ಹುಬ್ಬಳ್ಳಿಗೆ ತಪ್ಪಿದ ಸ್ಮಾರ್ಟ್ ಸಿಟಿ, ಕಾಂಗ್ರೆಸ್ ಮೇಲೆ ಕಿಡಿಕಾರಿದ ಬಿಜೆಪಿ
ಹುಬ್ಬಳ್ಳಿ, ಫೆಬ್ರವರಿ,4: ಜಿಲ್ಲಾ ಪಾಲಿಕೆ ಸದಸ್ಯರು ಹುಬ್ಬಳ್ಳಿ-ಧಾರವಾಡಕ್ಕೆ ಸ್ಮಾರ್ಟ್ ಸಿಟಿ ಸ್ಥಾನ ಕೈತಪ್ಪಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರೇ ಕಾರಣ ಎಂದು ಆರೋಪಿಸಿ ಬುಧವಾರ ನಗರದ ಪಾಲಿಕೆ ಎದುರು ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಪಾಲಿಕೆ ಸದಸ್ಯ ಸುಧೀರ ಸರಾಫ್ ಮಾತನಾಡಿ, 'ಸ್ಮಾರ್ಟ್ ಸಿಟಿಯ ಮೊದಲ ಹಂತದ ಪಟ್ಟಿಯಲ್ಲಿ ಹುಬ್ಬಳ್ಳಿ-ಧಾರವಾಡಕ್ಕೆ ಸ್ಥಾನ ಸಿಗದಿರುವುದಕ್ಕೆ ಮುಖ್ಯಮಂತ್ರಿ ಹಾಗೂ ವಿನಯ್ ಕುಲಕರ್ಣಿ ಅವರ ನಿರ್ಲಕ್ಷ್ಯವೇ ಕಾರಣ. ಈ ಯೋಜನೆಗೆ ಸೂಕ್ತವಾದ ನೀಲನಕ್ಷೆ ತಯಾರಿಸಿಲ್ಲ, ಪೂರ್ಣಾವಧಿ ಆಯುಕ್ತರಿಲ್ಲ, ಹಾಗೂ ಸಿಬ್ಬಂದಿಗಳ ಸಂಖ್ಯೆ ಕಡಿಮೆ ಇದೆ. ಯೋಜನೆಯ ಮಾರ್ಗಸೂಚಿಗಳನ್ನು ಪೂರ್ಣಗೊಳಿಸಿಲ್ಲ. ಹಾಗಾಗಿ ಅವಳಿ ನಗರವು ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಸ್ಥಾನ ಪಡೆಯಲಿಲ್ಲ ಎಂದು ದೂರಿದರು.[20 ಸ್ಮಾರ್ಟ್ ಸಿಟಿಗಳ ಮೊದಲ ಪಟ್ಟಿಯಲ್ಲಿ ದಾವಣಗೆರೆ, ಬೆಳಗಾವಿ]

ಮನೆ ಕಸ ತುಂಬಿಸುವ ಯೋಜನೆ ಮತ್ತು ಎಸ್ ಡಬ್ಲುಎಂ ಯೋಜನೆಗಳನ್ನು ಜಾರಿಗೊಳಿಸಿಲ್ಲ ಹೀಗಾಗಿ ಮೈನಸ್ ಅಂಕಗಳು ಬಂದಿವೆ ಎಂದು ಆರೋಪಿಸಿದ ಸರಾಫ್, ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಬಿಜೆಪಿಯ ಮೇಲೆ ದೂರುತ್ತಿದ್ದಾರೆ ಎಂದರು.[ಸ್ಮಾರ್ಟ್ ಸಿಟಿಯಾಗಲಿರುವ 98 ನಗರಗಳ ಪಟ್ಟಿ]
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ತಮ್ಮ ನಡತೆ ಬದಲಾಯಿಸಿಕೊಳ್ಳಬೇಕು ಇಲ್ಲವಾದರೆ ಅವರ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಪೂರ್ಣಾ ಪಾಟೀಲ, ಸಂತೋಷ ಚವ್ಹಾಣ, ಶಿವು ಹಿರೇಮಠ, ರಂಗಾ ಬದ್ದಿ ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications