕಿತ್ಸೆ-ಸಚಿವ ಪ್ರಹ್ಲಾದ್ ಜೋಶಿ
ಧಾರವಾಡ, ಅಕ್ಟೋಬರ್ 30: ಆಯುಷ್ಮಾನ್ ಭಾರತ್ ಯೋಜನೆಯಡಿ ಕೇಂದ್ರ ಸರ್ಕಾರ ದೇಶದ ಬಡ ಜನರ ಆರೋಗ್ಯಕ್ಕೆ ₹1 ಲಕ್ಷ ಕೋಟಿ ವೆಚ್ಚ ಮಾಡಿ ಚಿಕಿತ್ಸೆ ನೀಡಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುವುದೇ ನಮ್ಮ ಧ್ಯೇಯವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಅಣ್ಣಿಗೇರಿ ತಾಲೂಕಿನ ಶಲವಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಉಚಿತ ವೈದ್ಯಕೀಯ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ದೈಹಿಕವಾಗಿ ನಾವು ಆರೋಗ್ಯವಾಗಿದ್ದೇವೆ ಎಂದುಕೊಳ್ಳುತ್ತೇವೆ. ಆದರೆ, ಆಂತರಿಕವಾಗಿ ಇರುವ ಸಮಸ್ಯೆ ಗಮನಕ್ಕೆ ಬಂದಿರುವುದಿಲ್ಲ. ಕೆಲವರು ಇದ್ದಕ್ಕಿದ್ದ ಹಾಗೆ ಹೃದಯ ಸ್ತಂಭನವಾಗಿ ಮೃತಪಡುತ್ತಾರೆ. ಯಾವುದೋ ಕಾರಣಕ್ಕೆ ಆಸ್ಪತ್ರೆಗೆ ಹೋದಾಗ, ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡಾಗ ಸಮಸ್ಯೆ ಕಂಡು ಬರುತ್ತದೆ. ಹೀಗಾಗಿ ಉಚಿತ ಶಿಬಿರದಲ್ಲಿ ಪಾಲ್ಗೊಂಡು ಆಗಾಗ ಆರೋಗ್ಯ ತಪಾಸಣೆ ಮಾಡಿಕೊಳ್ಳುತ್ತ ಇರಬೇಕು ಎಂದರು.

ನಮ್ಮ ಸಂಸ್ಥೆಯಿಂದ ಜಿಲ್ಲೆಯ ವಿವಿಧೆಡೆ ಈಗಾಗಲೇ ನೂರಾರು ಆರೋಗ್ಯ ಶಿಬಿರ ಏರ್ಪಡಿಸಿ, ಬಡ ಜನರ ಆರೋಗ್ಯಕ್ಕೆ ಒತ್ತು ನೀಡಿದ್ದೇವೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಕೆಎಲ್ಇ ಸೊಸೈಟಿ ಮೂಲಕ ನೀಡಲು ಸಿದ್ಧರಿದ್ದೇವೆ. ಈಗಾಗಲೇ ₹150 ಕೋಟಿ ವೆಚ್ಚದಲ್ಲಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ₹250 ಕೋಟಿ ವೆಚ್ಚದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಸಹ ಹುಬ್ಬಳ್ಳಿಯಲ್ಲಿ ಸ್ಥಾಪನೆಯಾಗಲಿದೆ ಎಂದು ಹೇಳಿದರು.
ಇನ್ನು ಜಿಲ್ಲೆಯಲ್ಲಿರುವ 500ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ಅಂದಾಜು ₹40 ಕೋಟಿ ವೆಚ್ಚದಲ್ಲಿ ಬಣ್ಣ ಬಳಿಯಲಾಗಿದೆ. ಕೆಲವು ಕಂಪನಿಗಳು ಸಿಎಸ್ಆರ್ ನಿಧಿಯನ್ನು ಅದಕ್ಕೆ ನೀಡುತ್ತಿದ್ದು, ಮುಂದಿನ ಆರು ತಿಂಗಳಲ್ಲಿ ಜಿಲ್ಲೆಯ ಎಲ್ಲ ಶಾಲೆಗಳಿಗೆ ಬಣ್ಣ ಬಳಿಯಲಾಗುವುದು. ಶಾಲೆಗಳಿಗೆ ಸ್ಮಾರ್ಟ್ ಬೋರ್ಡ್, ಕೊಠಡಿ, ಶೌಚಾಲಯ ನಿರ್ಮಿಸಿಕೊಡಲಾಗಿದೆ. ಹಳ್ಳಿಯ ಬಡ ಮಕ್ಕಳು ಉತ್ತಮ ವಾತಾವರಣದಲ್ಲಿ ಕಲಿಯಬೇಕು ಎನ್ನುವುದು ನಮ್ಮಧ್ಯೇಯ ಎಂದರು.
ಈ ವೇಳೆ ಉಪಸ್ಥಿತರಿದ್ದ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಮಾತನಾಡಿ, ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಯಾವುದೂ ಇಲ್ಲ. ಆರೋಗ್ಯ ಸರಿಯಿದ್ದರೆ ಏನಾದರೂ ಸಾಧನೆ ಮಾಡಬಹುದು. ಗ್ರಾಮೀಣ ಭಾಗದ ರೈತರ, ಬಡವರ ಆರೋಗ್ಯದ ದೃಷ್ಟಿಯಿಂದ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.

ಸಚಿವರಿಂದ ವೈದ್ಯರಿಗೆ ಎಚ್ಚರಿಕೆ
ಶಲವಡಿ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಆಸ್ಪತ್ರೆಗೆ ಸರಿಯಾಗಿ ಬರುತ್ತಿಲ್ಲ. ಇದರಿಂದ ತೀವ್ರ ಸಮಸ್ಯೆಯಾಗುತ್ತಿದೆ ಎಂದು ಸಚಿವ ಪ್ರಹ್ಲಾದ್ ಜೋಶಿ ಭಾಷಣ ಮಾಡುವಾಗಲೇ ಗ್ರಾಮಸ್ಥರು ದೂರು ನೀಡಿದರು. ಸಚಿವರು ವೈದ್ಯಾಧಿಕಾರಿ ಡಾ. ಅಗ್ರವಾಲ ಅವರನ್ನು ಸ್ಥಳಕ್ಕೆ ಕರೆಸಿ ತರಾಟೆಗೆ ತೆಗೆದುಕೊಂಡರು.
'ಏನು ಓದಿದ್ದೀರಿ. ಸರಿಯಾಗಿ ಕರ್ತವ್ಯ ನಿರ್ವಹಿಸಲು ಏನು ಸಮಸ್ಯೆ? ಹೀಗೆ ಮುಂದುವರಿದರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ' ಎಂದು ಎಚ್ಚರಿಸಿದರು. ನಂತರ ಗ್ರಾಮ ಪಂಚಾಯತಿ ವತಿಯಿಂದ ವೈದ್ಯರ ಕಾರ್ಯವೈಖರಿ ಕುರಿತು ತಮಗೆ ಪತ್ರ ಕಳುಹಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಜೋಶಿ ಹೇಳಿದರು.
ಈ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಡಾ. ಅಗ್ರವಾಲ 'ಅಣ್ಣಿಗೇರಿ ಮತ್ತು ಶಲವಡಿ ಎರಡೂ ಕಡೆ ಕರ್ತವ್ಯದ ಜವಾಬ್ದಾರಿಯಿದೆ. 14 ಹಳ್ಳಿ ವ್ಯಾಪ್ತಿಗೆ ಸಂಬಂಧಿಸಿ ಶವ ಪರೀಕ್ಷೆ ಹೆರಿಗೆ ಏನೇ ಇದ್ದರೂ ನಾನೇ ಹೋಗಬೇಕು. ಸಿಬ್ಬಂದಿ ಕೊರತೆ ಇರುವುದರಿಂದ ಕೆಲಸದ ಒತ್ತಡವಿದೆ. ಅನಗತ್ಯ ಆರೋಪ ಮಾಡುತ್ತಿದ್ದು ವೃತ್ತಿಗೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ' ಎಂದರು.












Click it and Unblock the Notifications